ವಾಲಿಬಾಲ್ ,ತ್ರೋಬಾಲ್, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಸ್ಫರ್ಧೆಗಳು
ಸವಣೂರು : ಅಭ್ಯುದಯ ಯುವಕ ಮಂಡಲ (ರಿ.) ಚೆನ್ನಾವರ ಪಾಲ್ತಾಡಿ ಇದರ ವತಿಯಿಂದ ಉಳ್ಳಾಕುಲು ಸೇವಾ ಸಮಿತಿ ಚೆನ್ನಾವರ ಇದರ ಸಹಯೋಗದಲ್ಲಿ 4ನೇ ವರ್ಷದ ಆಟಿದ ಕೂಟ-ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮ ಆ.10ರಂದು ಚೆನ್ನಾವರ ಗುತ್ತಿನ ಗದ್ದೆಯಲ್ಲಿ ನಡೆಯಲಿದೆ.
ಚೆನ್ನಾವರ ಉಳ್ಳಾಕುಲು ಸೇವಾ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಚೆನ್ನಾವರಗುತ್ತು ಕಾರ್ಯಕ್ರಮ ಉದ್ಘಾಟಿಸುವರು. ಕ್ರೀಡಾಂಗಣ ಉದ್ಘಾಟನೆಯನ್ನು ಅಬುದಾಭಿ ಇಂಡಿಯನ್ ಸ್ಕೂಲ್, ಅಬುದಾಭಿಯ ದೈಹಿಕ ಶಿಕ್ಷಣ ನಿರ್ದೇಶಕ ದಿನೇಶ್ ಎನ್.ಸುವರ್ಣ ನೆರವೇರಿಸುವರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡುವರು. ಅಧ್ಯಕ್ಷತೆಯನ್ನು ಚೆನ್ನಾವರ ಉಳ್ಳಾಕುಲು ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಸುಬ್ರಾಯ ಗೌಡ ವಹಿಸುವರು.ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್.ಸೇರಿದಂತೆ ಹಲವರು ಉಪಸ್ಥಿತರಿರುವರು.
ಮಧ್ಯಾಹ್ನ ನಡೆಯುವ ಸಭಾ ಕಾರ್ಯಕ್ರಮವನ್ನು ಮಾಜಿ ಸಂಸದ, ಉಳ್ಳಾಕುಲು ದೈವಸ್ಥಾನ ಚೆನ್ನಾವರದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ವಹಿಸುವರು. ಕೃಷಿಕ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ,ಮರಳು ವ್ಯಾಪಾರಸ್ಥರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಮೆದು ,ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷೆ ಇಂದಿರಾ ಬಿ.ಕೆ.,ಯುವಜನ ಒಕ್ಕೂಟದ ಜಿಲ್ಲಾಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಸಹಿತ ಹಲವರು ಪಾಲ್ಗೊಳ್ಳುವರು.
ಈ ಸಂದರ್ಭದಲ್ಲಿ ಬಾಬು ಬಿ., ಗ್ರಾಮ ಸಹಾಯಕರು ಪಾಲ್ತಾಡಿ, ಸಾಧಕ ವಿದ್ಯಾರ್ಥಿಗಳಾದ ಸರಿತಾ , ಸ್ಮಿತಾ ಯು.,ಮೆಸ್ಕಾಂ ಸಿಬಂದಿಗಳಾದ ರಂಜಿತ್ ಸುವರ್ಣ,ಮೌನೇಶ್, ಮಹಾದೇವಪ್ಪ ಅವರಿಗೆ ಅಭಿನಂದನೆ ನಡೆಯಲಿದೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ ಬಹುಮಾನ ವಿತರಿಸುವರು.ಅಧ್ಯಕ್ಷತೆಯನ್ನು ಕೆಯ್ಯೂರು ಗ್ರಾ.ಪಂ.ಅಧ್ಯಕ್ಷೆ ಶರತ್ ಕುಮಾರ್ ಮಾಡಾವು ವಹಿಸುವರು. ವಿವಿಧ ಗಣ್ಯರು ಉಪಸ್ಥಿತರಿರಲಿದ್ದಾರೆ.
ಕ್ರೀಡಾಕೂಟ
ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯುವ ಕ್ರೀಡಾಕೂಟದಲ್ಲಿ ಪುರುಷರ ಕೆಸರುಗದ್ದೆ ವಾಲಿಬಾಲ್‌ನಲ್ಲಿ ಪ್ರಥಮ ₹ 5000 ಹಾಗೂ ಟ್ರೋಫಿ, ದ್ವಿತೀಯ ₹ 3000 ಹಾಗೂ ಟ್ರೋಫಿ, ಕೆಸರುಗದ್ದೆ ಹಗ್ಗಜಗ್ಗಾಟದಲ್ಲಿ ಪ್ರಥಮ ₹ 3000 ಹಾಗೂ ಟ್ರೋಫಿ, ದ್ವಿತೀಯ ₹ 2000 ಹಾಗೂ ಟ್ರೋಫಿ ಮತ್ತು ಮಹಿಳೆಯರ ವಿಭಾಗದ ಕೆಸರುಗದ್ದೆ ಹಗ್ಗಜಗ್ಗಾಟದಲ್ಲಿ ಪ್ರಥಮ ₹ 2000 ಹಾಗೂ ಟ್ರೋಫಿ, ದ್ವಿತೀಯ ₹ 1000 ಹಾಗೂ ಟ್ರೋಫಿ ಹಾಗೂ ಕೆಸರುಗದ್ದೆ ತ್ರೋಬಾಲ್‌ನಲ್ಲಿ ಪ್ರಥಮ ₹ 2000 ಹಾಗೂ ಟ್ರೋಫಿ, ದ್ವಿತೀಯ ₹ 1000 ಹಾಗೂ ಟ್ರೋಫಿ ಬಹುಮಾನವಿದೆ.
ಅಲ್ಲದೇ ಸಾರ್ವಜನಿಕ ವಿಭಾಗದಲ್ಲಿ ಕಂಬಳ ಓಟ ,ನಿಧಿ ಶೋಧ,ಮಡಕೆ ಒಡೆಯುವುದು, ಅಪ್ಪಂಗಾಯಿ ,ಕೆಸರುಗದ್ದೆ ಓಟ, ಮಕ್ಕಳಿಗೆ (1-4ನೇ ತರಗತಿ) (5-7ನೇ ತರಗತಿ) (8-10ನೇ ತರಗತಿ) ಕಂಬ ತಿರುಗಿ ಓಟ ,ಹಾಳೆ ಎಳೆಯುವುದು, ಉಪ್ಪು ಮೂಟೆ, ಹಿಮ್ಮುಖ ಓಟ ,ಕೆಸರುಗದ್ದೆ ಓಟ ಸೇರಿದಂತೆ ವಿವಿಧ ಕ್ರೀಡೆಗಳು ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.