18ನೇ ವರ್ಷದ ಪೂಜೆ ಪ್ರಸಾದದ ಜೊತೆ ಸೀರೆ ವಿತರಣೆ
ಪುತ್ತೂರು: ಮಹಾಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ಯಾರೇ ಕಾರ್ಯಕ್ರಮ ಮಾಡಲಿ ಅವರೆಲ್ಲ ನಮ್ಮವರು ಎಂಬ ಭಾವನೆ ಮೂಡಿದಾಗ ದೇವಸ್ಥಾನ ಅಭಿವೃದ್ಧಿಯಾಗಲು ಸಾಧ್ಯ ಎಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಈಶ್ವರ ಭಟ್ ಪಂಜಿಗುಡ್ಡೆ ಹೇಳಿದರು.

ಸಮರ್ಪಣಾ ಮಹಿಳಾ ಸೇವಾ ಸಂಸ್ಥೆ ಮತ್ತು ಶ್ರೀ ವರಮಹಾಲಕ್ಷ್ಮೀ ಪೂಜೆ ಸಮಿತಿ ವತಿಯಿಂದ,ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮತ್ತು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ದೇವಳದ ನಟರಾಜ ವೇದಿಕೆಯಲ್ಲಿ ಆ.8ಕ್ಕೆ ನಡೆದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯ ಧಾರ್ಮಿಕ ಸಭೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು. ಇವತ್ತು ಶಕುಂತಳಾ ಶೆಟ್ಟಿಯವರ ನೇತೃತ್ವದಲ್ಲಿ ವರಮಹಾಲಕ್ಷ್ಮೀ ಪೂಜೆ ನಡೆಯುತ್ತಿದೆ. ನಾಡಿದ್ದು ಇನ್ನೊಂದು ಸಂಘಟನೆಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ, ಚೌತಿ, ಕಂಬಳೋತ್ಸವ, ಪಿಲಿಗೊಬ್ಬು, ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ಸಂಘಟನೆಗಳು ಬೇರೆ ಬೇರೆ ಆಗಿರಬಹುದು. ಆದರೆ ಇವರೆಲ್ಲರು ನಮ್ಮವರು ಎಂಬ ಭಾವನೆ ಮೂಡಿದಾಗ ಮಾತ್ರ ದೇವಸ್ಥಾನ ಅಭಿವೃದ್ಧಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ನಾವು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಪೂರ್ವಜರು ಮಾಡಿದ ಪುಣ್ಯದ ಫಲ ಎಂದ ಅವರು, ಇಂತಹ ಸಂಘಟನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ನಾವು ಬೆನ್ನೆಲುಬಾಗಿ ನಿಂತು ಕೆಲಸ ಮಾಡುತ್ತೇವೆ ಎಂದರು.
ನಾವು ಮಹಾಲಿಂಗೇಶ್ವರ ದೆವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧಿಕಾರ ಸ್ವೀಕರಿಸಿ 7 ತಿಂಗಳಲ್ಲಿ ಭಕ್ತರ ಆಶೀರ್ವಾದದಿಂದ ಹಲವಾರು ಬದಲಾವಣೆ ತಂದಿದ್ದೇವೆ. ಮಹಾಲಿಂಗೇಶ್ವರ ದೇವರ ಜಾಗವನ್ನು ದೇವಸ್ಥಾನಕ್ಕೆ ಮರುಸ್ವಾಧೀನಪಡಿಸುವುದಾಗಿರಬಹುದು, ಅನ್ನಪ್ರಸಾದ ವಿತರಣೆ ವ್ಯವಸ್ಥೆ, ಶುದ್ದ ಎಳ್ಳೆಣ್ಣೆ, ಶುದ್ಧ ಕುಂಕುಮ, ಶುದ್ಧ ತುಪ್ಪ ಸಮರ್ಪಣೆ ಆಗಿರಬಹುದು.ಇವೆಲ್ಲವೂ ಇವತ್ತು ದೇವಳದಲ್ಲಿ ಬಹಳ ಅಚ್ಚುಕಟ್ಟಾಗಿ ನಡೆಯುತ್ತಿದೆ. ದೈವಜ್ಞರ ಸಲಹೆಯಂತೆ ರಕ್ತೇಶ್ವರಿ ದೇವಿಯನ್ನು ದೇವಸ್ಥಾನದ ಒಳಗೆ ತಂದ ಬಳಿಕ ಮಹಾಲಿಂಗೇಶ್ವರ ದೇವಸ್ಥಾನದ ಚಿತ್ರಣವೇ ಬದಲಾಯಿತು. ಧರ್ಮಸ್ಥಳ, ಸುಬ್ರಹ್ಮಣ್ಯ, ಸೌತಡ್ಕ ಕ್ಷೇತ್ರದಲ್ಲಿ ಹೊರಗಿನಿಂದ ಬಂದು ಭಕ್ತರು ಕಾಣಿಕೆ ಹಾಕುತ್ತಾರೆ.ಆದರೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನಮ್ಮವರೇ ನಮ್ಮ ಊರಿನವರೇ ಬಂದು ದೇಣೀಗೆ ನೀಡಿ ದೇವಸ್ಥಾನವನ್ನು ವ್ಯವಸ್ಥಿತ ರೂಪದಲ್ಲಿ ನಡೆಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ ಎಂದರು.
ತಪ್ಪು ಮಾಡಿದ್ದರೆ ತಿಳಿಸಿ:
ಇವತ್ತು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾನು ಅಧ್ಯಕ್ಷ, ವ್ಯವಸ್ಥಾಪನಾ ಸಮಿತಿ ಇರಬಹುದು.ಆದರೆ ಇಲ್ಲಿ ನಾವು ವ್ಯವಸ್ಥೆಗೆ ಮಾತ್ರ ಅಧ್ಯಕ್ಷ. ನಿಜವಾಗಿ ನಾವೆಲ್ಲರೂ ದೇವರ ಚಾಕ್ರಿಯವರು. ದೇವರ ಸೇವೆ ಮಾಡುವವರು. ದೇವಳದ ಅಭಿವೃದ್ದಿ ಕೆಲಸದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು.ನಾನಾಗಲಿ, ನಮ್ಮ ಸಮಿತಿಯಾಗಲಿ ತಪ್ಪು ಮಾಡಿದರೆ ತಿಳಿಸಿ. ನಾವು ಮಾಡಿದ ತಪ್ಪುಗಳನ್ನು ಒಪ್ಪಿಕೊಂಡು ತಿದ್ದಿಕೊಳ್ಳುವ ಕೆಲಸ ಮಾಡುತ್ತೇವೆ ಎಂದು ಈಶ್ವರ ಭಟ್ ಪಂಜಿಗುಡ್ಡೆಯವರು ಹೇಳಿದರು.
ಪೂಜೆ ಮಾಡಿಸಿದವರು, ಭಾಗವಹಿಸಿದವರಿಗೆ ಸಮಾಜದ ಉನ್ನತ ಹುದ್ದೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮರ್ಪಣಾ ಮಹಿಳಾ ಸೇವಾ ಸಂಸ್ಥೆಯ ಗೌರವಾಧ್ಯಕ್ಷೆ,ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿಯವರು ಮಾತನಾಡಿ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಅರುಣ್ ಕುಮಾರ್ ಪುತ್ತಿಲ ವರಮಹಾಲಕ್ಷ್ಮೀ ಪೂಜೆ ಆರಂಭಿಸಿ 2 ವರ್ಷದ ಬಳಿಕ ನನಗೆ ತಂದು ಕೊಟ್ಟರು.ನಾವು ಶುರು ಮಾಡಿ ಇವತ್ತಿಗೆ 18 ವರ್ಷ ಆಗಿದೆ. ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಎಲ್ಲಾ ಕಾರ್ಯಕ್ರಮ ಅವನ ಆಶೀರ್ವಾದದಲ್ಲಿ ನಡೆಯುತ್ತದೆ. ಯಾಕೆಂದರೆ ಕಂಬಳಕ್ಕೂ ಅಪವಾದ ಇತ್ತು, ಆ ಅಪವಾದ ಹೋಗಿ ಈಗ ಬಹಳಷ್ಟು ಜನರು ಕಂಬಳಕ್ಕೆ ಕರೆಯದವರೂ ಬಂದು ಅಲ್ಲಿ ಕೂತು ದೊಡ್ಡ ಹುದ್ದೆಗೆ ಹೋಗುತ್ತಿದ್ದಾರೆ. ವರಮಹಾಲಕ್ಷ್ಮೀ ಪೂಜೆಗೂ ಅದೇ ಕಳಂಕ ಆಗಿತ್ತು.ಅದೆಲ್ಲವನ್ನೂ ಮೀರಿ ಯಾರೆಲ್ಲಾ ಪೂಜೆಯಲ್ಲಿ ಭಾಗವಹಿಸಿದ್ದಾರೋ, ಪೂಜೆ ಮಾಡಿಸಿದ್ದಾರೋ ಅವರೆಲ್ಲರೂ ಇವತ್ತು ಸಮಾಜದ ಉನ್ನತ ಹುದ್ದೆಗೆ ಹೋಗಿದ್ದಾರೆ. ಅಂತಹ ಶಕ್ತಿ ವರಮಹಾಲಕ್ಷ್ಮೀ ಪೂಜೆಗಿದೆ. ವೇ.ಮೂ ಹರಿಪ್ರಸಾದ್ ವೈಲಾಯ ಅವರು ಇಲ್ಲಿ ವರಮಹಾಲಕ್ಷ್ಮೀ ಪೂಜೆ ಆರಂಭದಿಂದಲೇ ಪೌರೋಹಿತ್ವ ಮಾಡುತ್ತಿದ್ದಾರೆ ಎಂದರು.
ಧಾರ್ಮಿಕತೆಯಲ್ಲಿ ಜೀವನದ ಪಾಠ ಮುಖ್ಯ:
ಮಂಗಳೂರು ಶ್ರೀನಿವಾಸ ಕಾಲೇಜಿನ ಉಪನ್ಯಾಸಕಿ ಡಾ|ವೀಣಾ ಸಂತೋಷ್ ರೈ ಅವರು ಮಾತನಾಡಿ ದಿನ ನಿತ್ಯದ ಜೀವನದಲ್ಲಿ ಒಳ್ಳೆಯ ಸಂಸ್ಕೃತಿಯನ್ನು ಅಳವಡಿಸುವ ಕೆಲಸ ಮಾಡಬೇಕು. ಜೀವನದ ಎಲ್ಲಾ ದಿನವನ್ನು ಉತ್ತಮ ದಿನವನ್ನಾಗಿ ನೋಡಬೇಕು. ಇಂತಹ ಸಂದರ್ಭದಲ್ಲಿ ನಮಗೆ ಧಾರ್ಮಿಕ ಉಪನ್ಯಾಸಕ್ಕಿಂತ ನಮ್ಮ ಧಾರ್ಮಿಕತೆಯಲ್ಲಿ ಜೀವನದ ಪಾಠ ಬಹಳ ಮುಖ್ಯ .ನಮ್ಮ ಹಬ್ಬಗಳು ಸೀಮಿತವಾಗಬಾರದು.ನಮ್ಮೆಲ್ಲ ಸಂಸ್ಕಾರ, ಆಚಾರ ವಿಚಾರಗಳನ್ನು ಮುಂದಿನ ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು.
ಸಕಾರಾತ್ಮಕ ಬದಲಾವಣೆ ಆಗಲಿ:
ಮುಖ್ಯ ಅತಿಥಿ ರಕ್ಷಾ ಉಜ್ವಲ್ ಅವರು ಮಾತನಾಡಿ ಧಾರ್ಮಿಕ ಹಬ್ಬ ಹರಿದಿನಗಳಲ್ಲಿ ಪ್ರತಿ ಮನೆಯಲ್ಲೂ ಸಕಾರಾತ್ಮಕ ಬದಲಾವಣೆ ಆಗಲಿ ಎಂದು ಶುಭ ಹಾರೈಸಿದರು.
ಎಲ್ಲರ ಮನದಲ್ಲೂ ಭಕ್ತಿಯ ಭಾವನೆ ಇರಲಿ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಕೃಷ್ಣವೇಣಿ ಅವರು ಮಾತನಾಡಿ ಮಹಾಲಕ್ಷ್ಮೀಯ ಆರಾಧನೆಯ ಮೂಲಕ ಎಲ್ಲರ ಮನದಲ್ಲೂ ಭಕ್ತಿಯ ಭಾವನೆ ಇರಲಿ. ಎಲ್ಲರಿಗೂ ತಾಯಿ ಸನ್ಮಂಗಲವನ್ನುಂಟು ಮಾಡಲಿ ಎಂದರು.ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಸುಭಾಶ್ ರೈ ಬೆಳ್ಳಿಪ್ಪಾಡಿ, ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಶುಭಮಾಲಿನಿ ಮಲ್ಲಿ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ನಯನಾ ರೈ, ಸಮರ್ಪಣಾ ಮಹಿಳಾ ಸೇವಾ ಸಂಸ್ಥೆಯ ಅಧ್ಯಕ್ಷೆ ಗಂಗಾರತ್ನ ವಿ.ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಮಿತಿ ಸದಸ್ಯೆ ಜಯಂತಿ ಬಲ್ನಾಡು, ವಿಜಯ ಸರಸ್ವತಿ ಎಡಕ್ಕಾನ, ಪರಮೇಶ್ವರಿ ಶೆಟ್ಟಿ, ಶಾರದಾ ಕೇಶವ್, ರಾಜೇಶ್ವರಿ, ಯಮುನಾ, ವತ್ಸಲಾ ಪದ್ಮನಾಭ ಶೆಟ್ಟಿ, ಅನುಶ್ರೀ, ಮಲ್ಲಿಕಾ ಸುಭಾಶ್ ರೈ, ಅನ್ನಪೂರ್ಣ ಕುತ್ಯಾಡಿ ಅತಿಥಿಗಳನ್ನು ಗೌರವಿಸಿದರು.ಸೀತಾ ಭಟ್ ಪ್ರಾರ್ಥಿಸಿದರು.ಸ್ವರ್ಣಲತಾ ಹೆಗ್ಡೆ ಸ್ವಾಗತಿಸಿದರು. ಅನ್ನಪೂರ್ಣ ಕುತ್ಯಾಡಿ ವಂದಿಸಿದರು. ಶಾರದಾ ಅರಸ್ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ಬಳಿಕ ಮಹಾಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆಯ ಮಹಾಪೂಜೆ ನಡೆಯಿತು.ಈ ಸಂದರ್ಭ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಕಲ್ಲೇಗ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ಯು.ಲೋಕೇಶ್ ಹೆಗ್ಡೆ, ಶ್ಯಾಮಸುಂದರ ರೈ, ಜೋಕಿಂ ಡಿ’ಸೋಜ, ಗ್ಯಾರೆಂಟಿ ಅನುಷ್ಠಾನದ ತಾಲೂಕು ಸಮಿತಿ ಅಧ್ಯಕ್ಷ ಉಮಾನಾಥ್ ಶೆಟ್ಟಿ, ಡಾ.ರಾಜಾರಾಮ್ ಕೆ.ಬಿ.ಉಪ್ಪಿನಂಗಡಿ ಸಹಿತ ಹಲವಾರು ಮಂದಿ ಪ್ರಮುಖರು ಪೂಜೆಯಲ್ಲಿ ಪಾಲ್ಗೊಂಡರು.ಸ್ವಯಂ ಸೇವಕರಾಗಿ ಭಾಗವಹಿಸಿದ್ದ ಕಲ್ಲೇಗದ ಸರ್ವೆಶ್ ಮತ್ತು ತಂಡವನ್ನು ಶಕುಂತಳಾ ಶೆಟ್ಟಿ ಅಭಿನಂದಿಸಿದರು. ಅನ್ನದಾನಕ್ಕೆ ಸಹಕರಿಸಿದವರನ್ನು ಗುರುತಿಸಲಾಯಿತು.
ಶಕುಂತಳಾ ಶೆಟ್ಟಿಯವರು ನನ್ನ ಮಾರ್ಗದರ್ಶಕರು-ಈಶ್ವರ ಭಟ್ ಪಂಜಿಗುಡ್ಡೆ
ಈ ಹಿಂದೆ ಪುತ್ತೂರಿನಲ್ಲಿ ಶಕುಂತಳಾ ಶೆಟ್ಟಿಯವರು ಶಾಸಕರಾಗಿ ಬಹಳಷ್ಟು ಅನುಭವವುಳ್ಳವರು.ಸಂಘಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರು.ಬಾಲ್ಯದಲ್ಲೇ ನಾಯಕತ್ವ ಗುಣ ಹೊಂದಿದ್ದ ಅವರು ಪುತ್ತೂರಿನಲ್ಲಿ ಶಾಸಕರಾಗಿದ್ದ ಸಂದರ್ಭ ಕೋಟಿ ಕೋಟಿ ಅನುದಾನ ತರಿಸಿದ್ದಾರೆ.ನಾನು ಪಂಚಾಯತ್ ಸದಸ್ಯನಾಗಿದ್ದ ಸಂದರ್ಭ ನಮ್ಮ ಸದಸ್ಯರ ಕೋರಿಕೆಯಂತೆ ೧೨ ಕೋಟಿ ರೂಪಾಯಿ ಅನುದಾನ ತರಿಸಿದ್ದಾರೆ.ಆ ಒಂದು ಪ್ರೀತಿ ವಿಶ್ವಾಸದಿಂದ ಇವತ್ತು ನಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇವೆ.ಅವರು ನನ್ನ ಮಾರ್ಗದರ್ಶಕರು.ಯಾಕೆಂದರೆ ಭಟ್ರೆ ಈರ್ ಅವು ಮಲ್ತ್ನ ತಪ್ಪು,ಈರ್ ಅಲ್ಲ್ ಅಂಚ ಮಲ್ಪೆರೆ ಬಲ್ಲಿ, ಈರ್ ಇಂಚ ಮಾಲ್ಪೊಡು ಎಂದು ಹೇಳಿ, ನಾನು ಮಾಡಿದ ತಪ್ಪನ್ನು ತಿದ್ದಿ ನನ್ನನ್ನು ಒಳ್ಳೆಯ ಮಾರ್ಗದಲ್ಲಿ ನಡೆಸಿದವರು.ಅವರು ಯಾವಾಗಲೂ ನಮಗೆ ಶಕು ಅಕ್ಕನಾಗಿ ಇರುತ್ತಾರೆ.ಪುತ್ತೂರು ಕ್ಷೇತ್ರದಲ್ಲಿ ಪ್ರತಿ ಮನೆ ಮನೆಯಲ್ಲಿ ಶಕು ಅಕ್ಕ ಮನೆಮಾತಾಗಿದ್ದಾರೆ.ಅವರ ಈ ಕಾರ್ಯಕ್ರಮಕ್ಕೆ ಮಹಾಲಿಂಗೇಶ್ವರ ದೇವಸ್ಥಾನದಿಂದ ಸಂಪೂರ್ಣ ಬೆಂಬಲ ಸೂಚಿಸುತ್ತಿದ್ದೇವೆ
ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು
ರಾಜಿಯಾಗಲು ನಮಗೆ ಕೋಪ ಆಗಿದ್ದರೆ ತಾನೆ… ಶಕುಂತಳಾ ಶೆಟ್ಟಿ
ವರಮಹಾಲಕ್ಷ್ಮೀ ವಿಚಾರದಲ್ಲಿ ದೇವಸ್ಥಾನದ ಸಮಿತಿಯೊಂದಿಗೆ ಯಾವ ಕೋಪವೂ ಇಲ್ಲ. ಲೋಕೇಶರು ಗೊಂದಲಕ್ಕೆ ಪರಿಹಾರ ಎಂದು ಹಾಕಿದ್ದರು. ಆದರೆ ಶಕು ಅಕ್ಕ ಯಾವತ್ತೂ ಯಾರಲ್ಲೂ ಗ್ಯಾಪ್ ಇಟ್ಟುಕೊಳ್ಳುವುದಿಲ್ಲ. ನಾನು ನಿನ್ನೆಯೂ ಯಾವಾಗಲೂ ಹೋಗುವಂತೆ ದೇವಸ್ಥಾನಕ್ಕೆ ಮಧ್ಯಾಹ್ನದ ಅನ್ನಪ್ರಸಾದ ಸೇವನೆಗೆ ಹೋಗಿದ್ದೇ ಹೊರತು ರಾಜಿಪಂಚಾತಿಕೆಗೆ ಅಲ್ಲ. ರಾಜಿ ಆಗಲು ನಮಗೆ ಕೋಪ ಆಗಿದ್ದರೆ ತಾನೆ, ನಮಗೆ ಕೋಪವೇ ಆಗಿಲ್ಲ. ಅವರ ಮನೆಗೆ ನಾನು ಹೋಗುತ್ತೇನೆ. ಆದರೆ ಇಲ್ಲಿ ಮಹಾಲಿಂಗೇಶ್ವರನೇ ನನಗೆ ಈ ರೀತಿ ಮಾಡಿಸಿದ್ದು ಎಂದು ಅನಿಸಿದೆ. ಯಾಕೆಂದರೆ ಸ್ವಲ್ಪ ಗೊಂದಲ ಆಗಿತ್ತು. ಮೊನ್ನೆ ಒಂದು ವಾಟ್ಸಪ್ನಲ್ಲಿ ಬಂದ ನ್ಯೂಸ್ ನೋಡಿ ಎಲ್ಲರೂ ಕರೆ ಮಾಡಿ ಶಕು ಅಕ್ಕ 5 ಸಾವಿರ ಮಂದಿಗೆ ನನ್ನ ಕಡೆಯಿಂದ ಊಟ, ಹಾಗೆ ಹೀಗೆಂದು, ನನ್ನಿಂದ 5 ಪೈಸೆ ಪ್ರಯೋಜನ ಪಡೆಯದವರು, ನಾವು 5 ಪೈಸೆ ವ್ಯಾಪಾರವನ್ನೇ ಮಾಡದವರು ಕೂಡಾ ನನಗೆ ಕರೆ ಮಾಡಿ ಹೇಳಿದ್ದಾರೆ.ಅದರಲ್ಲಿ ಜ್ಯುವೆಲ್ಲರ್ಸ್ನ ಉದ್ಯಮಿಯೊಬ್ಬರು ಶಕು ಅಕ್ಕ ಏನು ಬೇಕೆಂದು ಕೇಳಿದರು.
ಪಾಣಾಜೆಯಿಂದ ಅಕ್ಕಿ ಬೇಕ, ತೆಂಗಿನ ಕಾಯಿ ಬೇಕಾ ಎಂದು ಕೇಳಿದ್ದಾರೆ. ಇದನ್ನೆಲ್ಲ ಕೇಳುವಾಗ ಮಹಾಲಿಂಗೇಶ್ವರ ದೇವರು 18ನೇ ವರ್ಷದ ಪೂಜೆಯಲ್ಲಿ ನಿಮ್ಮ ಜೊತೆ ನಾನಿದ್ದೇನೆ ಎಂದು ನಮಗೆ ಗೊತ್ತಾಗಲು ಬೇಕಾಗಿ ಸಣ್ಣ ನಾಟಕ ಆಡಿದ್ದಾನೆ ಎಂದು ನನಗೆ ಅನಿಸಿದೆ. ನನಗೂ ಪ್ರಾಯ ಆಗಿದೆ.ಗಂಗಕ್ಕನಿಗೂ, ಶುಭಕ್ಕನಿಗೂ ಪ್ರಾಯ ಆಗಿದೆ.ಆದರೆ ಪ್ರಾಯದವರನ್ನು ತಾಯಿ ಸ್ಥಾನದಲ್ಲಿಟ್ಟು ನನ್ನನ್ನು ಅಕ್ಕನ ಸ್ಥಾನದಲ್ಲಿಟ್ಟು ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳುವಾಗ ಮನಸ್ಸು ತೃಪ್ತಿಯಾಗಿದೆ. ಯಾರು ಏನು ಕೊಡುವುದು ಬೇಡ.ನಿಮ್ಮ ಬೆಂಬಲ ನಮಗಿರಲಿ. ಮಹಾಲಿಂಗೇಶ್ವರನ ಅನುಗ್ರಹ ಇದ್ದರೆ ಸಾಕು. ನಾವು 15 ದಿನದ ಹಿಂದೆಯೇ ಅನ್ನಪ್ರಸಾದ ತಯಾರಿಸಲು ಹರೀಶ್ ಭಟ್ ಅವರನ್ನು ಹೇಳಿ ಆಗಿದೆ. ಏನೂ ಸಮಸ್ಯೆ ಇಲ್ಲ. ಇನ್ನು ಪತ್ರಿಕೆಯಲ್ಲಿ ಬರೆದ ಅಥವಾ ಓದಿದ್ದರಲ್ಲಿ, ಕೇಳಿದ್ದರಲ್ಲಿ ವ್ಯತ್ಯಾಸ ಇರಬಹುದು. ನನಗೂ ಕಮಿಟಿಗೂ ಯಾರಿಗೂ ಕೋಪ ಇಲ್ಲ.ನಾವು ಅಕ್ಕ ತಮ್ಮಂದಿರ ಹಾಗೆ ಇದ್ದೇವೆ. ಲೋಕೇಶರಲ್ಲಿ ತಮಾಷೆಗೆ ಹೇಳಿ, ಅದನ್ನು ಹಾಕಬೇಡಿ ಎಂದು ಹೇಳಿದ್ದೆ. ಆದರೆ ಅವರು ಹಾಕಿದ್ದಾರೆ. ಒಟ್ಟಿನಲ್ಲಿ ಮಹಾಲಿಂಗೇಶ್ವರನ ಈ ಜಾಗದಲ್ಲಿ ಏನೇ ಆಗಲಿ ಅದು ಗಣೇಶೋತ್ಸವ, ಕೃಷ್ಣ, ವರಮಹಾಲಕ್ಷ್ಮೀ ಇರಲಿ ಎಲ್ಲದಕ್ಕೂ ಮೂಲ ಮಹಾಲಿಂಗೇಶ್ವರ.ಇಲ್ಲಿ ನಾನು ಎಂದು ಹೇಳಿದವರನ್ನು ಇಳಿಸ್ತಾನೆ. ನಾವು, ನಮ್ಮಿಂದ ನೀನೇ ಮೇಲೆ ಎಂದು ಹೇಳಿದವರನ್ನು ಎತ್ತಿ ಮೇಲೆ ಕೂರಿಸುತ್ತಾನೆ
ಶಕುಂತಳಾ ಶೆಟ್ಟಿ, ಗೌರವಾಧ್ಯಕ್ಷರು, ಸಮರ್ಪಣಾ ಮಹಿಳಾ ಸೇವಾ ಸಂಸ್ಥೆ
ಪ್ರಸಾದ ರೂಪದಲ್ಲಿ ಸೀರೆ ವಿತರಣೆ
ವೇ.ಮೂ ಹರಿಪ್ರಸಾದ್ ವೈಲಾಯ ಅವರ ಪೌರೋಹಿತ್ಯದಲ್ಲಿ ಪೂಜೆ ನಡೆಯಿತು. ಬೆಳಗ್ಗೆ ನಯನಾ ರೈ ಅವರ ನೇತೃತ್ವದಲ್ಲಿ ವಜ್ರಮಾತ ಮಹಿಳಾ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ವರಮಹಾಲಕ್ಷ್ಮೀ ಪೂಜೆಗೆ ಪ್ರಸಾದದ ಜೊತೆಯಲ್ಲಿ ಸೀರೆ ವಿತರಿಸಲಾಯಿತು. ಬೆಳಿಗ್ಗೆ ಸಂಕಲ್ಪ ಕಾರ್ಯಕ್ರಮ ನಡೆಯಿತು. ಪೂಜೆಯ ಬಳಿಕ ಅನ್ನಪ್ರಸಾದ ವಿತರಣೆ ನಡೆಯಿತು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಅನ್ನಪ್ರಸಾದ ಸ್ವೀಕರಿಸಿದರು.