ಅಡಿಕೆ ಆಮದು ದೇಶೀಯ ಮಾರುಕಟ್ಟೆಯಲ್ಲಿ ಬೆಲೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿಲ್ಲ – ಸಚಿವರಿಂದ ಮಾಹಿತಿ

0

ಪುತ್ತೂರು: 2025-26ನೇ ಆರ್ಥಿಕ ವರ್ಷದಲ್ಲಿ ಹತ್ತು ರಾಷ್ಟ್ರಗಳಿಂದ ರೂ.1,064 ಕೋಟಿ ಮೊತ್ತದ ಅಡಿಕೆ ಆಮದು ಮಾಡಿಕೊಳ್ಳಲಾಗಿದೆ.ಅಡಿಕೆ ಆಮದಿನ ಪರಿಣಾಮವಾಗಿ ದೇಶೀಯ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿಲ್ಲ ಎಂದು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆಯ ರಾಜ್ಯ ಸಚಿವ ಜಿತಿನ್ ಪ್ರಸಾದ್ ತಿಳಿಸಿದ್ದಾರೆ.ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಲೋಕಸಭೆಯಲ್ಲಿ ಕೇಳಿರುವ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದ್ದಾರೆ.ವಿದೇಶಿ ಅಡಿಕೆ ಆಮದಿನಿಂದಾಗಿ ಇಲ್ಲಿ ಅಡಿಕೆಗೆ ಬೆಲೆ ಇಳಿಕೆಯಾಗುತ್ತಿದೆ ಎನ್ನುವ ಅಭಿಪ್ರಾಯವನ್ನು ಸಚಿವರು ಈ ಮೂಲಕ ಅಲ್ಲಗಳೆದಿದ್ದಾರೆ.


ಶಿರಸಿ ಮಾರುಕಟ್ಟೆಯಲ್ಲಿ 2024ರ ಜನವರಿಯಿಂದ ಜೂನ್ ಅವಧಿಯಲ್ಲಿ ಕ್ವಿಂಟಾಲ್ ಅಡಿಕೆಗೆ ರೂ.36,316 ದರ ಇತ್ತು.ಈ ವರ್ಷ ಜನವರಿಯಿಂದ ಜೂನ್ ಅವಧಿಯಲ್ಲಿ ಬೆಲೆ ರೂ.37,856ಕ್ಕೆ ಏರಿದೆ ಎಂದು ಸಚಿವರು ಉದಾಹರಣೆ ನೀಡಿದ್ದಾರೆ.ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಅಡಿಕೆ ಆಮದು ಮೌಲ್ಯ ನಿರಂತರವಾಗಿ ಕಡಿಮೆಯಾಗುತ್ತಿದೆ.ಅಡಿಕೆಯನ್ನು ಮುಖ್ಯವಾಗಿ ಶ್ರೀಲಂಕಾ, ಮ್ಯಾನ್ಮಾರ್, ಇಂಡೊನೇಷ್ಯಾ, ಬಾಂಗ್ಲಾದೇಶ, ಯುಎಇ, ನೇಪಾಳ, ಒಮಾನ್, ಮಲೇಷ್ಯಾ, ಸಿಂಗಾಪುರ ಮತ್ತು ಥಾಯ್ಲೆಂಡ್‌ನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.ಈ ಪೈಕಿ ಬಹುಪಾಲು ಅಡಿಕೆ ಆಮದಾಗುತ್ತಿರುವುದು ಶ್ರೀಲಂಕಾ, ಮ್ಯಾನ್ಮಾರ್, ಇಂಡೋನೇಷ್ಯಾದಿಂದ ಎಂದು ಸಚಿವರು ವಿವರಿಸಿದ್ದಾರೆ.


ಅಡಿಕೆ ಮಂಡಳಿ ಸ್ಥಾಪನೆ ಇಲ್ಲ:
ಅಡಿಕೆ ಕೃಷಿ ಪ್ರದೇಶ ವಿಸ್ತರಣೆ ಹಾಗೂ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಕರ್ನಾಟಕದಲ್ಲಿ ಪ್ರತ್ಯೇಕ ಅಡಿಕೆ ಮಂಡಳಿ ಸ್ಥಾಪಿಸುವ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಸಚಿವರು ಪುನರುಚ್ಚರಿಸಿದ್ದಾರೆ.ಕಾಫಿ ಮಂಡಳಿ, ರಬ್ಬರ್ ಮಂಡಳಿ, ಟೀ ಮಂಡಳಿ ಮುಂತಾದವುಗಳ ಮಾದರಿಯಲ್ಲಿ ಅಡಿಕೆ ಮಂಡಳಿ ಸ್ಥಾಪಿಸುವ ಪ್ರಸ್ತಾವ ಇದೆಯೇ ಎಂದು ರಾಜ್ಯಸಭಾ ಸದಸ್ಯ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರು ರಾಜ್ಯಸಭೆಯಲ್ಲಿ ಪ್ರಶ್ನೆ ಕೇಳಿದ್ದರು.


ರಾಜ್ಯದಲ್ಲೇ ಅತೀ ಹೆಚ್ಚು ಅಡಿಕೆ ಉತ್ಪಾದನೆ:
ದೇಶದಲ್ಲಿ ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಅಡಿಕೆ ಉತ್ಪಾದನೆಯಾಗುತ್ತದೆ.2023-24ರ ಅಂದಾಜಿನ ಪ್ರಕಾರ,ರಾಜ್ಯವು 6.77 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಂದಾಜು 10.32 ಲಕ್ಷ ಟನ್ ಅಡಿಕೆ ಉತ್ಪಾದಿಸುತ್ತದೆ.ಇದು ದೇಶದ ಒಟ್ಟು ಅಡಿಕೆ ಉತ್ಪಾದನೆಯ ಶೇ.73 ಮತ್ತು ಒಟ್ಟು ಅಡಿಕೆ ಪ್ರದೇಶದ ಶೇ.71ರಷ್ಟಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.


ಎಲೆಚುಕ್ಕಿ ರೋಗ ನಿರ್ವಹಣೆಗೆ ರೂ.37 ಕೋಟಿ:
ಅಡಿಕೆಯ ಎಲೆ ಚುಕ್ಕೆ ರೋಗ ನಿರ್ವಹಿಸಲು 2024-25ರಲ್ಲಿ ರಾಜ್ಯಕ್ಕೆ ರೂ.37 ಕೋಟಿ ಮಂಜೂರು ಮಾಡಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.ಅಡಿಕೆ ಬೆಳೆಗೆ ರೋಗ ಬಾಧಿಸಿದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಕೃಷಿ ಸಚಿವಾಲಯವು ಮಧ್ಯಪ್ರವೇಶಿಸಿ ಪರಿಹಾರ ಕ್ರಮಗಳನ್ನು ಸೂಚಿಸಿದೆ ಮತ್ತು ಆರ್ಥಿಕ ನೆರವು ನೀಡಿದೆ ಎಂದು ಸಚಿವರು ಹೇಳಿದ್ದಾರೆ.ಕರ್ನಾಟಕದಲ್ಲಿ ಪುನರ್ ರಚಿಸಿದ ಹವಾಮಾನ ಬೆಳೆ ಆಧಾರಿತ ವಿಮಾ ಯೋಜನೆ ಅಡಿಯಲ್ಲಿ ಅಡಿಕೆ ಬೆಳೆಯನ್ನೂ ಸೇರಿಸಲಾಗಿದೆ ಎಂದು ಸಚಿವ ಜಿತಿನ್ ಪ್ರಸಾದ್ ತಿಳಿಸಿದ್ದಾರೆ.

3 ವರ್ಷಗಳಲ್ಲಿ ಅಡಿಕೆ ಆಮದು ಇಳಿಕೆ
ಕಳೆದ ಮೂರು ವರ್ಷಗಳಲ್ಲಿ ಅಡಿಕೆ ಆಮದು ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.2022-23ನೇ ಆರ್ಥಿಕ ವರ್ಷದಲ್ಲಿ ರೂ.2261 ಕೋಟಿ,2023-24ನೇ ಸಾಲಿನಲ್ಲಿ ರೂ.1296 ಕೋಟಿ,2024-25ನೇ ಸಾಲಿನಲ್ಲಿ ರೂ.1256 ಮತ್ತು 2025-26ನೇ ಸಾಲಿನಲ್ಲಿ ರೂ.1064 ಕೋಟಿಯ ಅಡಿಕೆ ಆಮದು ಮಾಡಿಕೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here