ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯಿಂದ ಘಮಘಮಿಸಿದ ಅಕ್ಷಯಡ್ ಆಟಿಡೊಂಜಿ ಗೌಜಿ

0


ಆಚರಣೆಗಳು ಅರ್ಥಪೂರ್ಣವಾಗಿರಲಿ, ಶೋ ಆಗದಿರಲಿ-ಅವಿನಾಶ್ ಕೊಡಂಕಿರಿ

ಚಿತ್ರ: ನವೀನ್ ರೈ ಪಂಜಳ

ಪುತ್ತೂರು: ಅಂದಿನ ಹಿರಿಯರ ಕಾಲದಲ್ಲಿನ ಆಟಿ ತಿಂಗಳಿನಲ್ಲಿ ಸಿಗುವ ತಿನಸುಗಳಲ್ಲಿ ರೋಗನಿರೋಧಕ ಶಕ್ತಿಯಿತ್ತು, ಪೋಷಾಕಾಂಶಗಳ ಗುಣವಿತ್ತು ಮಾತ್ರವಲ್ಲ ಆರೋಗ್ಯವೂ ಸದೃಢವಾಗಿತ್ತು. ಪ್ರಸ್ತುತ ಕಾಲಘಟ್ಟದಲ್ಲಿ ಆಟಿ ತಿಂಗಳಿನ ಆಚರಣೆ ಸೇರಿದಂತೆ ಇತರ ತುಳುನಾಡಿನ ವೈಶಿಷ್ಟ್ಯತೆಗಳನ್ನು ಸಾರುವ ಹಬ್ಬಗಳ ಆಚರಣೆಯನ್ನು ಅನುಸರಿಸಿಕೊಂಡು ಬರುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ಯಾವುದೇ ಆಚರಣೆಗಳು ಅದು ಸಮಾಜದಲ್ಲಿ ಒಳಿತ್ತನ್ನು ಮಾಡುವ ಆಚರಣೆಯಾಗಬೇಕೇ ವಿನಹ ಅದು ಶೋ ಎನಿಸಿಕೊಳ್ಳದಿರಲಿ ಎಂದು ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರದ ಅಧ್ಯಕ್ಷ ಅವಿನಾಶ್ ಕೊಡಂಕಿರಿರವರು ಹೇಳಿದರು.


ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಟ್ರಸ್ಟ್‌ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಆ.9 ರಂದು ಹಮ್ಮಿಕೊಂಡ `ಅಕ್ಷಯಡ್ ಆಟಿಡೊಂಜಿ ಗೌಜಿ’ ಕಾರ್ಯಕ್ರಮದ ದೀಪ ಪ್ರಜ್ವಲಿಸಿ, ಕಳಸಕ್ಕೆ ಅಕ್ಕಿಯನ್ನು ತುಂಬಿಸಿ ಉದ್ಘಾಟಿಸಿ ಹಾಗೂ ಆಟಿ ಕೂಟದ ಮಹತ್ವದ ಕುರಿತು ಮಾತನಾಡಿದರು. ತುಳುನಾಡಿನ ಸಂಸ್ಕೃತಿಗೆ ಸುಮಾರು ಮೂರು ಸಾವಿರ ವರ್ಷಗಳ ಇತಿಹಾಸವಿದ್ದು ಈ ತುಳುನಾಡಿನ ಸಂಸ್ಕೃತಿಯಲ್ಲಿ ಆಟಿ ಸಂಸ್ಕೃತಿಯೂ ಒಂದಾಗಿದೆ. ಆಟಿ ತಿಂಗಳಿನಲ್ಲಿ ಭಾರೀ ಮಳೆ ಹಾಗೂ ಬಿರು ಬಿಸಿಲಿನ ಸಮ್ಮಿಶ್ರತೆ ಇದ್ದಿದ್ದರಿಂದ ಮನುಷ್ಯನಿಗೆ ರೋಗ ಎಂಬುದು ಜಾಸ್ತಿ ಆಗುತ್ತಿದ್ದವು. ಆದ್ದರಿಂದ ಅವರು ಪ್ರಕೃತಿದತ್ತವಾದ ವೈಜ್ಞಾನಿಕ ತಿನಸುಗಳನ್ನು ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು ಎಂದರು.


ಪ್ರಕೃತಿಯ ಸಮತೋಲನವಿದ್ದಾಗ ಬದುಕಬಹುದು-ಶ್ರೀಶವಾಸವಿ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ ಹಾಗೂ ಉಪನ್ಯಾಸಕಿ ಶ್ರೀಶವಾಸವಿ ತುಳುನಾಡ್‌ರವರು ಆಟಿ ಪೊರ್ಲು ಕುರಿತು ಸಂದೇಶ ನೀಡುತ್ತಾ ಮಾತನಾಡಿ, ಆಟಿ ತಿಂಗಳಿನಲ್ಲಿ ಮಣ್ಣಿನಲ್ಲಿ ಸಿರಿತನದ ಸತ್ವವಿದೆ. ನಮ್ಮ ತುಳುನಾಡು ಕೃಷಿ ಆಧಾರಿತವಾಗಿದ್ದು ಒಂದು ವೇಳೆ ಕೃಷಿ ಇಲ್ಲದಿದ್ದರೆ ಯಾವುದೇ ಆಚರಣೆಗಳು ಸಾಧ್ಯವಿರದು. ಪ್ರಕೃತಿಯ ಸಮತೋಲನ ಎಲ್ಲಿಯವರೆಗೆ ಇದೆಯೋ ಅಲ್ಲಿಯವರೆಗೆ ಮನುಷ್ಯ ಕೂಡ ಸಮತೋಲನದಲ್ಲಿ ಬದುಕಬಲ್ಲನು. ಆದರೆ ಪ್ರಕೃತಿಯ ಸಮತೋಲನದಲ್ಲಿ ಯಾವಾಗ ಏರಿಳಿತವಾಗುತ್ತದೆಯೋ ಆವಾಗ ಮನುಷ್ಯ ಕೂಡ ಅನಿಯಂತ್ರಿತತೆಗೆ ದೂಡಲ್ಪಡುತ್ತಾನೆ. ಹಿಂದಿನ ಕಾಲದಲ್ಲಿ ತಿನ್ನುವಂತಹ ವಸ್ತುಗಳೇ ಅದು ಮದ್ದಿನ ರೂಪದಲ್ಲಿತ್ತು. ತುಳುನಾಡಿನಲ್ಲಿ ಸಾಕಷ್ಟು ಆಚಾರ ವಿಚಾರಗಳಿವೆ ಅಲ್ಲದೆ ಧಾರ್ಮಿಕತೆ ಮತ್ತು ಸಾಂಸ್ಕೃತಿಕತೆ ನಮ್ಮ ಹಿರಿಯರ ಉಸಿರಾಗಿತ್ತು ಎಂದರು.


ಕಲಾ ವೈಶಿಷ್ಟ್ಯತೆಗಳಿಂದ ಕೂಡಿದ ತುಳುನಾಡು-ಜಯಂತ್ ನಡುಬೈಲು
ಅಧ್ಯಕ್ಷತೆ ವಹಿಸಿದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಚೇರ್ಮನ್ ಜಯಂತ್ ನಡುಬೈಲು ಮಾತನಾಡಿ, ಇಂದಿನ ಕಾಲಘಟ್ಟ ಹಾಗೂ ಹಿರಿಯರ ಕಾಲಘಟ್ಟದ ಮಧ್ಯದ ಅಂತರದಲ್ಲಿ ಹೇಗೆ ನಾವು ಇದ್ದೇವೆ ಎಂದು ಅರ್ಥೈಸಬೇಕಾಗಿದೆ. ಇಡೀ ತುಳುನಾಡಿನಲ್ಲಿ ಆಟಿಕೂಟ, ಕೆಸರ್‍ದ ಗೊಬ್ಬಲು ಹೀಗೆ ಬೇರೆ ಬೇರೆ ವಿಧದಲ್ಲಿ ವೈಭವೀಕರಣ ಹಾಗೂ ತುಳು ಭಾಷೆಯನ್ನು ಉಳಿಸುವ ಕೆಲಸ ಅವಿಭಾಜ್ಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಗಡಿನಾಡ ಕಾಸರುಗೋಡು ಜಿಲ್ಲೆಯಲ್ಲಿ ಆಗುತ್ತಿದೆ. ಕಲಾ ವೈಶಿಷ್ಟ್ಯತೆಗಳಿಂದ ಕೂಡಿದ ಈ ತುಳುನಾಡಿನಲ್ಲಿ ಯಕ್ಷಗಾನ, ದೈವಾರಾಧನೆ, ಹೀಗೆ ನಾನಾ ವೈಶಿಷ್ಟ್ಯತೆಗಳು ಈ ದೇವರ ನಾಡಿನಲ್ಲಿದೆ. ಕಳೆದ ೨೫ ವರ್ಷಗಳ ಹಿಂದೆ ಮೂಲ್ಕಿಯಲ್ಲಿ ಆರಂಭವಾದ ಈ ಆಟಿಕೂಟ ಪ್ರಸ್ತುತ ಎಲ್ಲೆಡೆ ಆಚರಿಸುತ್ತಾ ಬರುತ್ತಿದ್ದಾರೆ ಎಂದರು.


ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕಿ ಕಲಾವತಿ ಜಯಂತ್, ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಅಕ್ಷಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗಂಗಾರತ್ನ, ಉಪ ಪ್ರಾಂಶುಪಾಲ ರಕ್ಷಣ್ ಟಿ.ಆರ್, ಐಕ್ಯೂಎಸಿ ಸಂಯೋಜಕಿ ರಶ್ಮಿ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಕೃತಿ, ಮೋಕ್ಷಾ, ದೇವಿಕಾ ಪ್ರಾರ್ಥಿಸಿದರು. ಅಕ್ಷಯ ಕಾಲೇಜು ಪ್ರಾಂಶುಪಾಲ ಸಂಪತ್ ಪಿ.ಪಕ್ಕಳ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕರಾದ ಹರೀಶ್ಚಂದ್ರ, ದೀಕ್ಷಾ ರೈ, ಧನ್ಯಶ್ರೀ, ರೂಪ, ಪವಿತ್ರಾರವರು ಅತಿಥಿಗಳ ಪರಿಚಯ ಮಾಡಿದರು. ತೃತೀಯ ಬಿ.ಎಯ ಕೀರ್ತನ್ ಕೃಷ್ಣರವರು ಯಕ್ಷಗಾನ ನೃತ್ಯ, ಪ್ರಕೃತಿರವರು ತುಳು ಪದ್ಯವನ್ನು, ಪ್ರಥಮ ಫ್ಯಾಶನ್ ಡಿಸೈನ್, ಪ್ರಥಮ ಬಿಸಿಎ ವಿದ್ಯಾರ್ಥಿಗಳಿಂದ ತುಳುನಾಡಿನ ಕುರಿತು ನೃತ್ಯ, ಪ್ರಥಮ ಬಿಎ ಹಾಗೂ ತೃತೀಯ ವಿಭಾಗದ ವಿದ್ಯಾರ್ಥಿಗಳಿಂದ ಜಾನಪದ ನೃತ್ಯವನ್ನು ಪ್ರದರ್ಶಿಸಿದರು. ಲಲಿತಾ ಕಲಾ ಸಂಘದ ಸಂಯೋಜಕಿ ಪ್ರಭಾವತಿ ಕೆ. ವಂದಿಸಿದರು. ಅಂತಿಮ ಬಿಕಾಂನ ವಿಂದುಶ್ರೀ ಕಾರ್ಯಕ್ರಮ ನಿರೂಪಿಸಿದರು.



ಘಮಘಮಿಸಿದ ಖಾದ್ಯಗಳು
ಪತ್ರೋಡೆ, ಪತ್ರೋಡೆ ಗಸಿ/ತವಾ ಪ್ರೈ/ಉಪ್ಪುಕರಿ, ಆಟಿದ ತಮ್ಮನ, ತೇಟ್ಲ-ಪೆಲಕಾಯಿ ಸಾರ್, ಚೇವು ದಂಟ್‌ದ ಗಸಿ/ಬೇರ್‌ದ ಗಸಿ/ಕಂಡೆದ ಗಸಿ, ನುರ್ಗೆ ತೊಪ್ಪುದ ಉಪ್ಪುಕರಿ/ ಅಂಬೊಡೆ, ತಜಂಕ್ ಉಪ್ಪುಕರಿ/ಸೊಪ್ಪು-ಪೆಲತ್ತರಿ ಉಪ್ಪುಕರಿ, ಕಣಿಲೆ ಪೆಲತ್ತರಿ ಗಸಿ/ಉಪ್ಪುಕರಿ, ಕಣಿಲೆ ದೋಸೆ, ಲಾಂಬು ಗಸಿ, ಮಂಜಲ್ದ ಇರೆತ್ತ ಅಡ್ಯ, ತೌತೆ ಪೆಲತ್ತರಿ ಸಾರ್, ಉಪ್ಪಡ್ ಪಚ್ಚಿಲ್ ಪೆಲತ್ತರಿ ಗಸಿ/ಉಪ್ಪುಕರಿ, ಉಪ್ಪಡ್ ಪಚ್ಚಿಲ್ ಉಡ್ಲುಂಗ, ತಿಮರೆ/ಕುಡುತ/ಪೀರೆ/ಕೆಂಬುಡೆ ಪೂತ ಚಟ್ನಿ, ದಾಸವಾಳ ಪೂತ ಸಾರ್, ತಾರಾಯಿದ ಗಂಜಿ, ಗೋಂಟ್ ತಾರಾಯಿದ ಚಟ್ನಿ, ಬಸಳೆ/ಮರುವಾಯಿ ಪುಂಡಿ, ಮರುವಾಯಿ ಆಜಾಯಿನ, ರಾಗಿ ಮನ್ನಿ, ಸಾಂಬ್ರಾಣಿ ಪೋಡಿ/ಚಟ್ನಿ, ಪೂಂಬೆ ಪೋಡಿ, ಬಾರೆ ದಂಟ್‌ದ ಪಲ್ಯ, ಪೂಂಬೆ ಉಪ್ಪುಕರಿ, ಬಾರೆ ಕಾಯಿ-ಉಲಿಂಗೆಲ್ ಮೀನ್ ಸಾರ್, ಬಾರೆಕಾಯಿ ಗಸಿ, ಪೆಲಕಾಯಿದ ಗಟ್ಟಿ/ದೋಸೆ, ಕೋರಿ ಆಜಾಯಿನ, ಕೋರಿ ಪುಳಿಮುಂಚಿ ಹೀಗೆ 75ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಂದ ತಯಾರಿಸಲ್ಪಟ್ಟ ನೂರಕ್ಕೂ ಮಿಕ್ಕಿ ಖಾದ್ಯಗಳು ಘಮಘಮಿಸುವಂತಾಗಿತ್ತು.

ಮೂವರಿಗೆ ಸನ್ಮಾನ/ಇನಾಮು..
ಈ ಸಂದರ್ಭದಲ್ಲಿ ದೈವ ನರ್ತಕ ಕರಿಯ ಅಜಿಲ ಕಡ್ಯ, ನಾಟಿ ವೈದ್ಯ ನಾರ್ಣಪ್ಪ ಸಾಲಿಯಾನ್ ಮರಕ್ಕೂರು, ದೈವ ಚಾಕರಿಕ ಮಾಧವ ಮಡಿವಾಲರವರುಗಳ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಸನ್ಮಾನಿತರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ ಆಟಿ ಕೂಟದಲ್ಲಿ ಸುಮಾರು 30 ಬಗೆಯ ತಿಂಡಿಗಳನ್ನು ಮಾಡಿದ ವಿದ್ಯಾರ್ಥಿನಿ ವತ್ಸಲಾ, 20 ಬಗೆಯ ತಿಂಡಿಗಳನ್ನು ಮಾಡಿದ ಉಪನ್ಯಾಸಕ ಹರೀಶ್ಚಂದ್ರರವರಿಗೆ ವಿಶೇಷ ಇನಾಮು ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here