ಪುತ್ತೂರು: ಕಡಬ ತಾಲೂಕಿನ ಆಲಂಕಾರು ಗ್ರಾಮದ ನಾರ್ತಿಲ ಕಲ್ಯಾಣಿ ನಿಲಯ ನಿವಾಸಿ ಪ್ರೀತಂ ಎಂಬವರು ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ನೀಡಿದ ದೂರಿನಂತೆ ಆಲಂಕಾರು ಗ್ರಾಮದ ಕಮ್ಮಿತ್ತಿಲು ನಿವಾಸಿ ಲೋಕೇಶ್ ಗೌಡ ಎಂಬವರ ವಿರುದ್ಧ ಕಡಬ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಪ್ರೀತಂ ಅವರ ಕೋಳಿಫಾರಂಗೆ ಆ.7ರಂದು ಸಂಜೆ 3 ಗಂಟೆಗೆ ಕೋಳಿ ಆಹಾರವನ್ನು ತೆಗೆದುಕೊಂಡು ಬಂದ ಲಾರಿ ಕೋಳಿ ಆಹಾರವನ್ನು ಖಾಲಿ ಮಾಡಿ ವಾಪಾಸು ಹೋಗುವ ವೇಳೆ ರಸ್ತೆಯ ಮಣ್ಣಿನಲ್ಲಿ ಹೂತು ಬಾಕಿಯಾಗಿತ್ತು. ಲಾರಿಯನ್ನು ಬೇರೆ ವಾಹನ ತರಿಸಿ ಎಳೆಯುವ ಬಗ್ಗೆ ಲಾರಿ ಚಾಲಕ ನವೀನರವರೊಂದಿಗೆ ಪ್ರೀತಂ ಮಾತನಾಡುತ್ತಿದ್ದಾಗ ಆಲಂಕಾರು ಗ್ರಾಮದ ಕಮ್ಮಿತ್ತಿಲು ನಿವಾಸಿ ಲೋಕೇಶ ಗೌಡ ಎಂಬವರು ಬಂದು ಪ್ರೀತಂ ಮತ್ತು ಲಾರಿ ಚಾಲಕನನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಲ್ಲಿದ್ದ ಚಾಕುವನ್ನು ತೋರಿಸಿ ಕೈಯಿಂದ ಪ್ರೀತಂರವರ ಕುತ್ತಿಗೆಯನ್ನು ಹಿಡಿದು ಗೋಡೆಗೆ ದೂಡಿ ಹಾಕಿದ ಪರಿಣಾಮ ಪ್ರೀತಂರ ಬೆನ್ನಿಗೆ ಗೋಡೆ ತಾಗಿ ನೋವು ಉಂಟಾಗಿದೆ. ಅಲ್ಲದೆ ಲೊಕೇಶ್ ಚಾಕು ತೋರಿಸಿ ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ಆರೋಪಿಸಲಾಗಿದೆ.
ಪ್ರೀತಂ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಪ್ರೀತಂ ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಕಲಂ: 115(2) 352, 351(3) 352 BNS-2023 ಯಂತೆ ಪ್ರಕರಣ ದಾಖಲಾಗಿದೆ.