ಮಾತುಗಳನ್ನು ಕೇಳುತ್ತಾ ಆನಂದಿಸಬಹುದಾದ ಭಾಷೆ ಸಂಸ್ಕೃತ : ನಾರಾಯಣ ವೈಲಾರ
ಪುತ್ತೂರು: ಎಲ್ಲಾ ಭಾಷೆಗಳ ಬೇರು ಸಂಸ್ಕೃತದಲ್ಲಿದೆ. ಹಾಗಾಗಿ ಸಂಸ್ಕೃತವನ್ನು ಮಾತೃಭಾಷೆ ಎಂದು ಕರೆಯುತ್ತಾರೆ. ಯಾವುದೇ ಕಷ್ಟವಿಲ್ಲದೆ ಅರ್ಥವಾಗುವ ಭಾಷೆ ಇದಾಗಿದ್ದು, ಮಾತುಗಳನ್ನು ಕೇಳುತ್ತಾ ಆನಂದಿಸಬಹುದಾದ ಅಮೃತ ಭಾಷೆಯಾಗಿದೆ ಎಂದು ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಸಂಸ್ಕೃತ ಉಪನ್ಯಾಸಕ ನಾರಾಯಣ ವೈಲಾರ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಸಿ.ಬಿ.ಎಸ್.ಇ. ಸಂಸ್ಥೆಯಲ್ಲಿ ಆಯೋಜಿಸಲಾದ ಸಂಸ್ಕೃತೋತ್ಸವ ಹಾಗೂ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸಂಸ್ಕೃತ ಭಾಷೆಯು ಪ್ರತಿಯೊಬ್ಬರಿಗೂ ಸುಖ, ಸಂತೋಷವನ್ನು ಕೊಟ್ಟ ಭಾಷೆ. ಆದರೆ ಮೆಕಾಲೆ ಶಿಕ್ಷಣ ಬಂದಾಗ ಸಂಸ್ಕೃತ ಭಾಷೆಯು ನಿಧಾನಕ್ಕೆ ಮರೆಯಾಗುತ್ತಾ ಬಂತು. ಸಂಸ್ಕೃತ ಭಾಷೆಗೆ ದೀರ್ಘ ಪರಂಪರೆ ಇದೆ. ಹದಿನೆಂಟು ಪುರಾಣಗಳು, ನಾಲ್ಕು ವೇದಗಳು ಹಾಗೂ ಬೇರೆ ಬೇರೆ ಉತ್ಕೃಷ್ಟ ಕಾವ್ಯಗಳನ್ನು ಸಂಸ್ಕೃತದಲ್ಲಿ ಕಾಣುವುದಕ್ಕೆ ಸಾಧ್ಯ. ಸಂಸ್ಕೃತ ಭಾಷೆ ಎಂಬುದು ನಮ್ಮ ಆತ್ಮವಿದ್ದಂತೆ. ಎಲ್ಲಾ ಭಾಷೆಗೆ ಮೇರು ವ್ಯಕ್ತಿತ್ವವನ್ನು ನೀಡುವ ಏಕೈಕ ಭಾಷೆ ಎಂದರೆ ಅದು ಸಂಸ್ಕೃತ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ತಾಯಿಯ ಸ್ಥಾನದಲ್ಲಿರುವ ಸಂಸ್ಕೃತ ಭಾಷೆಯನ್ನು ಇಂದು ನಾವು ಮರೆಯುತ್ತಿರುವುದು ದುರಂತ. ಸಂಸ್ಕೃತ ಮತ್ತೆ ಪುನಶ್ಚೇತನಗೊಳ್ಳಬೇಕು. ವಿಶ್ವಕ್ಕೆ ಸಂಸ್ಕೃತ ಪಸರಿಸಬೇಕು. ಆ ಕೆಲಸ ಯುವ ಪೀಳಿಗೆಯಿಂದ ಸಾಧಿತವಾಗಬೇಕು ಎಂದು ತಿಳಿಸಿದರು. ಸಂಸ್ಕೃತೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರವನ್ನು ನೀಡಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಶಾಲಾ ಪ್ರಾಂಶುಪಾಲೆ ಮಾಲತಿ ಡಿ. ಭಟ್, ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ಸಂಸ್ಕೃತದ ಕುರಿತು 10ನೇ ತರಗತಿಯ ವಿದ್ಯಾರ್ಥಿ ಸುಧನ್ವ ಪ್ರಸ್ತಾವನೆಗೈದರು. 10ನೇ ತರಗತಿ ವಿದ್ಯಾರ್ಥಿ ಕರ್ಣಾಶ್ರುತ್ ಪ್ರಭು ಸ್ವಾಗತಿಸಿ, ಲಾಸ್ಯ ಸಂತೋಷ್ ವಂದಿಸಿದರು. ಪ್ರಿಯಾಂಶು ರಾವ್ ಅತಿಥಿಗಳನ್ನು ಪರಿಚಯಿಸಿದರು. ಮಂದಿರಾಕಜೆ ಹಾಗೂ ಸುಷುನ್ಮಾ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಗೆ ಆರತಿಯನ್ನು ಬೆಳಗಿ ವಿದ್ಯಾರ್ಥಿಗಳು ಪರಸ್ಪರ ರಕ್ಷೆಯನ್ನು ಕಟ್ಟಿದರು.