ನಾಯಕರಾಗಿ ಗುರುತಿಸಿಕೊಳ್ಳುವುದು ಕೇವಲ ಪದವಿಗಳಿಂದ ಅಥವಾ ಅಧಿಕಾರದಿಂದ ಸಾಧ್ಯವಿಲ್ಲ. ನಿಜವಾದ ನಾಯಕರಾಗುವುದು ಎಂದರೆ ತಮ್ಮ ನಡತೆಯಿಂದ, ಕೃತಿಯಿಂದ, ಶ್ರದ್ಧೆಯಿಂದ ಹಾಗೂ ಮೌಲ್ಯಗಳಿಂದ ಇತರರಿಗೆ ಪ್ರೇರಣೆಯಾಗುವುದು. “ಮಾಡು ಮತ್ತು ತೋರಿಸು” ಎಂಬ ನುಡಿಮುತ್ತು ಎಲ್ಲಾ ಕ್ಷೇತ್ರಗಳಲ್ಲಿ ಅನ್ವಯಿಸುತ್ತದೆ – ಅದು ಮನೆಯಲ್ಲಾಗಲೀ, ಕಛೇರಿಯಲ್ಲಾಗಲೀ ಅಥವಾ ಸಮಾಜದಲ್ಲಿ ಆಗಿರಲಿ.
ಯಾವುದೇ ಗುರಿ ಅಥವಾ ಬದಲಾವಣೆಗೆ ಮುನ್ನುಡಿಯಾಗಬೇಕಾದರೆ, ಅದನ್ನು ಮೊದಲು ನಾವು ಸ್ವತಃ ಅನುಸರಿಸಬೇಕು. ಶಿಸ್ತು, ಪ್ರಾಮಾಣಿಕತೆ, ಸಮಯಪಾಲನೆ, ಸದುದ್ದೇಶ ಮತ್ತು ಸಹಾನುಭೂತಿ ಇವುಗಳನ್ನು ನಾವು ನಾವು ಪಾಲಿಸಿದಾಗ ಮಾತ್ರ ಇತರರಿಂದ ಸಹ ಆ ಮೌಲ್ಯಗಳನ್ನು ನಿರೀಕ್ಷಿಸಬಹುದು. ಮಕ್ಕಳಿಗೆ ಪಾಠ ಕಲಿಸುವದು ಒಂದು ಭಾಗ; ಆದರೆ ಅವರು ನೋಡಿದಂತೆ ಕಲಿಯುತ್ತಾರೆ. ಅದು ಹಿರಿಯರಿಗೂ, ಕಚೇರಿಯ ಸಹೋದ್ಯೋಗಿಗಳಿಗೂ ಸಹ ಅನ್ವಯಿಸುತ್ತದೆ.
ವ್ಯಕ್ತಿಗತ ಬದುಕಲ್ಲಾಗಲೀ ಅಥವಾ ಸಾಮಾಜಿಕ ಬದುಕಲ್ಲಾಗಲಿ, ನಮ್ಮ ನಡಿಗೆ ಬದಲಾವಣೆಗೆ ಮುನ್ನುಡಿಯಾಗಬೇಕು. ಸ್ವಚ್ಛತೆ, ಪರಿಸರ ಸಂರಕ್ಷಣೆ, ಸಾರ್ವಜನಿಕ ನಂಬಿಕೆ ಇಂತಹ ಎಲ್ಲವೂ ನಮ್ಮ ಹೊಣೆಗಾರಿಕೆಯಲ್ಲಿದೆ. ನಾವು ಎಚ್ಚರಿಕೆಯಿಂದ ನಡೆದು, ಸಕಾರಾತ್ಮಕ ನಿದರ್ಶನ ನೀಡಿದಾಗ ಮಾತ್ರ, ನಮ್ಮೆಡೆಗೆ ಗೌರವವೂ, ಪ್ರಭಾವವೂ ಉಂಟಾಗುತ್ತದೆ. ಆದ್ದರಿಂದ, ನಿನ್ನಿಂದ ಬದಲಾವಣೆ ಪ್ರಾರಂಭವಾಗಲಿ. ಮುಂದೆ ಬಾ, ಹೊಣೆ ಹೊತ್ತು, ಕೆಲಸ ಮಾಡಿ, ಮಾದರಿಯಾಗಿ ನಡೆ. ನಾವೆಲ್ಲರೂ ನಾಯಕತ್ವವನ್ನು ತೋರಿಸುವ ಶಕ್ತಿಯುಳ್ಳವರೇ – ಬೇಕಾದದ್ದು ಧೈರ್ಯ, ನಂಬಿಕೆ ಮತ್ತು ಕರ್ತವ್ಯದ ಬದ್ಧತೆ.
ಸೀಮಾ ನಾಗರಾಜ್ ಇನ್ನರವೀಲ್, ಅಧ್ಯಕ್ಷರು, 2020-2021