ರೂ.14.72 ಲಕ್ಷ ನಿವ್ವಳ ಲಾಭ | ಶೇ.12 ಡಿವಿಡೆಂಡ್
ಪುತ್ತೂರು: ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬಳಿಯ ಸಾರಥಿ ಭವನದಲ್ಲಿ ಕಾರ್ಯಾಚರಿಸುತ್ತಿರುವ ಜಿ.ಎನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಇದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.10 ರಂದು ಅಪರಾಹ್ನ ಕೊಂಬೆಟ್ಟು ದ್ರಾವಿಡ ಬ್ರಾಹ್ಮಣ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಇ.ನಾರಾಯಣ ಹೇರಳೆರವರ ಅಧ್ಯಕ್ಷತೆಯಲ್ಲಿ ಜರಗಿತು.
ಸಂಘದ ಅಧ್ಯಕ್ಷ ಇ.ನಾರಾಯಣ ಹೇರಳೆರವರು ಮಹಾಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸಂಘವು ವರದಿ ವರ್ಷದಲ್ಲಿ ಎಲ್ಲಾ ಠೇವಣಿಗಳು ಹಾಗೂ ಪಾಲು ಬಂಡವಾಳ ಸೇರಿ ರೂ,4,50,56,439.4 ಹೊಂದಿದ್ದು, ರೂ.4,10,30,474 ಸಾಲ ರೂಪದಲ್ಲಿ ಕೊಟ್ಟಿರುತ್ತದೆ. ವರ್ಷಾಂತ್ಯಕ್ಕೆ ಶೇ.99% ಸಾಲ ವಸೂಲಾತಿಯಾಗಿದ್ದು ಸಂಸ್ಥೆಯು ರೂ.14,72,288.43 ನಿವ್ವಳ ಲಾಭವನ್ನು ಹೊಂದಿದ್ದು, ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿ, ಸಂಘದ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಹೇಳಿದರು.
ಸಂಸ್ಥೆಯು ವರದಿ ವರ್ಷದಲ್ಲಿ ರೂ.19,72,70,342.41 ವಹಿವಾಟು ಮಾಡಿರುತ್ತದೆ. ಹಾಗೆಯೇ ಸಂಸ್ಥೆಯ ಸದಸ್ಯತ್ವದಲ್ಲಿ, ಠೇವಣಾತಿ ಸ್ವೀಕಾರದಲ್ಲಿ ಹಾಗೂ ಸಹಕಾರಿಯ ದುಡಿಯುವ ಬಂಡವಾಳವನ್ನು ಹೆಚ್ಚಿಸುವಲ್ಲಿ ಸಂಘವು ಉತ್ತಮ ಸಾಧನೆ ಮಾಡಿರುತ್ತದೆ. ವರದಿ ವರ್ಷದಲ್ಲಿ 570 ಮಂದಿ ‘ಎ’ ಸದಸ್ಯತ್ವ ಹೊಂದಿದ್ದು ಹೊಂದಿದ್ದು, ಹೊಸದಾಗಿ 36 ಮಂದಿ ಸಹ ಸದಸ್ಯತ್ವ ಹೊಂದಿರುತ್ತಾರೆ. ವರದಿ ವರ್ಷದಲ್ಲಿ ಹೊಸದಾಗಿ 55 ‘ಎ’ ಕ್ಲಾಸ್ ಸದಸ್ಯತ್ವ ಹಗೂ ಈರ್ವರು ಸಹ ಸದಸ್ಯತ್ವ ಹೊಂದಿರುತ್ತಾರೆ. ಆರು ಜನ ಸದಸ್ಯತ್ವ ತ್ಯಜಿಸಿರುತ್ತಾರೆ. ವರದಿ ವರ್ಷದಲ್ಲಿ ರೂ.6,37,000 ‘ಎ ಕ್ಲಾಸ್’ ಹಾಗೂ 3600 ‘ಬಿ ಕ್ಲಾಸ್’ ಪಾಲು ಬಂಡವಾಳ ಇರುತ್ತದೆ.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಮೋಹನ ಹೊಳ್ಳರವರು ಸಭೆಯ ನೋಟಿಸನ್ನು ಮತ್ತು ಹಿಂದಿನ ಸಭೆಯ ನಡಾವಳಿಯನ್ನು ಓದಿ, ಲೆಕ್ಕಪರಿಶೋಧಕರ ವರದಿಯಲ್ಲಿ ನಮೂದಿಸಿದ ನ್ಯೂನತೆಗಳನ್ನು ಮತ್ತು ಅನುಪಾಲನಾ ವರದಿಯನ್ನು ಸಭೆಗೆ ತಿಳಿಸಿ, 2024-25ನೇ ಸಾಲಿನ ಲೆಕ್ಕಪತ್ರಗಳನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು ಅಲ್ಲದೆ 2024-25ನೇ ಸಾಲಿನ ಆಡಳಿತ ಮಂಡಳಿ ವರದಿ ಮತ್ತು ಅಂಕಿ-ಅಂಶಗಳನ್ನು ಸಭೆಗೆ ತಿಳಿಸಿದರು.
ಸಂಘದ ಉಪಾಧ್ಯಕ್ಷ ಶಿವಪ್ರಸಾದ್ ಎ, ನಿರ್ದೇಶಕರಾದ ಇ.ಗೋಪಾಲಕೃಷ್ಣ ಹೇರಳೆ, ವಿ.ರಾಮಚಂದ್ರ ರಾವ್, ಯಂ.ವೆಂಕಟೇಶ, ಡಿ.ಶಿವಪ್ರಸಾದ, ಬಿ.ಸದಾಶಿವ ಹೊಳ್ಳ, ಲಕ್ಷ್ಮೀ ಐ, ಸುಧಾ ಎನ್.ರಾವ್ ಉಪಸ್ಥಿತರಿದ್ದರು.