ನಿಮ್ಮಲ್ಲಿ ನಿಮಗೆ ನಂಬಿಕೆ ಇರಲಿ; ಗೋಪಿನಾಥ್ ರಾವ್
ಪುತ್ತೂರು: ಧಾವಂತದ ಜಗತ್ತು ನಿಮಗಾಗಿ ಕಾಯುವುದಿಲ್ಲ. ಕಷ್ಟಗಳನ್ನು ಅನುಭವಿಸಿದಾಗ ಗೆಲುವು ಸಾಧಿಸುವುದು ಸುಲಭ. ಜೀವದ ಭಯ ಇಲ್ಲದೆ ಗುರಿ ಇಟ್ಟುಕೊಂಡು ಕೆಲಸ ಮಾಡಿ. ದೇಶ ಮೊದಲು ಎಂಬ ಭಾವನೆ ಎಲ್ಲರಲ್ಲೂ ಮೂಡಿದಾಗ ದೇಶದ ಅಭಿವೃದ್ಧಿ ಸಾಧ್ಯ. ಸ್ವಾಮಿ ವಿವೇಕಾನಂದರ ಚಿಂತನೆಗಳ ಕಿಡಿ ನಿಮ್ಮಲ್ಲಿ ಹುಟ್ಟಿಕೊಂಡಾಗ ಬದುಕು ಉಜ್ವಲವಾಗುತ್ತದೆ ಎಂದು ನಿವೃತ್ತ ಭಾರತೀಯ ಸೇನಾಧಿಕಾರಿ ಬೆಳ್ಳಾಲ ಗೋಪಿನಾಥ್ ರಾವ್ ಸಭೆಯನ್ನು ಉದ್ದೇಶಿಸಿ ಹೇಳಿದರು.
ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಐಕ್ಯೂಎಸಿ ಘಟಕದ ಸಂಯೋಜನೆಯಲ್ಲಿ ನಡೆದ ಜಗತ್ತಿಗೆ ಭಾರತದ ಆಧ್ಯಾತ್ಮಿಕ ಚಿಂತನೆಯನ್ನು ಪರಿಚಯಿಸಿದ ರಾಷ್ಟ್ರ ಸಂತ ಸ್ವಾಮಿ ವಿವೇಕಾನಂದರ ಕುರಿತಾದ ಚಿಂತನೆಗಳ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದರು.
ಕಾಲೇಜು ಆಡಳಿತ ಮಂಡಳಿ ಸಂಚಾಲಕ ಮುರಳಿ ಕೃಷ್ಣ ಕೆ.ಎನ್. ಮಾತನಾಡಿ, “ಸ್ವಾಮಿ ವಿವೇಕಾನಂದರ ಚಿಂತನೆಗಳು, ನಡೆದು ಬಂದ ಹಾದಿ ಶತಮಾನಗಳವರೆಗೂ ಇರುವಂತಹದ್ದು. ಅವರ ನುಡಿಮುತ್ತುಗಳು ನಮಗೆಲ್ಲ ದಾರಿ ದೀಪ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಧರ ನಾಯಕ್ ಬಿ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಹೆಚ್.ಜಿ. ಶ್ರೀಧರ್, ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿದ್ಯಾ ಎಸ್. ಉಪಸ್ಥಿತರಿದ್ದರು.
ಕಾಲೇಜಿನ ಉಪಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಸ್ವಾಗತಿಸಿ, ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ. ವಿಜಯಸರಸ್ವತಿ ವಂದಿಸಿ, ತೃತೀಯ ಬಿಎ ವಿದ್ಯಾರ್ಥಿ ಸವಿತಾ ನಿರೂಪಿಸಿದರು.