ಆ.16: 27ನೇ ವರ್ಷದ ‘ಶ್ರೀಕೃಷ್ಣಲೋಕ’ದ ಸಂಭ್ರಮ

0

ಪುತ್ತೂರು: ಪರ್ಲಡ್ಕ ಶಿವಪೇಟೆಯಲ್ಲಿರುವ ವಿವೇಕಾನಂದ ಶಿಶು ಮಂದಿರದ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯಿಂದ ನಡೆಯುವ 27ನೇ ವರ್ಷದ ‘ಶ್ರೀಕೃಷ್ಣ ಲೋಕ’ ಕಾರ್ಯಕ್ರಮವು ಆ.16ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ನಡೆಯಲಿದೆ ಎಂದು ಕೃಷ್ಣಲೋಕ ಸಮಿತಿ ಅಧ್ಯಕ್ಷ ಮೋಹನ್ ಕೆ ಅವರು ತಿಳಿಸಿದ್ದಾರೆ.


ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಹಿಂದೂ ಸನಾತನ ಸಂಸ್ಕೃತಿಯ ಪ್ರತಿರೂಪವಾಗಿ ವಿವೇಕಾನಂದ ಶಿಶು ಮಂದಿರದಲ್ಲಿ ಕಳೆದ 26 ವರ್ಷಗಳಿಂದ ಶ್ರೀಕೃಷ್ಣಲೋಕ ಕಾರ್ಯಕ್ರಮದ ಮೂಲಕ ಸಾವಿರಾರು ಮಂದಿ ರಾಧೆ, ಕೃಷ್ಣ, ಯಶೋಧೆ ವೇಷಧಾರಿ ಮಕ್ಕಳೊಂದಿಗೆ ವಿಶೇಷ ಶೋಭಾಯಾತ್ರೆಯ ಮೂಲಕ ಅದ್ದೂರಿಯಾಗಿ ನಡೆಯುತ್ತಾ ಬಂದಿರುತ್ತದೆ. ಈ ವರ್ಷವೂ ಅದ್ದೂರಿಯಾಗಿ ಶ್ರೀಕೃಷ್ಣ ಲೋಕ ಕಾರ್ಯಕ್ರಮ ಸಂಭ್ರಮಿಸಲಿದೆ ಎಂದರು.


ಬಾಲಕೃಷ್ಣನ ತೊಟ್ಟಿಲ ಸಂಭ್ರಮ:
ಬೆಳಿಗ್ಗೆ ಗಂಟೆ 9ಕ್ಕೆ ಶಿಶು ಮಂದಿರದ ಆವರಣದಲ್ಲಿ ಕೃಷ್ಣ, ರಾಧೆ, ಯಶೋಧೆಯರ ನೋಂದಾವಣೆಯು ಪ್ರಾರಂಭಗೊಳ್ಳಲಿದೆ. ನಂತರ ಮಕ್ಕಳಿಂದ ಪ್ರಾರ್ಥನೆ, ಭಜನೆಯೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಬಳಿಕ ತೊಟ್ಟಿಲ ಸಂಭ್ರಮದಲ್ಲಿ ಮಗುವಿನ ಅಮ್ಮನಿಗೆ ಆರತಿ ಬೆಳಗಿ ಬಾಗಿನ ನೀಡಲಾಗುವುದು. ನಂತರ ಮಗುವನ್ನು ತೊಟ್ಟಿಲಲ್ಲಿ ತೂಗುವ ಸಂಭ್ರಮವು ನಡೆಯಲಿದೆ. ಮಾತೆಯರು ಬಾಲಕೃಷ್ಣನಿಗೆ ಬೆಣ್ಣೆ ತಿನ್ನಿಸಿ, ಜೋಗುಳ ಹಾಡಲಿದ್ದಾರೆ ಎಂದು ಮೋಹನ್ ತಿಳಿಸಿದರು.


ರಾಧೆ-ಕೃಷ್ಣಯರ ಭವ್ಯ ಶೋಭಾಯಾತ್ರೆ:
ಪ್ರತಿ ವರ್ಷದಂತೆ ಶಿಶು ಮಂದಿರದ ಆವರಣದಿಂದ ರಾಧೆ-ಕೃಷ್ಣ ಭವ್ಯ ಶೋಭಾಯಾತ್ರೆಯು ಬೆಳಿಗ್ಗೆ 9.30 ಗಂಟೆಗೆ ಪ್ರಾರಂಭಗೊಳ್ಳಲಿದೆ. ಶೋಭಾಯಾತ್ರೆಯು ಪರ್ಲಡ್ಕ ಶಿವಪೇಟೆ ವಿವೇಕಾನಂದ ಶಿಶು ಮಂದಿರದ ಬಳಿಯಿಂದ ಹೊರಟು ಮಹಮ್ಮಾಯಿ ದೇವಸ್ಥಾನ ರಸ್ತೆಯಾಗಿ, ಮುಖ್ಯರಸ್ತೆಯ ಮೂಲಕ ಸಾಗಿ ಪ್ರಧಾನ ಅಂಚೆ ಕಚೇರಿ ಮುಂಭಾಗದಿಂದಾಗಿ ಮಹಾಲಿಂಗೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ ಸಮಾಪನಗೊಳ್ಳಲಿದೆ. ರಾಧೆ-ಕೃಷ್ಣರ ವೇಷಧಾರಿ ಸಾವಿರಾರು ಪುಟಾಣಿಗಳು ಶೋಭಾಯಾತ್ರೆಯಲ್ಲಿ ಮೆರುಗು ತರಲಿದೆ. ಪುಟಾಣಿಗಳ ತಾಯಂದಿರು ಸಾಂಪ್ರದಾಯಿಕ ಉಡುಗೆಯೊಂದಿಗೆ ಭಾಗವಹಿಸುವ ಮೂಲಕ ಸನಾತನ ಹಿಂದೂ ಧರ್ಮದ ಆಚರಣೆಯನ್ನು ಎತ್ತಿ ಹಿಡಿಯಲಿದೆ ಎಂದು ಮೋಹನ್ ಹೇಳಿದರು.


ಸಭಾ ಕಾರ್ಯಕ್ರಮ:
ಶೋಭಾಯಾತ್ರೆ ಸಂಪನ್ನಗೊಂಡ ಬಳಿಕ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಉದ್ಘಾಟಿಸಲಿದ್ದಾರೆ. ಅಗಲ್ಪಾಡಿ ಎಸ್‌ಎಪಿಹೆಚ್‌ಎಸ್‌ನ ಅಧ್ಯಾಪಕ ಹರಿನಾರಾಯಣ ಶಿರಂತಡ್ಕ ಅವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸಮಾಜ ಸೇವಕ ಆಗಿಲೆ ಯೋಗೀಶ್ ಹಾಸನ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಡೀನ್ ಡಾ| ವಿಜಯಸರಸ್ವತಿ ಬಿ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಮೋಹನ್ ಅವರು ತಿಳಿಸಿದರು.


1200 ಮಂದಿ ವೇಷಧಾರಿ ಮಕ್ಕಳು ಭಾವಹಿಸುವ ನಿರೀಕ್ಷೆ:
ಈ ಬಾರಿಯ ಶ್ರೀಕೃಷ್ಣಲೋಕದಲ್ಲಿ ಸುಮಾರು 1200 ಮಂದಿ ರಾಧೆ-ಕೃಷ್ಣ-ಯಶೋಧೆ ವೇಷಧಾರಿ ಮಕ್ಕಳು ಭಾಗವಹಿಸುವ ನಿರೀಕ್ಷೆಯಿದೆ. ಇದು ಸ್ಪರ್ಧೆಯಲ್ಲ. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರೋತ್ಸಾಹಕ ಸ್ಮರಣಿಕೆ ನೀಡಲಾಗುವುದು. 10 ವರ್ಷದ ಒಳಗಿನ ಮಕ್ಕಳು ಮುಕ್ತವಾಗಿ ಭಾಗವಹಿಸಬಹುದು. ಭಾಗವಹಿಸುವವರು ಶಿಶು ಮಂದಿರದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಮೋಹನ್ ಅವರು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಗೌರವಾಧ್ಯಕ್ಷೆ ರಾಜೀ ಬಲರಾಮ ಆಚಾರ್ಯ, ಉಪಾಧ್ಯಕ್ಷೆ ಮಾಲಿನಿ ಕಶ್ಯಪ್, ಸದಸ್ಯ ಉಮೇಶ್ ಕುಮಾರ್, ವಿವೇಕಾನಂದ ಶಿಶುಮಂದಿರದ ಸಂಚಾಲಕ ಅಕ್ಷಯ ಕುಮಾರ್ ಬಿ.ಎಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here