ಪುತ್ತೂರು: ಉಡುಪಿ ಮತ್ತು ದ ಕ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿಂದ ಕೆಂಪು ಕಲ್ಲು ವ್ಯವಹಾರದಲ್ಲಿ ಸಮಸ್ಯೆ ಉಂಟಾಗಿದೆ. ಈ ಸಮಸ್ಯೆ ಯ ಬಗ್ಗೆ ಆಳವಾಗಿ ಅಧ್ಯಯನ ನಡೆಸಿದ ಪುತ್ತೂರು ಶಾಸಕ ಅಶೋಕ್ ರೈ ಅವರು ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಸರಕಾರದ ಗಮನ ಸೆಳೆದಿದ್ದಾರೆ. ಆದರೆ ಪುತ್ತೂರು ಶಾಸಕರು ಮತನಾಡಿದ ಬಳಿಕ ಇದೇ ವಿಚಾರದಲ್ಲಿ ಸದನದಲ್ಲಿದ್ದ ಬಿಜೆಪಿ ಶಾಸಕರು ಮಾತನಾಡುತ್ತಾರೆ, ಅಶೋಕ್ ರೈ ಅವರ ವಿಷಯವನ್ನು ಕದ್ದು ಇವರು ಮಾತನಾಡುತ್ತಿದ್ದಾರೆ ಇದು ಅತ್ಯಂತ ನಾಚಿಕೆಗೇಡಿನ ವಿಚಾರವಾಗಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ವಕ್ತಾರ ನಿಹಾಲ್ ಪಿ ಶೆಟ್ಟಿ ಆರೋಪ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ನಿಹಾಲ್ ಪಿ ಶೆಟ್ಟಿಯವರು ಮಾತನಾಡಿ, ಕೆಂಪು ಕಲ್ಲಿನ ಸಮಸ್ಯೆ ಬಗ್ಗೆ ಮಾತನಾಡಿದ್ದು ಶಾಸಕ ಅಶೋಕ್ ರೈ ಮಾತ್ರ. ಉಳಿದವರು ಆ ಪ್ರಶ್ನೆಯನ್ನು ಕೇಳಿಲ್ಲ. ಬೆಳಿಗ್ಗೆಯಿಂದ ಸದನ ಆರಂಭಾಗಿತ್ತು. ಸಂಜೆಯವರೆಗೂ ವಿರೋಧ ಪಕ್ಷದ ಬಿಜೆಪಿ ಶಾಸಕರು ಮಾತನಾಡಿದ್ದಾರೆ. ಉಡುಪಿ, ದ ಕ ಜಿಲ್ಲೆಯ ಶಾಸಕರಿಗೆ ಮಾತನಾಡಲು ಸಾಕಷ್ಟು ಅವಕಾಶ ಇತ್ತು ಆದರೆ ಯಾರೂ ಕೆಂಪು ಕಲ್ಲು ಸಮಸ್ಯೆಯ ಬಗ್ಗೆ ತುಟಿ ಬಿಚ್ಚಲಿಲ್ಲ. ಪುತ್ತೂರು ಶಾಸಕರಾದ ಅಶೋಕ್ ರೈ ಅವರಿಗೆ ಸದನದಲ್ಲಿ ಮಾತನಾಡಲು ಸಂಜೆ ವೇಳೆ ಅವಕಾಶ ಸಿಕ್ಕಿದೆ ಆ ವೇಳೆ ಕೆಂಪು ಕಲ್ಲಿನ ಸಮಸ್ಯೆ ಬಗ್ಗೆ ಸರಕಾರದ ಗಮನ ಸೆಳೆದರು. ಆ ಬಳಿಕ ಬಿಜೆಪಿ ಶಾಸಕರು ಇದರ ಮೈಲೇಜ್ ಪಡೆದುಕೊಂಡು ನಾವೂ ಮಾತನಾಡಿದ್ದೇವೆ ಎಂದು ಜನರಿಗೆ ತೋರ್ಪಡಿಸುವ ಉದ್ದೇಶದಿಂದ ಮಾತನಾಡಿದ್ದಾರೆ ಎಂದು ಹೇಳಿದರು.
ಶಾಸಕ ಅಶೋಕ್ ರೈ ಅವರು ಯಾವುದೇ ವಿಚಾರಗಳ ಬಗ್ಗೆ ಸದನದಲ್ಲಿ ಮಾತನಾಡುವ ಮುನ್ನ ವಿಚಾರದ ಬಗ್ಗೆ ಆಳವಾಗಿ ಅಧ್ಯಯನ ನಡೆಸುತ್ತಾರೆ, ಮಾಹಿತಿ ಇಲ್ಲದೆ ಮಾತನಾಡುವುದೇ ಇಲ್ಲ. ಈ ಹಿಂದೆ ತುಳು ವಿಚಾರ, ಕಂಬಳ ವಿಚಾರದಲ್ಲೂ ಬಿಜೆಪಿ ಶಾಸಕರು ಮೈಲೇಜ್ ಪಡೆದುಕೊಳ್ಳಲು ಯತ್ನ ನಡೆಸಿದ್ದಾರೆ. ಜನ ತುಂಬ ಬುದ್ದಿವಂತರಾಗಿದ್ದು ಯಾರು ಜನರ ಸಮಸ್ಯೆ ಬಗ್ಗೆ ಅರಿತು ಮಾತನಾಡುತ್ತಾರೆ ಎಂಬುದು ಚೆನ್ನಾಗಿ ಗೊತ್ತಿದೆ. ಬಿಜೆಪಿ ಶಾಸಕರು ಜನರ ಸಮಸ್ಯೆಗಳ ಬಗ್ಗೆ ಸ್ವಯಂ ಪ್ರಶ್ನೆಯನ್ನು ನೀಡುವ ಮೂಲಕ ಮಾತನಾಡಬೇಕೇ ವಿನಾ ಬೇರೆಯವರು ಮಾತನಾಡುವಾಗ ಎಡೆಯಲ್ಲಿ ಮೂಗು ತೂರಿಸುವ ಕೆಲಸವನ್ನು ನಿಲ್ಲಿಸಬೇಕು ಎಂದು ಲೇವಡಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ವಕ್ತಾರರಾದ ರವೀಂದ್ರ ನೆಕ್ಕಿಲು, ಚಂದ್ರಪ್ರಭಾ, ಪ್ರಧಾನಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.