ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಹಾಗೂ ಎಂಸಿಎ ವಿಭಾಗಗಳ ಆಶ್ರಯದಲ್ಲಿ ಕೃತಕ ಬುದ್ದಿಮತ್ತೆಯೊಂದಿಗೆ ಮುಂದಿನ ಪೀಳಿಗೆಯ ಬೋಧನೆ ಮತ್ತು ಎಐ ಪರಿಕರಗಳ ಪ್ರಾಯೋಗಿಕ ಪರಿಚಯ ಎನ್ನುವ ವಿಷಯದ ಬಗ್ಗೆ 5 ದಿನಗಳ ಅಧ್ಯಾಪಕರ ಜ್ಞಾನಾಭಿವೃದ್ಧಿ ಕಾರ್ಯಾಗಾರವು ಕಾಲೇಜಿನ ಶ್ರೀರಾಮ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾಡಿದ ಬೆಂಗಳೂರಿನ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಎಂಡ್ ಇಂಜಿನಿಯರಿಂಗ್ (ಸೈಬರ್ ಸೆಕ್ಯುರಿಟಿ) ವಿಭಾಗದ ಅಸೋಸಿಯೇಟ್ ಪ್ರೊಫೇಸರ್ ಡಾ.ಮಂಜುನಾಥ್.ಬಿ.ಆರ್ ಯಾವುದೇ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸುವ ಮೊದಲು ಅಧ್ಯಾಪಕನು ಅದರಲ್ಲಿ ಪರಿಣತಿಯನ್ನು ಹೊಂದಿರಬೇಕು, ಒಂದು ವಿಷಯವನ್ನು ಒಪ್ಪಿಕೊಂಡ ಬಳಿಕ ಅದನ್ನು ಪೂರ್ಣಗೊಳಿಸುವುದು ನಮ್ಮ ಜವಾಬ್ಧಾರಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ ಅಧ್ಯಾಪಕರು ಎಲ್ಲಾ ವಿಷಯವನ್ನು ತಿಳಿದುಕೊಂಡಿರುತ್ತಾರೆ ಎನ್ನುವ ವಿದ್ಯಾರ್ಥಿಗಳ ಮನೋಭಾವಕ್ಕೆ ತಕ್ಕಂತೆ ಹೊಸ ಹೊಸ ವಿಷಯಗಳನ್ನು ಕಲಿಯುತ್ತಾ ತಮ್ಮನ್ನು ತಾವು ಎತ್ತರಿಸಿಕೊಳ್ಳುವ ಸವಾಲು ಅಧ್ಯಾಪಕರಿಗಿದೆ ಈ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ಸೂಕ್ತವೆನಿಸುತ್ತವೆ ಎಂದರು.
ಕೊನೆಯ ದಿನ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಓವ್ಯೋ ಟೆಕ್ ಸರ್ವಿಸಸ್ ಇದರ ಸಾಫ್ಟ್‌ವೇರ್ ಇಂಜಿನಿಯರ್ ದ್ವಾರಕಾನಾಥ್ ರಾವ್ ಮಾತನಾಡಿ ನಮ್ಮ ವಿದ್ಯಾರ್ಹತೆ, ಡಿಗ್ರಿಗಳು ನಮಗೆ ಅವಕಾಶಗಳನ್ನು ಒದಗಿಸಿಕೊಡುತ್ತವೆ ಆದರೆ ಅದನ್ನು ಉಳಿಸಿಕೊಳ್ಳುವಲ್ಲಿ ನಮ್ಮ ಅನುಭವ ಹಾಗೂ ವೃತ್ತಿಪರತೆ ಮುಖ್ಯ ಪಾತ್ರವನ್ನು ವಹಿಸುತ್ತವೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ, ಕಾರ್ಯಕ್ರಮ ಸಂಯೋಜಕ ಡಾ.ಮನುಜೇಶ್.ಬಿ.ಜೆ, ಎಂಸಿಎ ವಿಭಾಗದ ನಿರ್ದೆಶಕಿ ಡಾ.ಜ್ಯೋತಿಮಣಿ ಉಪಸ್ಥಿತರಿದ್ದರು.
ಶೈಕ್ಷಣಿಕ ಚಟುವಟಿಕೆಗಳಿಗೆ, ಸಂಶೋಧನೆಗಳಿಗೆ ಬಳಕೆಯಾಗುವ ಕೃತಕ ಬುದ್ದಿಮತ್ತೆಯ ವಿವಿಧ ವಿಷಯಗಳ ಬಗ್ಗೆ ಪ್ರಾಯೋಗಿಕ ತರಬೇತಿಯನ್ನು ಈ ಕಾರ್ಯಾಗಾರದಲ್ಲಿ ನೀಡಲಾಯಿತು. ಉತ್ಪಾದನೆ ಮತ್ತು ನೈತಿಕ ಅಭ್ಯಾಸಗಳ ಬಗ್ಗೆಯೂ ಮಾಹಿತಿ ನೀಡಲಾಯಿತು.
ಕಂಪ್ಯೂಟರ್ ಸೈನ್ಸ್, ಎಂಸಿಎ ಮತ್ತು ಆರ್ಟಿಫೀಷಿಯಲ್ ಇಂಟೆಲಿಜೆನ್ಸ್ ವಿಭಾಗದ ಅನುಭವೀ ಸಂಪನ್ಮೂಲ ವ್ಯಕ್ತಿಗಳು ಇದನ್ನು ನಡೆಸಿಕೊಟ್ಟರು.