ಶಿಕ್ಷಣ ವ್ಯವಸ್ಥೆಯ ಹೃದಯವೆಂದರೆ ಅದು ಗ್ರಂಥಾಲಯ-ನೇಮಿಚಂದ್ರ ಗೌಡ
ಪುತ್ತೂರು: ಸಂತ ಫಿಲೋಮಿನಾ ಪದವಿ(ಸ್ವಾಯತ್ತ) ಕಾಲೇಜಿನ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ, ಭಾರತದ ಗ್ರಂಥಾಲಯ ಪಿತಾಮಹ ಡಾ. ಎಸ್. ಆರ್. ರಂಗನಾಥನ್ ಅವರ 133ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಆ.೧೨ರಂದು ಕಾಲೇಜಿನ ಸ್ಪಂದನ ಸೆಮಿನಾರ್ ಹಾಲ್‌ನಲ್ಲಿ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಐಕಳ ಪಾಂಪೆ ಕಾಲೇಜಿನ ಕನ್ನಡ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ನೇಮಿಚಂದ್ರ ಗೌಡ ಮಾತನಾಡಿ ಯಾವುದೇ ಶಿಕ್ಷಣ ವ್ಯವಸ್ಥೆಯ ಹೃದಯವೆಂದರೆ ಅದು ಗ್ರಂಥಾಲಯ. ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಭೇಟಿ ನೀಡುವುದನ್ನು ಹೆಚ್ಚಿಸಬೇಕು ಮತ್ತು ಪುಸ್ತಕಗಳ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಪುಸ್ತಕವನ್ನು ತಲೆ ತಗ್ಗಿಸಿ ಓದಿದರೆ ಅದು ನಮ್ಮನ್ನು ತಲೆಯೆತ್ತಿ ನಿಲ್ಲುವಂತೆ ಮಾಡುತ್ತದೆ. ಮೊಬೈಲ್‌ನ್ನು ತಲೆ ತಗ್ಗಿಸಿ ನೋಡಿದರೆ ಅದು ಜೀವನ ಪೂರ್ತಿ ತಲೆ ಎತ್ತದಂತೆ ಮಾಡುತ್ತದೆ ಎಂದು ಹೇಳಿದ ಅವರು ಭಾರತದಲ್ಲಿನ ಗ್ರಂಥಾಲಯ ಚಟುವಟಿಕೆಗಳಿಗೆ ಡಾ. ಎಸ್.ಆರ್. ರಂಗನಾಥನ್‌ರವರ ಕೊಡುಗೆಗಳನ್ನು ಸ್ಮರಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪ ಪ್ರಾಂಶುಪಾಲ ಡಾ. ವಿಜಯಕುಮಾರ್ ಎಂ. ಮಾತನಾಡಿ ಪ್ರತಿ ವಿದ್ಯಾರ್ಥಿಯೂ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಎಲ್ಲರೂ ಮನೆಯಲ್ಲಿ ವೈಯಕ್ತಿಕ ಗ್ರಂಥಾಲಯ ನಿರ್ಮಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಕಾಲೇಜಿನ ಗ್ರಂಥಪಾಲಕ ಅಬ್ದುಲ್ ರೆಹಮಾನ್ ಜಿ. ಸ್ವಾಗತಿಸಿ, ಪಿ.ಜಿ ಸೆಂಟರ್‌ನ ಗ್ರಂಥಪಾಲಕ ಮನೋಹರ್ ಎಸ್.ಜಿ. ವಂದಿಸಿದರು. ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು. ಲಲಿತ ಕಲಾ ಕೇಂದ್ರದ ವಿದ್ಯಾರ್ಥಿಗಳಾದ ಅಪರ್ಣ ಎಸ್. ಮತ್ತು ತಂಡದವರು ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ರೈ, ಗ್ರಂಥಾಲಯ ಸಿಬ್ಬಂದಿಗಳಾದ ಜೀಟಾ ನೊರೋನ್ಹಾ ಮತ್ತು ಕ್ಯಾಥರಿನ್ ಕ್ರಾಸ್ತಾ ಸಹಕರಿಸಿದರು. 110 ವಿದ್ಯಾರ್ಥಿಗಳು ಭಾಗವಹಿಸಿದರು. ಐಕ್ಯೂಎಸಿ ಸಂಯೋಜಕ ಡಾ. ಎಡ್ವಿನ್ ಡಿಸೋಜಾ ಮತ್ತು ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ರೈ, ಹರ್ಷಿತಾ ಪಿ.ವಿ., ಮತ್ತು ಭರತ್ ಕುಮಾರ್ ಉಪಸ್ಥಿತರಿದ್ದರು.