ಪುತ್ತೂರು ಮಹಿಳಾ ಪೊಲೀಸ್ ಠಾಣೆ ಸ್ಥಳಾಂತರದ ಅವಶ್ಯಕತೆ ಇರುವುದಿಲ್ಲ : ಶಾಸಕ ಅಶೋಕ್ ಕುಮಾರ್ ರೈ ಪ್ರಶ್ನೆಗೆ ಗೃಹ ಸಚಿವ ಡಾ|ಜಿ.ಪರಮೇಶ್ವರ್ ಉತ್ತರ

0

ಪುತ್ತೂರು:ಪುತ್ತೂರು ಮಹಿಳಾ ಪೊಲೀಸ್ ಠಾಣೆಯನ್ನು ಕಾಯ್ದಿರಿಸಿರುವ ಜಮೀನಿಗೆ ಸ್ಥಳಾಂತರಿಸುವ ಅವಶ್ಯಕತೆ ಇರುವುದಿಲ್ಲ ಎಂದು ಗೃಹ ಸಚಿವ ಡಾ|ಜಿ.ಪರಮೇಶ್ವರ್ ಹೇಳಿದ್ದಾರೆ.ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಕೇಳಿರುವ ಪ್ರಶ್ನೆಗೆ ಗೃಹಸಚಿವರು ಉತ್ತರ ನೀಡಿದ್ದಾರೆ.


ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಪುತ್ತೂರು ಮುಖ್ಯ ಭಾಗದಲ್ಲಿ ಜಾಗ ಕಾಯ್ದಿರಿಸಲಾಗಿದ್ದು ಕಾಯ್ದಿರಿಸಿದ ಸ್ಥಳಕ್ಕೆ ಠಾಣೆಯನ್ನು ಸ್ಥಳಾಂತರಿಸದೇ ಇರಲು ಕಾರಣಗಳೇನು ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಗೃಹ ಸಚಿವರು, ಪುತ್ತೂರು ಮಹಿಳಾ ಪೊಲೀಸ್ ಠಾಣೆಯು ಪ್ರಸ್ತುತ ಪುತ್ತೂರು ನಗರದ ಕೇಂದ್ರ ಭಾಗದಲ್ಲಿ ಹಲವಾರು ವರ್ಷಗಳ ಹಿಂದಿನಿಂದಲೂ ಕಾರ್ಯನಿರ್ವಹಿಸುತ್ತಿದೆ.ಕಟ್ಟಡವು ನಗರದಲ್ಲಿ ಇರುವುದರಿಂದ ತುರ್ತಾಗಿ ಮಹಿಳೆ ಮತ್ತು ಮಕ್ಕಳಿಗೆ ತಮ್ಮ ಸಮಸ್ಯೆ ಮತ್ತು ಅಹವಾಲುಗಳನ್ನು ತ್ವರಿತವಾಗಿ ಸಂಪರ್ಕಿಸಿ ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಸ್ಥಳವಾಗಿರುತ್ತದೆ.ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭಕ್ತರು ಜಾಸ್ತಿ ಬರುವುದರಿಂದ ಮತ್ತು ಇನ್ನಿತರ ಸಮಯ ನಗರದಲ್ಲಿ ಕಳ್ಳತನ, ಇನ್ನಿತರ ಅಪರಾಧ ತಡೆಗಟ್ಟಲು ಠಾಣೆಯ ಕಟ್ಟಡವು ಅಲ್ಲಿಯೇ ಇರುವುದು ಸೂಕ್ತವಾಗಿರುತ್ತದೆ.ಪ್ರಸ್ತುತ ಠಾಣೆಯ ಕಟ್ಟಡವು ದೇವಸ್ಥಾನದ ಪಕ್ಕದಲ್ಲಿರುವ ಕಾರಣ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಜನದಟ್ಟಣೆ ಇರುವುದರಿಂದ ಆ ಸಮಯದಲ್ಲಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸಲು ಪೊಲೀಸ್ ಅಧಿಕಾರಿ/ಸಿಬ್ಬಂದಿಯವರಿಗೆ ಸಹಕಾರಿಯಾಗಿದ್ದು ಪ್ರಸ್ತುತ ಸಾರ್ವಜನಿಕರಿಗೆ ಮತ್ತು ದೂರುದಾರರಿಗೆ ಅತ್ಯಂತ ಸುಲಭವಾಗಿ ಠಾಣೆಗೆ ಬರಲು ಮತ್ತು ತಮ್ಮ ಅಹವಾಲುಗಳನ್ನು ಹಾಗೂ ಫಿರ್ಯಾದುಗಳನ್ನು ಸಲ್ಲಿಸಲು ಅನುಕೂಲವಾಗಿರುತ್ತದೆ ಎಂದರು.


2 ಎಕ್ರೆ ಜಮೀನು ಅಗತ್ಯ ಕಾಯ್ದಿರಿಸಿರುವುದು 8 ಸೆಂಟ್ಸ್:
ಪೊಲೀಸ್ ಠಾಣೆಗೆ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲು 2 ಎಕ್ರೆ ಜಮೀನು ಬೇಕಾಗಿದ್ದು ಠಾಣೆಯನ್ನು ಬೇರೆ ಜಮೀನಿಗೆ ಸ್ಥಳಾಂತರಿಸಿದಲ್ಲಿ ಪೊಲೀಸ್ ಅಧಿಕಾರಿ/ಸಿಬ್ಬಂದಿಯವರಿಗೆ ಮೂಲಭೂತ ಸೌಕರ್ಯ ಒದಗಿಸಲು ಅಸಾಧ್ಯವಾಗಿರುತ್ತದೆ.ಈ ಕಾರಣಗಳಿಂದ ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಳಾಂತರಿಸಲು ಅನಾನುಕೂಲವಾಗಿರುತ್ತದೆ.ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಕಾಯ್ದಿರಿಸಿರುವ ಜಮೀನು ಕೇವಲ 0.08 ಎಕ್ರೆ ಇರುವುದರಿಂದ ಪೊಲೀಸ್ ಠಾಣೆಯ ಅವಶ್ಯಕತೆಗನುಗುಣವಾಗಿ ಹೊಸ ಕಟ್ಟಡ ನಿರ್ಮಾಣ ಮಾಡಲು ಸ್ಥಳಾವಕಾಶದ ಕೊರತೆ ಇರುವುದರಿಂದ ಠಾಣೆಯನ್ನು ಕಾಯ್ದಿರಿಸಿದ ಜಮೀನಿಗೆ ಸ್ಥಳಾಂತರಿಸುವ ಅವಶ್ಯಕತೆ ಇರುವುದಿಲ್ಲ ಎಂದು ಗೃಹ ಸಚಿವರು ಉತ್ತರ ನೀಡಿದ್ದಾರೆ.

LEAVE A REPLY

Please enter your comment!
Please enter your name here