ಪುತ್ತೂರು: ಅಕ್ಷಯ ಕಾಲೇಜು, ಪುತ್ತೂರಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕ ಹಾಗೂ ಆಂತರಿಕ ಗುಣಮಟ್ಟ ಭರವಸೆ ಘಟಕ (ಐಕ್ಯೂಎಸಿ) ಸಹಯೋಗದೊಂದಿಗೆ ಆಯೋಜಿಸಲಾದ ಎನ್ ಎಸ್ ಎಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಆಗಸ್ಟ್ 12ರಂದು ಕಾಲೇಜು ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು, ಜಿಡೆಕಲ್ಲಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ ಅವರು “ಎನ್ ಎಸ್ ಎಸ್ ಕೇವಲ ಒಂದು ಘಟಕವಲ್ಲ, ಅದು ವ್ಯಕ್ತಿತ್ವ ನಿರ್ಮಾಣದ ಪಾಠಶಾಲೆ. ಇಲ್ಲಿ ಕಲಿಯುವ ಪಾಠಗಳು ಪಠ್ಯಪುಸ್ತಕಗಳಲ್ಲಿ ಸಿಗುವುದಿಲ್ಲ. ಸೇವಾ ಮನೋಭಾವ, ಶಿಸ್ತು, ಸಮಯ ಪಾಲನೆ ಮತ್ತು ತಂಡದಲ್ಲಿ ಕೆಲಸ ಮಾಡುವ ಕೌಶಲ್ಯ ಇವು ಜೀವನದ ಯಶಸ್ಸಿಗೆ ಅವಶ್ಯ. ವಿದ್ಯಾರ್ಥಿಗಳು ಸಮಾಜದ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಹುಡುಕುವ ದೃಷ್ಟಿಕೋನವನ್ನು ಹೊಂದಬೇಕು. ಎನ್ ಎಸ್ ಎಸ್ ಚಟುವಟಿಕೆಗಳು ಗ್ರಾಮೀಣಾಭಿವೃದ್ಧಿ, ಪರಿಸರಸಂರಕ್ಷಣೆ, ಆರೋಗ್ಯಜಾಗೃತಿ, ಮತ್ತು ಶಿಕ್ಷಣ ಪ್ರಚಾರದಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಐಕ್ಯೂಎಸಿ ಸಹಯೋಗದಂತಹ ಕಾರ್ಯಕ್ರಮಗಳು ಕಾಲೇಜಿನ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ವಿದ್ಯಾರ್ಥಿಗಳಲ್ಲಿ ಶ್ರೇಷ್ಠತೆಯತ್ತ ಮುನ್ನಡೆಯುವ ಮನೋಭಾವ ಬೆಳೆಸಲು ನೆರವಾಗುತ್ತವೆ. ಸೇವೆಯ ಮೂಲಕ ವ್ಯಕ್ತಿತ್ವವನ್ನು ವಿಕಸನಗೊಳಿಸಿ, ಸಮಾಜಕ್ಕೆ ಉತ್ತಮ ನಾಗರಿಕರಾಗುವುದು ಯುವಕರ ಪ್ರಮುಖ ಗುರಿಯಾಗಿರಬೇಕು,” ಎಂದು ಹೇಳಿದರು.
ಅಧ್ಯಕ್ಷತೆಯನ್ನುಅಕ್ಷಯ ಕಾಲೇಜಿನ ಪ್ರಾಂಶುಪಾಲ ಸಂಪತ್ ಪಕ್ಕಳ ವಹಿಸಿ, “ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಎನ್ಎಸ್ಎಸ್ ಚಟುವಟಿಕೆಗಳು ಅತ್ಯಂತ ಅಗತ್ಯ. ಸೇವಾ ಮನೋಭಾವದಿಂದ ಸಮಾಜಕ್ಕೆ ಕೊಡುಗೆ ನೀಡುವ ಯುವಕರೇ ನಾಳೆಯ ಶಕ್ತಿಯುತ ರಾಷ್ಟ್ರ ನಿರ್ಮಾತೃಗಳು.ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಜೀವನ ಮೌಲ್ಯಗಳನ್ನು ಬೆಳೆಸುತ್ತವೆ,” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಘಟಕ -1 ರ ಯೋಜನಾಧಿಕಾರಿ ರಾಕೇಶ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಐಕ್ಯೂಎಸಿ ಸಂಯೋಜಕಿ ರಶ್ಮಿ ಕೆ., ಎನ್ಎಸ್ಎಸ್ -2 ರ ಯೋಜನಾಧಿಕಾರಿ ಮೇಘಶ್ರೀ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಸ್ವಯಂ ಸೇವಕಿಯರು ಪ್ರಾರ್ಥಿಸಿ, ಪ್ರಕೃತಿ ಏಕತಾ ಗೀತೆ ಹಾಡಿದರು. ಎನ್ಎಸ್ಎಸ್ ನಾಯಕ ರಾಕೇಶ್ ವಂದಿಸಿ, ವಿಂದುಶ್ರೀ ಕಾರ್ಯಕ್ರಮ ನಿರೂಪಿಸಿದರು.