ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆ.14 ರಿಂದ 21ರ ತನಕ ನಡೆಯಲಿರುವ ಭಜನಾ ಕಮ್ಮಟದ ಬಗ್ಗೆ ಪೂರ್ವಭಾವಿ ಸಭೆ ಮತ್ತು ಪುತ್ತೂರು ತಾಲೂಕು ಭಜನಾ ಪರಿಷತ್ನ ಸಭೆಯು ಆ.14ರಂದು ಶ್ರೀ ಧರ್ಮಸ್ಥಳ ಕಟ್ಟಡದ ಯೋಜನೆಯ ಸಭಾಂಗಣದಲ್ಲಿ ನಡೆಯಿತು.
ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಭಜನಾ ಪರಿಷತ್ನ ತಾಲೂಕು ಅಧ್ಯಕ್ಷ ಲೋಕೇಶ್ ಬೆತ್ತೋಡಿಯವರು ಮಾತನಾಡಿ, ಧರ್ಮಾಧಿಕಾರಿಗಳು ಭಜನೆ ಮೂಲಕ ಸಮಾಜವನ್ನು ಸಂಘಟಿಸುವುದು, ಧಾರ್ಮಿಕ ಆಚರಣೆ ನಂಬಿಕೆಗಳನ್ನು ಉಳಿಸುವುದರದೊಂದಿಗೆ ಸಮಾಜಕ್ಕೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಪ್ರತಿವರ್ಷ ಭಜನಾ ಕಮ್ಮಟ ನಡೆಸಿ ತರಬೇತಿಯನ್ನು ನೀಡುತ್ತಿದ್ದಾರೆ. ನಂತರ ತಮ್ಮ ಊರಿನಲ್ಲಿ ಭಜನಾ ಆಸಕ್ತರನ್ನು ಸೇರಿಸಿಕೊಂಡು ಭಜನಾ ಮಂಡಳಿಗಳ ರಚನೆ ಮಾಡಿ ತರಬೇತಿ ನೀಡುವ ಸೇವೆ ನೀಡುತ್ತಿದ್ದಾರೆ. ಇದರಿಂದ ಇವತ್ತು ಅನೇಕ ಭಜನಾ ಮಂಡಳಿಗಳು ರಚನೆಯಾಗಿರುತ್ತದೆ. ಭಜನಾ ತರಬೇತಿಗೆ ಒಂದು ಭಜನಾ ಮಂಡಳಿಯಿಂದ ಇಬ್ಬರಿಗೆ ಭಾಗವಹಿಸಲು ಅವಕಾಶವಿದ್ದು, 8 ದಿನಗಳ ಕಾಲ ಉಚಿತವಾಗಿ ತರಬೇತಿ ನೀಡಲಾಗುತ್ತದೆ. ಆ.21ರಂದು ಭಜನಾ ಮಂಗಳೋತ್ಸವದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಭಜನಾ ಮಂಡಳಿಗಳು ಭಾಗವಹಿಸಿ ಭಜನಾ ಮಂಗಳೋತ್ಸವ ನಡೆಯಲಿದೆ ಎಂದು ತಿಳಿಸಿದರು.
ಭಜನಾ ಪರಿಷತ್ ಜಿಲ್ಲಾ ಸಮನ್ವಯಧಿಕಾರಿ ಸಂತೋಷ್ ಪಿ. ಅವರು ಮಾತನಾಡಿ ತಾಲೂಕಿನಿಂದ ಒಂದು ಭಜನಾ ಮಂಡಳಿಯನ್ನು ಶ್ರೇಷ್ಠ ಭಜನಾ ಮಂಡಳಿ ಎಂದು ಆಯ್ಕೆ ಮಾಡುತ್ತಿದ್ದು ಇದಕ್ಕೆ ಅರ್ಜಿ ಪಡೆಯುವಂತೆ ತಿಳಿಸಿದರು. ಜಿಲ್ಲಾ ನಿರ್ದೇಶಕರು ಎ. ಬಾಬು ನಾಯ್ಕ ಮಾತನಾಡಿ, ಭಜನೆಯ ಮೂಲಕ ನಾವು ಜಾಗೃತರಾಗಿ ಮನೆಯಲ್ಲಿ ಮತ್ತು ಸಮಾಜದಲ್ಲಿ ಒಂದು ಧನಾತ್ಮಕ ವಾತಾವರಣ ಸೃಷ್ಠಿಯಾಗುತ್ತದೆ. ಮಕ್ಕಳಲ್ಲಿ ಉತ್ತಮ ಸಂಸ್ಕಾರ ನಂಬಿಕೆಗಳು ಮೂಡುತ್ತದೆ. ದೇವರ ಮೇಲಿನ ಭಕ್ತಿ ಶ್ರದ್ಧೆ ಮತ್ತಷ್ಟು ಹೆಚ್ಚಾಗಿ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದು ತಿಳಿಸಿದರು. ಮುಂದಕ್ಕೆ ಪ್ರತಿ ವಲಯದಲ್ಲೂ ಒಂದು ಭಜನೋತ್ಸವ ಕಾರ್ಯಕ್ರಮ ನಡೆಸುವಂತೆ ತಿಳಿಸಿದರು.
ಭಜನಾ ಪರಿಷತ್ನ ಮಾಜಿ ಅಧ್ಯಕ್ಷ ಸುಬ್ರಾಯ ರೈ, ಉಪಾಧ್ಯಕ್ಷ ಗಂಗಾಧರ ರೈ, ಕಾರ್ಯದರ್ಶಿ ಗೋಪಾಲಕೃಷ್ಣ ಪಾಟಾಳಿ, ಜೊತೆ ಕಾರ್ಯದರ್ಶಿ ಸುಜಯ, ಕೋಶಾಧಿಕಾರಿ ಸುಧಾಕರ, ಮತ್ತು ವಲಯ ಸಂಯೋಜಕರು, ಮೇಲ್ವಿಚಾರಕರು ಭಜನಾ ಮಂಡಳಿಗಳ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯೋಜನಾದಿ ಶಿಶಿಧರ್ ಎಂ ಸ್ವಾಗತಿಸಿ, ಬಲ್ನಾಡು ವಲಯದ ಮೇಲ್ವಿಚಾರಕ ಪ್ರಶಾಂತ್ ಕುಮಾರ್ ವಂದಿಸಿದರು.