ಪುತ್ತೂರು:ಸರಕಾರಿ ಪ್ರಥಮ ದರ್ಜೆ ಕಾಲೇಜು ಪುತ್ತೂರು ಜಿಡೆಕಲ್ಲು ಇದರ ನೂತನ ಕಾಲೇಜ್ ಅಭಿವೃದ್ಧಿ ಸಮಿತಿ ಶಾಸಕ ಅಶೋಕ್ ಕುಮಾರ್ ರೈರವರ ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಇದರ ಮೊದಲ ಸಭೆ ಕಾಲೇಜಿನಲ್ಲಿ ನಡೆಯಿತು.
ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾಗಿ ನಿವೃತ್ತ ಪ್ರಾಂಶುಪಾಲರಾದ ದುರ್ಗಪ್ಪ ಎನ್ ಇವರು ಆಯ್ಕೆಯಾಗಿದ್ದು, ಜೆರೋಮಿಯಸ್ ಪಾಯಿಸ್, ಸಂಕಪ್ಪ ರೈ , ಸಿಲ್ವೆಸ್ಟರ್ ಡಿಸೋಜಾ, ದಾಮೋದರ ಭಂಡಾರ್ಕರ್, ಮೊಹಮ್ಮದ್ ಇಸ್ಮಾಯಿಲ್ ಸಾಲ್ಮರ, ಇಲ್ಯಾಸ್ ಮೊಹಮ್ಮದ್, ವಾಲ್ಟರ್ ಡಿ’ಸೋಜ ಸಿದ್ಯಾಲ, ದಿನೇಶ್ ಕಾಮತ್, ಸಿ.ಸೀತಾರಾಮ ಚಿಕ್ಕಪುತ್ತೂರು, ಕೃಷ್ಣಪ್ಪ ಪೂಜಾರಿ ಮತ್ತು ಮೋಹಿನಿ ಅಭಿವೃದ್ಧಿ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾಲೇಜಿನ ಪ್ರವೇಶಾತಿ ಮತ್ತು ಫಲಿತಾಂಶಗಳ ಬಗ್ಗೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ|ಸುಬ್ಬಪ್ಪ ಕೈಕಂಬರವರು ವಿವರ ನೀಡಿದರು ಮತ್ತು ಕಾಲೇಜಿನ ತುರ್ತು ಅಗತ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು . ಕಂಪ್ಯೂಟರ್ ಲ್ಯಾಬ್ ನ ನವೀಕರಣ, ಕಾಲೇಜಿಗೆ ಬಸ್ ವ್ಯವಸ್ಥೆ, ಮಧ್ಯಾಹ್ನದ ಉಚಿತ ಭೋಜನ ವ್ಯವಸ್ಥೆ, ಕಾಲೇಜಿಗೆ ವ್ಯವಸ್ಥಿತವಾದ ಸಭಾಂಗಣ ಹಾಗೂ ಕಾಲೇಜಿನ ಆಸ್ತಿಯ ಗಡಿ ಗುರುತಿನ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.
ಕಾರ್ಯಧ್ಯಕ್ಷ ದುರ್ಗಪ್ಪ ಎನ್ ಮಾತನಾಡಿ, ಮುಂದಿನ ದಿನಗಳಲ್ಲಿ ಕಾಲೇಜಿನ ಅಭಿವೃದ್ಧಿ ದೃಷ್ಟಿಯಲ್ಲಿ ಎಲ್ಲಾ ಸದಸ್ಯರು ಸಮಗ್ರವಾಗಿ ತೊಡಗಿಸಿಕೊಳ್ಳುವುದಾಗಿ ಹಾಗೂ ಶಾಸಕರ ನೇತೃತ್ವದಲ್ಲಿ ಮುಂದಿನ ಸಭೆ ಆಯೋಜಿಸಿ ಸಮಗ್ರ ಅಭಿವೃದ್ಧಿ ಯೋಜನೆಯನ್ನು ಅನುಷ್ಠಾನಗೊಳಿಸುವುದೆಂದು ತಿಳಿಸಿದರು. ಪ್ರಾಂಶುಪಾಲ ಪ್ರೊ|ಸುಬ್ಬಪ್ಪ ಕೈ ಕಂಬ ಸ್ವಾಗತಿಸಿ , ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪುಷ್ಪರಾಜ್ ವಂದಿಸಿದರು.