ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆ ಹಾಳು ಮಾಡುತ್ತಿರುವ ಷಡ್ಯಂತ್ರ ವಿರುದ್ಧ ಸಮಾನ ಮನಸ್ಕರ ವೇದಿಕೆಯಿಂದ ಆ.14ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಾತನಾಡಿದ ನಗರ ಸಭಾ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ ಶೆಟ್ಟಿ, ಧರ್ಮಸ್ಥಳದಲ್ಲಿ ಇತ್ತೀಚೆಗೆ ನಡೆದಿರುವ ಬೆಳವಣಿಗೆಯಲ್ಲಿ ಧರ್ಮಸ್ಥಳದ ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಪ್ರತಿಷ್ಠೆಗೆ ದಕ್ಕೆ ತರುವ ಕೆಲಸಗಳು ಸಭೆಗಳು ಮತ್ತು ಮೀಡಿಯಾಗಳ ಮೂಲಕ ಆಗುತ್ತಿದೆ. ಅವರ ಮೂಲ ಉದ್ದೇಶ ತಿಳಿದಿಲ್ಲ. ಆದರೆ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ದಕ್ಕೆ ತರಬಾರದು. ಅಣ್ಣಪ್ಪ ಸ್ವಾಮಿಯ ಶಕ್ತಿಗೆ ಯಾರಿಂದಲೂ ಅಡಚಣೆ ಉಂಟಾಗಬಾರದು. ಧರ್ಮಾಧಿಕಾರಿಗಳು ಸುಮಾರು 60 ಸಾವಿರ ಮಂದಿಗೆ ಉದ್ಯೋಗ ಸೇರಿದಂತೆ ವಿವಿಧ ಸಾಮಾಜಿಕ ಕ್ಷೇತ್ರದಲ್ಲಿ ಕೊಡುಗೆ ನೀಡುತ್ತಿದ್ದಾರೆ. ಲಕ್ಷಾಂತರ ಮಂದಿಯನ್ನು ಮದ್ಯವ್ಯಸನ ಮುಕ್ತರನ್ನಾಗಿಸಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಲಕ್ಷಾಂತರ ಮನೆಗಳು ಅಭಿವೃದ್ಧಿ ಹೊಂದಿದೆ. ಸ್ವ ಸಹಾಯ ಸಂಘಗಳ ಮುಖಾಂತರ ಸ್ವಂತ ಕಾಲಿನಲ್ಲಿ ನಿಲ್ಲುವಂತೆ ಮಾಡಿದ್ದಾರೆ. ಇದಕ್ಕೆಲ್ಲಾ ಕಾರಣೀಭೂತರಾದ ಧರ್ಮಾಧಿಕಾರಿಗಳ ಶ್ರೇಯಸ್ಸಿಗೆ ಕಳಂಕ ಮಾಡುವ ಕೆಲಸವನ್ನು ಮಹಾಲಿಂಗೇಶ್ವರ ನಿಗ್ರಹಿಸುಬೇಕು. ನ್ಯಾಯಕ್ಕಾಗಿ ಹೋರಾಡುವವರಿಗೆ ನ್ಯಾಯ ದೊರೆಯಬೇಕು. ಆದರೆ ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿಗಳ ಹೆಸರಿಗೆ ದಕ್ಕೆ ತರುವ ವಿಚಾರವನ್ನು ನಾವು ಸಹಿಸುವುದಿಲ್ಲ. ಮಹಾಲಿಂಗೇಶ್ವರನಲ್ಲಿ ನಿವೇದನೆ ಮಾಡಿದ್ದೇವೆ, ದೇವರು ಅನುಗ್ರಹಿಸಿ ನಮ್ಮ ಇಚ್ಚೆ ಪೂರೈಸಲಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ನಗರ ಸಭಾ ಸದಸ್ಯ ಜೀವಂಧರ್ ಜೈನ್, ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಯು. ಲೊಕೇಶ್ ಹೆಗ್ಡೆ, ಕೋಶಾಧಿಕಾರಿ ಪ್ರವೀಣ್ ಚಂದ್ರ ಆಳ್ವ, ವಲಯ ಅಧ್ಯಕ್ಷ ಸತೀಶ್ ನಾಕ್, ಮಹಾವೀರ ಆಸ್ಪತ್ರೆಯ ಡಾ.ಅಶೋಕ್ ಪಡಿವಾಳ್, ಡಾ.ನಾರಾಯಣ ಭಟ್ ಕೇಪುಳು, ರಾಜೇಶ್ ರೈ ಪರ್ಪುಂಜ, ವಿಕ್ರಂ ರೈ ಸಾಂತ್ಯ, ಜಗನ್ನಾಥ ರೈ ಕೊಮ್ಮಂಡ, ಬನ್ನೂರು ಗ್ರಾ.ಪಂ ಸದಸ್ಯ ಶೀನಪ್ಪ ಕುಲಾಲ್, ಸುಬ್ಬಯ್ಯ ಶೆಟ್ಟಿ, ನರೇಶ್ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ, ತಾಲೂಕು ಯೋಜನಾಧಿಕಾರಿ ಶಶಿಧರ್ ಎಂ., ಸೇರಿದಂತೆ ಹಲವು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.