ಬಲಿದಾನ, ತ್ಯಾಗಗಳಿಂದಾಗಿ ಸ್ವಾತಂತ್ರ್ಯ ನಮ್ಮದಾಗಿದೆ : ಸಂಕೇತ್ ಶೆಟ್ಟಿ
ಪುತ್ತೂರು: ಬಲಿದಾನ, ತ್ಯಾಗ, ಅಪರಿಮಿತ ದೇಶಭಕ್ತಿಯ ಕಾರಣದಿಂದಾಗಿ ನಮಗೆ ಸ್ವಾತಂತ್ರ್ಯ ದೊರಕಿದೆ. ತಾಯಿ ಭಾರತಿಗಾಗಿ ಪ್ರಾಣಾರ್ಪಣೆ ಮಾಡಿದವರನ್ನು ನೆನೆದುಕೊಂಡು ಸ್ವಾತಂತ್ರ್ಯ ದಿನವನ್ನು ಆಚರಿಸಬೇಕಾದದ್ದು ನಮ್ಮ ಕರ್ತವ್ಯ. ಆದರೆ ನಮ್ಮ ದೇಶದ ಪರಾಕ್ರಮಗಳು ನಮ್ಮದೇ ಇತಿಹಾಸದಲ್ಲಿ ದಾಖಲಾಗದೇ ಇರುವುದು ದುರಂತ ಎಂದು ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಹಿರಿಯ ವಿದ್ಯಾರ್ಥಿ, ಯುವ ವಾಗ್ಮಿ ಸಂಕೇತ್ ಶೆಟ್ಟಿ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಆಯೋಜಿಸಲಾದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಕ್ರವಾರ ಮಾತನಾಡಿದರು.
1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಪೂರ್ವದ ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ನಮ್ಮ ತುಳುನಾಡಿನಲ್ಲಿ ಸ್ವಾತಂತ್ರ್ಯದ ಹೋರಾಟ ನಡೆದು ಈ ಭಾಗದ ರೈತಾಪಿ ವರ್ಗದ ಅಪ್ರತಿಮ ಸಾಹಸ ಪ್ರದರ್ಶನಗೊಂಡಿತ್ತು. ಪುತ್ತೂರು, ಉಪ್ಪಿನಂಗಡಿ, ಉಜಿರೆ, ಬಂಟ್ವಾಳವೇ ಮೊದಲಾದ ಭಾಗಗಳಿಂದ ಬ್ರಿಟಿಷರನ್ನು ಓಡಿಸಿ ಅಂತಿಮವಾಗಿ ಮಂಗಳೂರನ್ನು ಬ್ರಿಟೀಷರಿಂದ ಮುಕ್ತಗೊಳಿಸಿ, ಮಂಗಳೂರಿನ ಬಾವುಟಗುಡ್ಡೆಯಲ್ಲಿ 13 ದಿನಗಳ ಕಾಲ ತುಳುನಾಡಿದ ಧ್ವಜವನ್ನು ಹಾರಿಸಿದ ಕೀರ್ತಿಗೆ ನಮ್ಮ ಪೂರ್ವಜರು ಭಾಜನರಾಗಿದ್ದರು ಎಂಬುದನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳಬೇಕು ಎಂದು ನುಡಿದರು.
ಸ್ವಾತಂತ್ರ್ಯವನ್ನು ಗಳಿಸುವುದಷ್ಟೇ ಅಲ್ಲ, ಉಳಿಸಿ, ಬೆಳೆಸುವುದೂ ಮುಖ್ಯ. ಇಂದು ಶಿಕ್ಷಿತರಾದವರೇ ಭ್ರಷ್ಟಾಚಾರದ ಹಾದಿಯನ್ನು ತುಳಿಯುತ್ತಿದ್ದಾರೆ. ದೇಶಪೇಮವಿಲ್ಲದ ಮಂದಿಯಿಂದ ದೇಶಕ್ಕೆ ಹಾನಿಯಾಗುತ್ತಿದೆ. ನಮ್ಮ ಪೂರ್ವಜರು ನರಕಯಾತನೆಯನ್ನು ಅನುಭವಿಸಿದರೂ ದೇಶಕ್ಕಾಗಿ ಎಲ್ಲವನ್ನೂ ಸಹಿಸಿ, ನಾವಿಂದು ಸ್ವಾತಂತ್ರ್ಯವನ್ನು ಅನುಭವಿಸುವಂತೆ ಮಾಡಿದ್ದಾರೆ. ಹೀಗಿರುವಾಗ ಆ ಸ್ವಾತಂತ್ರ್ಯವನ್ನು ಅತ್ಯಂತ ಜಾಗರೂಕತೆಯಿಂದ ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ದೇಶದ ಬಗೆಗೆ ಪ್ರತಿಯೊಬ್ಬರಿಗೂ ಭಕ್ತಿ ಇರಬೇಕು. ಈ ದೇಶದ ಗಾಳಿ ನೀರು ಸೇವನೆ ಮಾಡಿ, ಇಲ್ಲಿನ ಸಮಾಜದಿಂದ ಲಾಭ ಪಡೆದು ಬದುಕುವ ನಾವು ಕನಿಷ್ಟ ಸ್ವಾತಂತ್ರ್ಯ ದಿನದಂದಾದರೂ ಮನೆಯಿಂದ ಹೊರಬಂದು ರಾಷ್ಟ್ರಧ್ವಜಕ್ಕೆ ನಮಿಸದಿದ್ದರೆ ಬದುಕಿಗೆ ಅರ್ಥವಿಲ್ಲ. ಇದನ್ನು ತಿಳಿಸಿಕೊಡುವ ಶಿಕ್ಷಣವೇ ನಿಜವಾದ ಶಿಕ್ಷಣ ಎಂದು ನುಡಿದರು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ ಕೆ, ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ, ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಬಪ್ಪಳಿಗೆ ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಗಣೇಶ್ ಪ್ರಸಾದ್ ಡಿ.ಎಸ್., ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ. ಉಪಸ್ಥಿತರಿದ್ದರು. ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿ ಧರಣಿ ಮತ್ತು ತಂಡದವರು ಪ್ರಾರ್ಥಿಸಿದರು. ವಿದ್ಯಾರ್ಥಿನಿಯರಾದ ಜಶ್ಮಿ ಡಿ.ಎಸ್. ಸ್ವಾಗತಿಸಿ, ಜಾನ್ವಿ ಸಚಿನ್ ಶೆಟ್ಟಿ ವಂದಿಸಿದರು. ವೈಷ್ಣವಿ ಪೈ ಕಾರ್ಯಕ್ರಮ ನಿರ್ವಹಿಸಿದರು.
ಧ್ವಜಾರೋಹಣ, ಮೆರವಣಿಗೆ
ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಬಪ್ಪಳಿಗೆಯ ಅಂಬಿಕಾ ಕ್ಯಾಂಪಸ್ನಲ್ಲಿ ಆಡಳಿತ ಮಂಡಳಿ ಸದಸ್ಯ ಹಾಗೂ ವಿಶ್ರಾಂತ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಅವರಿಂದ ಧ್ವಜಾರೋಹಣ ನಡೆಯಿತು. ನೆಲ್ಲಿಕಟ್ಟೆಯ ಅಂಬಿಕಾ ಆವರಣದಲ್ಲಿ ರಾಜಶ್ರೀ ಎಸ್. ನಟ್ಟೋಜ ಧ್ವಜಾರೋಹಣಗೈದರು. ತದನಂತರ ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆಯಿಂದ ಕಿಲ್ಲೆ ಮೈದಾನದ ಬಳಿಯ ಅಮರ್ ಜವಾನ್ ಜ್ಯೋತಿ ಸ್ಮಾರಕದವರೆಗೆ ಮೆರವಣಿಗೆ ನಡೆದು ಮಂಗಲ್ ಪಾಂಡೆ ಚೌಕದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಾಯಿತು. ಮೆರವಣಿಗೆಯುದ್ದಕ್ಕೂ ಅಂಬಿಕಾ ವಿದ್ಯಾಥಿಗಳ ಭಾರತ್ ಮಾತಾಕಿ ಜೈ ಮೊದಲಾದ ಘೊಷಣೆಗಳು, ಬ್ರಹ್ಮೋಸ್ ಮಾದರಿಯ ಪ್ರತಿಕೃತಿ ಗಮನ ಸೆಳೆದವು.
ಲೋಗೋ ಅನಾವರಣ
ಅಂಬಿಕಾ ವಿದ್ಯಾಲಯ ಕೋಚಿಂಗ್ ಸೆಂಟರ್ ಪುತ್ತೂರಿನಲ್ಲಿ ಆರಂಭಗೊಂಡು ಇಪ್ಪತ್ತೈದು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಅಂಬಿಕಾ 25 ಎನ್ನುವ ಲೋಗೋವೊಂದನ್ನು ಸುಬ್ರಮಣ್ಯ ನಟ್ಟೋಜ ಅನಾವರಣಗೊಳಿಸಿದರು. ಇದರೊಂದಿಗೆ ಪ್ರಸ್ತುತ ವರ್ಷ ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯ ತನ್ನ ಹತ್ತನೆಯ ವರ್ಷವನ್ನು ಹಾಗೂ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯ ತನ್ನ ಹದಿನೈದನೆಯ ವರ್ಷವನ್ನು ಆಚರಿಸುತ್ತಿದೆ ಎಂಬುದು ಗಮನಾರ್ಹ.