ದ.ಕ.ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಬದ್ಧ-ದಿನೇಶ್ ಗುಂಡೂರಾವ್
ಕ್ಷೇತ್ರಕ್ಕೆ ಇನ್ನಷ್ಟು ಬಸ್ಸುಗಳ ಬೇಡಿಕೆಯಿದೆ-ಭಾಗೀರಥಿ ಮುರುಳ್ಯ
ಆಲಂಕಾರು:ದ.ಕ.ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ನಮ್ಮ ಸರಕಾರ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ,ಇದೀಗ ಎರಡು ರೂಟ್ಗಳಿಗೆ ಬಸ್ಸು ನೀಡುವ ಮೂಲಕ ಈ ಭಾಗದ ಜನರ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಆಲಂಕಾರು- ಮಾದೇರಿ-ನೆಲ್ಯಾಡಿ ಹಾಗೂ ಉಪ್ಪಿನಂಗಡಿ-ಕಡಬ- ಮಣಿಭಾಂಡ ಮಾರ್ಗದಲ್ಲಿ ನೂತನವಾಗಿ ಆರಂಭಿಸಲಾದ ಕೆಎಸ್ಆರ್ಟಿಸಿ ಬಸ್ಸು ಸಂಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಈ ಭಾಗದ ಶಾಸಕರು,ಸ್ಥಳೀಯರು, ಗ್ಯಾರಂಟಿ ಸಮಿತಿಯ ಪ್ರಮುಖರು ಹಾಗೂ ನಮ್ಮ ಮುಖಂಡರುಗಳ ಒತ್ತಾಸೆಯ ಮೇರೆಗೆ ಎರಡು ಮಾರ್ಗಗಳಿಗೆ ಬಸ್ಸು ಸೇವೆ ಪ್ರಾರಂಭಿಸಲಾಗಿದೆ.ಹೆಚ್ಚುವರಿ ಬಸ್ಸುಗಳನ್ನು ಒದಗಿಸಿದಾಗ ಜನ ಅದನ್ನು ಹೆಚ್ಚು ಹೆಚ್ಚು ಬಳಕೆ ಮಾಡಿ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದ ಸಚಿವರು,ಗ್ಯಾರಂಟಿ ಯೋಜನೆಯಿಂದಾಗಿ ಉಚಿತವಾಗಿ ಬಸ್ಸಿನಲ್ಲಿ ಓಡಾಟ ಮಾಡುವ ಮಹಿಳೆಯರಿಗೂ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ,ಆಲಂಕಾರು-ನೆಲ್ಯಾಡಿ ರಸ್ತೆ ಮಧ್ಯೆ ಎರಡು ಕಡೆ ದೊಡ್ಡ ತಿರುವು ಇರುವುದರಿಂದ ಬಸ್ಸು ಸಂಚಾರಕ್ಕೆ ತೊಂದರೆಯಾಗುತ್ತಿರುವುದರಿಂದ ತಿರುವು ಜಾಗದಲ್ಲಿ ರಸ್ತೆಯನ್ನು ಅಗಲಗೊಳಿಸಿ ಬಸ್ಸು ಸುಗಮ ಸಂಚಾರಕ್ಕೆ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲು ಇಂಜಿನಿಯರ್ಗೆ ಸೂಚಿಸಲಾಗಿದ್ದು ಕಾಮಗಾರಿ ನಡೆಯುತ್ತಿದೆ.ಮಣಿಭಾಂಡಕ್ಕೂ ಒಂದು ಬಸ್ಸು ಈಗಾಗಲೇ ಹಾಕಲಾಗಿದೆ.ಆಲಂಕಾರಿನಲ್ಲಿ ಬಸ್ಸಿಗೆ ಚಾಲನೆ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಕೇಳಿಕೊಂಡಿದ್ದೆ, ಅದರಂತೆ ಇದೀಗ ಚಾಲನೆ ನೀಡಲಾಗಿದೆ ಎಂದರು.ಈಗಾಗಲೇ ಕ್ಷೇತ್ರದ ನಾಲ್ಕು ಕಡೆ ಹೆಚ್ಚುವರಿ ಬಸ್ಸುಗಳನ್ನು ಕೊಡಲಾಗಿದೆ,ಇನ್ನೂ ಕೆಲವು ಬಸ್ಸುಗಳ ಅವಶ್ಯಕತೆಯಿದ್ದು ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರಲ್ಲಿ ಮನವಿ ಮಾಡಿದ್ದೇನೆ ಎಂದು ಹೇಳಿದ ಭಾಗೀರಥಿಯವರು,ನಮ್ಮ ಕ್ಷೇತ್ರಕ್ಕೆ ಕೊಟ್ಟಿರುವ ಬಸ್ಸುಗಳು ಹಳೆಯದಾಗಿದ್ದು ಶೀಘ್ರ ಹೊಸ ಬಸ್ಸುಗಳನ್ನು ನೀಡಬೇಕು ಎಂದರಲ್ಲದೆ,ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಇನ್ನಷ್ಟು ಬಸ್ಸುಗಳ ಅವಶ್ಯಕತೆ ಇದೆ ಎಂದು ತಿಳಿಸಿದರು.
ರಾಜಕೀಯ ರಹಿತ ಕಾರ್ಯಕ್ರಮ:
ಸಚಿವ ದಿನೇಶ್ ಗುಂಡೂರಾವ್ ಮತ್ತು ಶಾಸಕರು ಹಾಗೂ ಪ್ರಮುಖರು ರಾಜಕೀಯ ಮೆರೆತು ಜೊತೆಯಲ್ಲಿ ನಿಂತು ಬಸ್ಸುಗಳ ಓಡಾಟಕ್ಕೆ ಹಸಿರು ನಿಶಾನೆ ತೋರಿಸಿ ಸ್ವಲ್ಪ ದೂರದ ತನಕ ಬಸ್ಸಿನಲ್ಲಿ ಪ್ರಯಾಣ ಮಾಡಿದರು.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್,ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ,ಸುಳ್ಯ ವಿಧಾನ ಸಭಾ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ಜಿ.ಕೃಷ್ಣಪ್ಪ,ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಡಬ ತಾಲೂಕು ಅಧ್ಯಕ್ಷ ಸುಽರ್ ಕುಮಾರ್ ಶೆಟ್ಟಿ,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್,ಸರ್ವೋತ್ತಮ ಗೌಡ,ಕಡಬ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ., ಪ್ರಮುಖರಾದ ವಿಜಯ ಕುಮಾರ್ ಸೊರಕೆ,ಡಾ.ರಘು,ವಿನಯರಾಜ್, ಸತೀಶ್ ಕುಮಾರ್ ಕೆಡೆಂಜಿ,ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ, ಆಲಂಕಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ಆಲಂಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲ, ಪೆರಾಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ,ಗ್ರಾ.ಪಂ.ಉಪಾಧ್ಯಕ್ಷರು,ಸದಸ್ಯರು,ಬಿಜೆಪಿ ಮುಖಂಡರಾದ ಪ್ರದೀಪ್ ರೈ ಮನವಳಿಕೆ,ರವಿಪ್ರಸಾದ್ ಶೆಟ್ಟಿ, ಪೂವಪ್ಪ ನಾಯ್ಕ್ ಶಾಂತಿಗುರಿ,ಕಡಬ ತಹಶಿಲ್ದಾರ್ ಪ್ರಭಾಕರ ಖಜೂರೆ,ಕಂದಾಯ ನಿರೀಕ್ಷಕ ಪೃಥ್ವಿರಾಜ್,ಕೆಎಸ್ಆರ್ಟಿಸಿ ಅಽಕಾರಿಗಳಾದ ಜೈಶಾಂತ್,ಸುಬ್ರಹ್ಮಣ್ಯ ಪ್ರಕಾಶ್, ನಿವೃತ್ತ ಅಽಕಾರಿ ಅಬ್ಬಾಸ್ ಕುಂತೂರು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಶಾಸಕರ ಪ್ರಯತ್ನವೂ ಇದೆ….
ಬಸ್ಸಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು.ನಮ್ಮ ಪ್ರಯತ್ನದಿಂದ ಬಸ್ಸು ಓಡಾಟ ಆರಂಭಗೊಂಡಿದೆ ಎಂದು ಕಾಂಗ್ರೆಸ್ನವರು ಪ್ರಸ್ತಾಪ ಮಾಡಿದಾಗ ಶಾಸಕಿ ಭಾಗೀರಥಿ ಮುರುಳ್ಯ ಆಕ್ಷೇಪ ವ್ಯಕ್ತಪಡಿಸಿ,ಇಲ್ಲಿ ರಾಜಕೀಯ ಬೇಡ ಎಂದು ಜೋರಾಗಿಯೇ ಹೇಳಿದರಲ್ಲದೆ,ಬಸ್ಸಿಗಾಗಿ ನಾನು ಕೂಡಾ ಸಚಿವರಲ್ಲಿ ಮನವಿ ಮಾಡಿದ್ದೇನೆ. ಕೆಡಿಪಿ ಮೀಟಿಂಗ್ನಲ್ಲಿ ಕೂಡ ಪ್ರಸ್ತಾಪಿಸಿ ಆಗ್ರಹಿಸಿದ್ದೇನೆ ಎಂದರು.ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಸುಽರ್ ಕುಮಾರ್ ಶೆಟ್ಟಿಯವರು ಬಸ್ಸು ಆರಂಭದ ಹಿಂದೆ ಶಾಸಕರ ಪ್ರಯತ್ನವೂ ಇದೆ ಎಂದು ಹೇಳಿ ಗೊಂದಲಕ್ಕೆ ತೆರೆ ಎಳೆದರು.
ಕ್ಷೇತ್ರದ ಅಭಿವೃದ್ಧಿಗೆ ಅನುದಾನಕ್ಕೆ ಸಚಿವರುಗಳಿಗೆ ಬೇಡಿಕೆ ಪಟ್ಟಿ
ಸುಳ್ಯ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿ ದೃಷ್ಠಿಯಿಂದ ಸಂಬಂಧಪಟ್ಟ ಎಲ್ಲಾ ಸಚಿವರುಗಳನ್ನು ಭೇಟಿ ಮಾಡಿ ಕಾಮಗಾರಿಗಳ ಪಟ್ಟಿ ನೀಡಿ ಅನುದಾನಕ್ಕೆ ಬೇಡಿಕೆ ಇಟ್ಟಿದ್ದೇನೆ.ಒಂದಷ್ಟು ಅನುದಾನ ಬಂದಿದೆ,ಕುಂತೂರು ಗ್ರಾಮದ ಕೆದ್ದೊಟ್ಟೆ ಕೆರೆ ಅಭಿವೃದ್ಧಿಗೆ,ಐವರ್ನಾಡು ಸೇತುವೆಗೆ,ಅರಮನೆ ಕಾಯ ಎಂಬಲ್ಲಿಗೆ ಸೇತುವೆಗೆ ಅನುದಾನ ಮಂಜೂರಾಗಿದೆ.ನೆಲ್ಯಾಡಿಯ ಬೈಲುಗುಪ್ಪೆಯಲ್ಲಿ ಸೇತುವೆ ನಿರ್ಮಾಣಕ್ಕೆ ಅನುದಾನ ಬರಲಿದೆ.ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನವನ್ನಿಟ್ಟು ಅಗತ್ಯವಿರುವ ಕಡೆ ಕಾಮಗಾರಿಗಳನ್ನು
ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕಿ ಭಾಗೀರಥಿ ಮುರುಳ್ಯ ಅವರು ಪತ್ರಕರ್ತರಿಗೆ ಮಾಹಿತಿ ನೀಡಿದರು.
ಕಡಬ ತಾಲೂಕು ಆಗಿದೆ ಹೊರತು ಅಲ್ಲಿ ಎಲ್ಲಾ ಇಲಾಖೆಗಳು ಇನ್ನೂ ಬಂದಿಲ್ಲ.ತಾಲೂಕು ಆಫೀಸ್, ತಾಲೂಕು ಕಛೇರಿ,ಕಡಬ ಪಟ್ಟಣ ಪಂಚಾಯಿತಿ ಬಿಟ್ಟರೆ ಎಲ್ಲಾ ಕಛೇರಿಗಳು ಬರಬೇಕು.ಇಂತಹ ಹನ್ನೆರಡು ಬೇಡಿಕೆಗಳ ಪಟ್ಟಿಯನ್ನು ಮಾಡಿ ಅಧಿವೇಶನದಲ್ಲಿ ಮಾತನಾಡುತ್ತೇನೆ.ಮರಳು,ಕೆಂಪು ಕಲ್ಲಿನ ಸಮಸ್ಯೆ ಪರಿಹರಿಸದಿದ್ದರೆ ಮುಂದೆ ಹೋರಾಟ ಮಾಡುತ್ತೇವೆ ಎಂದು ಶಾಸಕರು ತಿಳಿಸಿದರು.