ಪುತ್ತೂರು: 5 ದಿನದ ಹಿಂದೆ ಹಾಡಹಗಲೇ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲದಲ್ಲಿ ಮನೆಯ ಬಾಗಿಲು ಮರಿದು ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ್ದ ಆರೋಪಿಯನ್ನು ಸಂಪ್ಯ ಪೊಲೀಸರು ಬಂಧಿಸಿ, ಕಳ್ಳತನವಾಗಿದ್ದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಂಡಿದ್ದಾರೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ಮುಂಡ್ಯ ದಿ.ನಾರಾಯಣ ನಾಯ್ಕರವರ ಪುತ್ರ ದಯಾನಂದ್ ನಾಯ್ಕ ಎಂ.(29ವ.) ಬಂಧಿತ ಆರೋಪಿ. ಈತ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ(ಸಂಪ್ಯ ಠಾಣೆ)ಯ ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಪೇಟೆಯ ನಿವಾಸಿ ಶೋಭಾ ಕೃಷ್ಣರಾಯರವರ ಮನೆಯಿಂದ ಆ.12ರಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 7 ಗಂಟೆಯ ಮಧ್ಯದಲ್ಲಿ ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಮನೆ ಬಾಗಿಲು ಮುರಿದು ಮನೆಯೊಳಗೆ ನುಗ್ಗಿ ಕಪಾಟಿನ ಬೀಗ ಮುರಿದು ಸುಮಾರು 31 ಗ್ರಾಂ.ಬಂಗಾರ ಮತ್ತು ರೂ.5000 ನಗದು ಕಳ್ಳತನ ಮಾಡಿದ್ದ. ಘಟನೆಗೆ ಸಂಬಂದಿಸಿದಂತೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಽಕಾರಿ ಅನಿಲ್ ಕುಮಾರ್ ಭೂಮರೆಡ್ಡಿರವರ ಮಾರ್ಗದರ್ಶನದಲ್ಲಿ, ಪುತ್ತೂರು ಉಪವಿಭಾಗದ ಪೊಲೀಸ್ ಉಪಾಽಕ್ಷಕ ಅರುಣ್ ನಾಗೇಗೌಡ ಮತ್ತು ಪೊಲೀಸ್ ನಿರೀಕ್ಷಕ ರವಿ ಬಿ ಎಸ್ ರವರ ನೇತೃತ್ವದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಜಂಬುರಾಜ್ ಮಹಾಜನ್‌ರವರ ತಂಡ ಪ್ರಕರಣದ ತನಿಖೆ ಕೈಗೊಂಡು ಆ.17ರಂದು ಈಶ್ವರಮಂಗಲದಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿ, ಆರೋಪಿಯಿಂದ 30.020 ಗ್ರಾಂ.ಬಂಗಾರ ಮತ್ತು ಪ್ರಕರಣಕ್ಕೆ ಉಪಯೋಗಿಸಿದ ಡಿಸ್ಕವರಿ ಬೈಕ್ ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ಪತ್ತೆ ಮಾಡುವಲ್ಲಿ ಎಎಸ್‌ಐ ಚಂದ್ರಶೇಖರ್, ಸಿಬ್ಬಂದಿಗಳಾದ ಪ್ರವೀಣ್, ಮಧು, ಹರೀಶ್, ಸುಬ್ರಹ್ಮಣ್ಯ, ಆಕಾಶ್, ಯುವರಾಜ್, ಶರಣಪ್ಪ ಪಾಟೀಲ್, ಚಾಲಕರಾದ ಎ.ಆರ್.ಎಸ್.ಐ.ಯಜ್ಞ, ಹರಿಪ್ರಸಾದ್ ಮತ್ತು ನಿತೇಶ್ ಸಹಕರಿಸಿದ್ದರು.
ಕೆಲಸವಿಲ್ಲದೆ ಕಳ್ಳತನಕ್ಕೆ ಮುಂದಾಗಿದ್ದ.!
ಬಂಧಿತ ಆರೋಪಿ ದಯಾನಂದ ನಾಯ್ಕ ಕೆಂಪು ಕಲ್ಲಿನ ಲೋಡಿಂಗ್ ಕೆಲಸ ಮಾಡುತ್ತಿದ್ದ. ಅದರಲ್ಲಿ ದಿನವೊಂದಕ್ಕೆ ರೂ.100 ಸಂಪಾದನೆ ಮಾಡುತ್ತಿದ್ದ. ಆತ ವಿವಿಧ ಸಂಘ ಸಂಸ್ಥೆಗಳಿಂದ ಸಾಲ ಪಡೆದುಕೊಂಡಿದ್ದ. ಆದರೆ ಕಳೆದ ಮೂರು ತಿಂಗಳಿನಿಂದ ಕೆಲಸವಿಲ್ಲದೆ ಕಂಗೆಟ್ಟಿದ್ದ ಆತ ಕಳ್ಳತನಕ್ಕೆ ಮುಂದಾಗಿದ್ದಾನೆ ಎಂಬ ಮಾತುಗಳು ಕೇಳಿಬರುತ್ತಿದೆ.