ರಸ್ತೆ ಬದಿಯಲ್ಲೇ ನಿಲ್ಲುವ ಪ್ರಯಾಣಿಕರು | ಫಲಿಸದ ಮನವಿ, ಬೇಡಿಕೆ
@ ಸಿಶೇ ಕಜೆಮಾರ್
ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪರ್ಪುಂಜ ಪೇಟೆಗೆ ಪ್ರಯಾಣಿಕರ ಬಸ್ಸು ತಂಗುದಾಣ ನಿರ್ಮಾಣ ಕೊನೆಗೂ ಮರೀಚಿಕೆ ಆಗಿಯೇ ಉಳಿದು ಹೋಗಿರುವುದು ವಿಪರ್ಯಾಸ. ಬಂಟ್ವಾಳ-ಮೈಸೂರು ರಾಷ್ಟ್ರೀಯ ಹೆದ್ದಾರಿ-275 ರಲ್ಲಿ ಪುತ್ತೂರು-ಕುಂಬ್ರ ಮಧ್ಯೆ ಪುತ್ತೂರಿನಿಂದ 8 ಕಿ.ಮೀ ದೂರದಲ್ಲಿ ಸಿಗುವ ಊರು ಪರ್ಪುಂಜ. ಪುತ್ತೂರಿಗೆ ಹೋಗುವವರು ಹಾಗೇ ಕುಂಬ್ರ, ಬೆಳ್ಳಾರೆ, ಸುಳ್ಯ ಇತ್ಯಾದಿ ಕಡೆಗಳಿಗೆ ಹೋಗುವ ಶಾಲಾ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಪ್ರತಿನಿತ್ಯ ಇಲ್ಲಿ ಬಸ್ಸಿಗಾಗಿ ಕಾಯುತ್ತಿರುತ್ತಾರೆ. ಮಳೆಗಾಲ, ಬೇಸಿಗೆಕಾಲ ಎನ್ನದೆ ರಸ್ತೆ ಬದಿಯಲ್ಲಿ ನಿಂತುಕೊಂಡೆ ವಾಹನಗಳಿಗೆ ಕಾಯಬೇಕಾದ ಪರಿಸ್ಥಿತಿ ಇಲ್ಲಿದೆ. ಪರ್ಪುಂಜಕ್ಕೊಂದು ಬಸ್ಸು ತಂಗುದಾಣ ನಿರ್ಮಿಸಿ ಕೊಡಿ ಎಂದು ಈ ಭಾಗದ ಗ್ರಾಮಸ್ಥರು ಕಳೆದ 10 ವರ್ಷಗಳಿಂದ ಒಳಮೊಗ್ರು ಗ್ರಾಮ ಪಂಚಾಯತ್ನ ಮೊರೆ ಹೋಗುತ್ತಿದ್ದಾರೆ ಆದರೆ ಇದುವರೇಗೆ ಯಾವುದೇ ಪ್ರಯೋಜನವಾಗದಿರುವುದು ವಿಪರ್ಯಾಸ.
ರಸ್ತೆಯ ಎರಡೂ ಬದಿಯಲ್ಲೂ ತಂಗುದಾಣ ಇಲ್ಲ
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ರಸ್ತೆಯ ಎರಡೂ ಬದಿಯಲ್ಲೂ ತಂಗುದಾಣ ಇಲ್ಲ. ಕುಂಬ್ರದಿಂದ ಪುತ್ತೂರಿಗೆ ಹೋಗುವ ಬದಿಯಲ್ಲಿ 30 ವರ್ಷಗಳ ಹಳೆಯ ಒಂದು ಬಸ್ಸು ತಂಗುದಾಣವಿದ್ದರೂ ಅದು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಮಳೆ,ಗಾಳಿಗೆ ಪ್ರಯಾಣಿಕರು ರಸ್ತೆ ಬದಿಯಲ್ಲೇ ನಿಂತುಕೊಳ್ಳಬೇಕಾದ ಪರಿಸ್ಥಿತಿ ಇಲ್ಲಿದೆ. ಮಳೆಗಾಲದಲ್ಲಿ ರಸ್ತೆ ಬದಿ ಕೆಸರು ನೀರು ತುಂಬಿಕೊಳ್ಳುತ್ತಿದ್ದು ಇದರ ಮೇಲೆಯೇ ನಿಂತುಕೊಂಡು ಬಸ್ಸಿಗಾಗಿ ಕಾಯಬೇಕಾದ ಅನಿವಾರ್ಯತೆ ಇಲ್ಲಿದೆ.
ಮನವಿ,ಬೇಡಿಕೆಗೆ ಬೆಲೆಯೇ ಇಲ್ಲ…?
ಪರ್ಪುಂಜಕ್ಕೊಂದು ಬಸ್ಸು ತಂಗುದಾಣ ನಿರ್ಮಿಸಿಕೊಡಿ ಎಂದು ಈ ಭಾಗದ ಗ್ರಾಮಸ್ಥರು ಕಳೆದ ಹಲವು ವರ್ಷಗಳಿಂದ ಸ್ಥಳೀಯ ಗ್ರಾಮ ಪಂಚಾಯತ್ಗೆ ಮನವಿ ಮಾಡುತ್ತಲೇ ಬಂದಿದ್ದಾರೆ. ಪ್ರತಿ ಗ್ರಾಮಸಭೆಯಲ್ಲೂ ಈ ಬಗ್ಗೆ ಗ್ರಾಮಸ್ಥರು ಧ್ವನಿ ಎತ್ತುತ್ತಾರೆ. ಕಳೆದ 10 ವರ್ಷಗಳಿಂದ ನಾವು ಗ್ರಾಮಸಭೆಯಲ್ಲಿ ಈ ಬಗ್ಗೆ ಮಾತನಾಡಿದ್ದೇವೆ ಮನವಿ ಸಲ್ಲಿಸಿದ್ದೇವೆ ಆದರೆ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರಾದ ಮಹಮ್ಮದ್ ಕೆ.ಎ ಅಡ್ಕರವರು.
ದಾನಿಗಳಾದರೂ ಮುಂದೆ ಬರಬೇಕಾಗಿದೆ
ಪಂಚಾಯತ್ನಿಂದ ಬಸ್ಸು ತಂಗುದಾಣ ನಿರ್ಮಿಸಲು ಅನುದಾನದ ಕೊರತೆಯೋ, ಜಾಗದ ಸಮಸ್ಯೆಯೋ ಗೊತ್ತಿಲ್ಲ ಆದರೆ ಇದುವರೇಗೆ ಇದು ಸಾಧ್ಯವಾಗಿಲ್ಲ ಅನ್ನೋದು ಮಾತ್ರ ಸತ್ಯ. ಆದ್ದರಿಂದ ಯಾರಾದರೂ ದಾನಿಗಳು, ಸಂಘ ಸಂಸ್ಥೆಯವರು ಇಲ್ಲೊಂದು ಬಸ್ಸು ತಂಗುದಾಣ ನಿರ್ಮಿಸಲು ಮುಂದೆ ಬರಬೇಕಾಗಿದೆ. ಯಾಕೆಂದರೆ ಪ್ರಯಾಣಿಕರಿಗೆ ಅದರಲ್ಲೂ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ,ಪ್ರಾಯಸ್ಥರಿಗೆ ಬಹಳಷ್ಟು ತೊಂದರೆಯಾಗುತ್ತಿದೆ.
ಪರ್ಪುಂಜದ ಬಸ್ಸು ತಂಗುದಾಣದ ಕಥೆ ನಿನ್ನೆಮೊನ್ನೆಯದ್ದಲ್ಲ ಕಳೆದ ಹಲವು ವರ್ಷಗಳಿಂದ ಒಳಮೊಗ್ರು ಗ್ರಾಮಸಭೆಯಲ್ಲಿ ಈ ಬಗ್ಗೆ ಧ್ವನಿ ಎತ್ತುತ್ತಲೇ ಇದ್ದೇವೆ. ಆದರೆ ಯಾಕಾಗಿ ಇಲ್ಲಿಗೆ ಬಸ್ಸು ತಂಗುದಾಣ ಭಾಗ್ಯ ಸಿಕ್ಕಿಲ್ಲ ಅನ್ನೋದು ತಿಳಿಯುತ್ತಿಲ್ಲ. ಮಳೆ,ಗಾಳಿಗೆ ಪ್ರಯಾಣಿಕರು, ಮಕ್ಕಳು ಕೊಡೆ ಹಿಡಿದುಕೊಂಡು ಬಸ್ಸಿಗೆ ಕಾಯುತ್ತಿರುವುದನ್ನು ನೋಡಿದರೆ ಅಯ್ಯೋ ಪಾಪ ಅನ್ನಿಸುತ್ತದೆ.
ರಾಜೇಶ್ ರೈ ಪರ್ಪುಂಜ, ಸಾಮಾಜಿಕ ಕಾರ್ಯಕರ್ತ
ಪರ್ಪುಂಜದಲ್ಲಿ ಬಸ್ಸು ತಂಗುದಾಣ ಇಲ್ಲದೆ ತುಂಬಾ ತೊಂದರೆಯಾಗುತ್ತಿದೆ. ಪ್ರಯಾಣಿಕರು ರಸ್ತೆ ಬದಿಯಲ್ಲೇ ನಿಲ್ಲಬೇಕಾಗಿದೆ. ಕಳೆದ 10 ವರ್ಷಗಳಿಂದ ಇಲ್ಲೊಂದು ಬಸ್ಸು ತಂಗುದಾಣ ನಿರ್ಮಿಸಿಕೊಡಿ ಎಂದು ಒಳಮೊಗ್ರು ಗ್ರಾಪಂಗೆ ಗ್ರಾಮಸಭೆಯಲ್ಲಿ ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿರುವ ೩೦ ವರ್ಷ ಹಳೆಯ ಒಂದು ಬಸ್ಸು ತಂಗುದಾಣ ಯಾವುದೇ ಪ್ರಯೋಜನಕ್ಕಿಲ್ಲ ಆದ್ದರಿಂದ ತುರ್ತಾಗಿ ಇಲ್ಲಿಗೆ ಬಸ್ಸು ತಂಗುದಾಣದ ಅಗತ್ಯವಿದೆ.
ಮಹಮ್ಮದ್ ಕೆ.ಎ ಅಡ್ಕ, ಸಾಮಾಜಿಕ ಕಾರ್ಯಕರ್ತ