ವಿಶ್ವಹಿಂದು ಪರಿಷತ್ ಬಜರಂಗದಳ, ಮೊಸರುಕುಡಿಕೆ ಉತ್ಸವ ಸಮಿತಿಯಿಂದ ನಗರ ಠಾಣೆಗೆ ದೂರು
ಪುತ್ತೂರು: ಕೃಷ್ಣನ ವೇಷ ಧರಿಸಿ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಬರುವಂತೆ ವರ್ತಿಸಿದ ಕಲಾವಿದ ರವಿ ರಾಮಕುಂಜ ವಿರುದ್ಧ ವಿಶ್ವಹಿಂದು ಪರಿಷತ್ ಬಜರಂಗದಳ ಮತ್ತು ಮೊಸರುಕುಡಿಕೆ ಉತ್ಸವ ಸಮಿತಿಯಿಂದ ಪುತ್ತೂರು ನಗರ ಠಾಣೆಯ ಇನ್ಸ್‌ಪೆಕ್ಟರ್ ಜಾನ್ಸನ್ ಡಿ’ಸೋಜರವರಿಗೆ ದೂರು ನೀಡಿದ್ದಾರೆ.
ಕಲಾವಿದ ರವಿ ರಾಮಕುಂಜ ಶ್ರೀಕೃಷ್ಣನ ವೇಷ ಧರಿಸಿ ನಾಟಕ ಪಾತ್ರ ಮಾಡುವ ಸಂದರ್ಭದಲ್ಲಿ ಹೆಣ್ಣನ್ನು ಅಪ್ಪಿಕೊಳ್ಳಲು ಹೇಳಿರುವುದು ಅಲ್ಲದೆ ಪೂಜೆಯಲ್ಲಿ ನಿರತವಾಗಿದ್ದ ಮಾತೆಯ ಎದುರು ಹಣ ಕೇಳುವ ಮಾತುಗಳನ್ನಾಡಿದ್ದಾರೆ. ಅಲ್ಲದೆ ಕೃಷ್ಣನ ಹಲವು ನಾಮಗಳನ್ನು ಹೇಳಿ ಕೊನೆಯಲ್ಲಿ ಸತ್ತ ಎಂಬ ಪದವನ್ನು ಬಳಸಿದ್ದಾರೆ. ಕೃಷ್ಣನ ವೇಷಧಾರಿಯಾಗಿ ರವಿ ರಾಮಕುಂಜರ ಈ ಕೆಟ್ಟ ವರ್ತನೆಯಿಂದ ಕೃಷ್ಣ ದೇವರು ಎಂದು ನಂಬಿಕೊಂಡು ಬಂದಿರುವಂತ ಎಲ್ಲಾ ಹಿಂದುಗಳ ಭಾವನೆಗೆ ಧಕ್ಕೆ ಉಂಟಾಗಿದೆ. ಈ ರೀತಿಯಾಗಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ರವಿ ರಾಮಕುಂಜ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಜಿಲ್ಲಾ ಕೋಶಾಧಿಕಾರಿ ಮಾಧರ ಪೂಜಾರಿ, ಪುತ್ತೂರು ನಗರ ಪ್ರಖಂಡದ ಅಧ್ಯಕ್ಷ ದಾಮೋದರ ಪಾಟಾಳಿ, ಪುತ್ತೂರು ಜಿಲ್ಲೆ ಸಹಕಾರ್ಯದರ್ಶಿ ಶ್ರೀಧರ ತೆಂಕಿಲ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಉಪಸ್ಥಿತರಿದ್ದರು.