ಪುತ್ತೂರು: ಧರ್ಮಸ್ಥಳ ಕೇಸ್ನಲ್ಲಿ ಅನಾಮಿಕನ ಮಂಪರು ಪರೀಕ್ಷೆ ಮಾಡುವಂತೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆಗ್ರಹಿಸಿದ್ದಾರೆ.
ವಿಧಾನ ಪರಿಷತ್ತಿನ ಶೂನ್ಯವೇಳೆ ಈ ವಿಷಯ ಪ್ರಸ್ತಾಪ ಮಾಡಿದ ಅವರು, ಕೂಡಲೇ ಸರ್ಕಾರ ಅನಾಮಿಕನ ಮಂಪರು ಪರೀಕ್ಷೆ ನಡೆಸಬೇಕು. ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತ ದೂರುದಾರನಿಗೆ ಮಂಪರು ಪರೀಕ್ಷೆ ಮಾಡಲು ಗೃಹ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದಿದ್ದಾರೆ.
ಅನಾಮಿಕ ವ್ಯಕ್ತಿಯೋರ್ವ ಬುರುಡೆ ಹಿಡಿದುಕೊಂಡು “ನಾನು ಧರ್ಮಸ್ಥಳದಲ್ಲಿ 13 ಕಡೆ ನೂರಾರು ಮಹಿಳೆಯರು ಮತ್ತು ಬಾಲಕಿಯರ ಶವವನ್ನು ಹೂತಿದ್ದೇನೆ” ಎಂದು ಹೇಳಿದ ಘಟನೆಗೆ ಸಂಬಂಧಿಸಿದಂತೆ, ಮಂಗಳೂರಿನ ಪೊಲೀಸ್ ಅಧೀಕ್ಷಕರು ಮಂಪರು ಪರೀಕ್ಷೆ ಮಾಡಬೇಕೆಂದು ಮೊದಲು ನಿರ್ಧರಿಸಿದ್ದರು ಎಂಬುದು ಮಾಧ್ಯಮ ವರದಿಗಳಲ್ಲಿ ತಿಳಿದುಬಂದಿತ್ತು. ಆದರೆ, “ಮುಖ್ಯಮಂತ್ರಿಗಳು ಎಡಪಂಥೀಯ ಹಿಂದೂ ವಿರೋಧಿ ಗುಂಪುಗಳ ಒತ್ತಡಕ್ಕೆ ಜಗ್ಗಿ, ಈ ಪ್ರಕರಣವನ್ನು ಎಸ್.ಐ.ಟಿಗೆ ವಹಿಸುವ ತರಾತುರಿ ನಿರ್ಧಾರ ಕೈಗೊಂಡಿದ್ದಾರೆ” ಎಂದು ಶಾಸಕ ಟೀಕಿಸಿದರು.
“ಶ್ರೀ ಕ್ಷೇತ್ರ ಧರ್ಮಸ್ಥಳವು ಕೋಟಿ ಕೋಟಿ ಭಕ್ತರ ನಂಬಿಕೆಯ ಪುಣ್ಯ ಕ್ಷೇತ್ರ. ಇಂತಹ ವಿಷಯಗಳನ್ನು ಸರಕಾರವು ಗಂಭೀರವಾಗಿ ಪರಿಗಣಿಸಿ, ಸುಳ್ಳು ದೂರು ನೀಡಿದ ವ್ಯಕ್ತಿ ಮತ್ತು ಅವರ ಹಿಂದೆ ನಿಂತಿರುವ ಶಕ್ತಿಗಳ ವಿರುದ್ಧ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.