ಪುತ್ತೂರು:ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ `ಶ್ರೀಕೃಷ್ಣ ಲೀಲೋತ್ಸವ’ ಆ.16ರಂದು ನಡೆಯಿತು.
ಪಾಣಾಜೆ ಸುಬೊಧ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ಮಣಿಲ ಸುಬ್ರಹ್ಮಣ್ಯ ಶಾಸ್ತ್ರಿಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಜಗತ್ಗುರುವಿನ ಗುರುವಾದ ಸಾಂದೀಪನಿಯಲ್ಲಿ ವಿದ್ಯಾಭ್ಯಾಸ ಪಡೆಯುವಂತಹ ವಿದ್ಯಾರ್ಥಿಗಳು ಧನ್ಯರು.ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಉತ್ತಮ ಅಂಶಗಳು ಸಾಗಬೇಕು.ಇದು ಹಿರಿಯರಿಂದ ಮಾತ್ರ ಸಾಧ್ಯ ಎಂದು ಹೇಳಿ, ಈ ಸಂಸ್ಥೆ ಉತ್ತಮವಾಗಿ ಬೆಳೆಯಲು ಆಡಳಿತ ಮಂಡಳಿ, ಗುರುವೃಂದ, ಪೋಷಕ ವೃಂದಕ್ಕೆ ಭಗವಂತನು ಸರ್ವಶಕ್ತಿ ನೀಡಲಿ ಎಂದು ಹಾರೈಸಿದರು.

ಮುಖ್ಯ ಅಭ್ಯಾಗತರಾಗಿದ್ದ ಪುತ್ತೂರಿನ ಆಯುರ್ವೇದ ತಜ್ಞ ಡಾ.ಟಿ.ಪ್ರದೀಪ್ ಕುಮಾರ್ರವರು ಮಾತನಾಡುತ್ತಾ ವಿದ್ಯಾರ್ಥಿಗಳು ಈ ದೇಶದ ಆಸ್ತಿ,ಈ ದೇಶದ ಭವಿಷ್ಯ ಉತ್ತಮವಾಗಿರಬೇಕಾದರೆ ಉತ್ತಮ ಆರೋಗ್ಯ ಮುಖ್ಯ ಎಂದು ಹೇಳಿ, ವಿದ್ಯಾರ್ಥಿಗಳು ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದಾದ ವಿಧಾನಗಳ ಕುರುತು ಮಾಹಿತಿ ನೀಡಿದರಲ್ಲದೆ, ಈ ವಿದ್ಯಾ ಸಂಸ್ಥೆ ಯನ್ನು ಈ ಮಟ್ಟಕ್ಕೆ ತಂದ ಎಲ್ಲರನ್ನೂ ಅಭಿನಂದಿಸುತ್ತೇನೆ ಎಂದು ಹೇಳಿ,ಶುಭಹಾರೈಸಿದರು.
ಇನ್ನೋರ್ವ ಅತಿಥಿಯಾಗಿ ಶಾಲೆಯ ಪೋಷಕರೂ ಆಗಿರುವ ಗದಗದ ಸಾಮಾಜಿಕ ಕಾರ್ಯಕರ್ತ ದೇವಪ್ಪ ಕೆ.ಎಚ್.ರವರು ಮಾತನಾಡಿ,ವಿದ್ಯಾರ್ಥಿಗಳು ತಮ್ಮ ಜೀವನವನ್ನು ಸದುಪಯೋಗ ಪಡಿಸಿಕೊಂಡು ಗುರುಹಿರಿಯರಿಗೆ ಗೌರವಕೊಟ್ಟು ಬಾಳಿ ಎಂದು ಹಾರೈಸಿದರು.ಸಂಸ್ಥೆಯ ಅಧ್ಯಕ್ಷರಿಗೆ,ಸಂಚಾಲಕರಿಗೆ ಹಾಗೂ ವಸತಿ ನಿಲಯದ ಪಾಲಕ ಹರೀಶ್ರವರಿಗೆ ದೇವಪ್ಪ ಕೆ.ಎಚ್.ಅವರು ಶಾಲು ಹೊದಿಸಿ ಗೌರವಿಸಿದರು.
ಸಂಸ್ಥೆಯ ಅಧ್ಯಕ್ಷ ಶಿಬರ ಜಯರಾಮ ಕೆದಿಲಾಯರವರು ಮಾತನಾಡಿ,ಎಲ್ಲಾ ವಯಸ್ಸಿನವರಿಗೂ ಶ್ರೀಕೃಷ್ಣನ ಜೀವನ ಆದರ್ಶಪ್ರಾಯವಾಗಿದೆ.ಇಡೀ ಜಗತ್ತು ಶ್ರೀಕೃಷ್ಣನನ್ನು ಆದರ್ಶವಾಗಿಟ್ಟುಕೊಂಡು ಬಾಳಲಿ ಎಂದು ಹಾರೈಸಿದರು.
ಶಾಲಾ ಮುಖ್ಯಶಿಕ್ಷಕ ಪ್ರಸನ್ನ ಕೆ.ಅವರು ಅಷ್ಟಮಿಯ ಶುಭಾಶಯಗಳನ್ನು ಸಲ್ಲಿಸಿದರು.ಶಾಲಾ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಆಡಳಿತ ಮಂಡಳಿ ಕಾರ್ಯದರ್ಶಿ ಕೃಷ್ಣಪ್ರಸಾದ್ ಕೆದಿಲಾಯರವರು ಸ್ವಾಗತಿಸಿದರು.ವಿದ್ಯಾರ್ಥಿಗಳಾದ ಆರಾಧ್ಯ, ಹಂಸಿಕ, ವಿಶಾಖಾರವರು ಪ್ರಾರ್ಥಿಸಿದರು.ಶಿಕ್ಷಕಿಯರಾದ ಶ್ರೀಮತಿ ಪ್ರಶಾಂತಿ ಪಿ.ರವರು ಕಾರ್ಯಕ್ರಮ ನಿರೂಪಿಸಿದರು.ಶ್ರೀಮತಿ ಸಾವಿತ್ರಿರವರು ವಂದಿಸಿದರು.
ನಂತರ ವಿದ್ಯಾರ್ಥಿಗಳಿಂದ ಶ್ರೀ ಕೃಷ್ಣನ ಬಾಲ್ಯದ ದಿನಗಳನ್ನು ನೆನಪಿಸುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು, ಗೋಪುರ ಮೊಸರು ಕುಡಿಕೆ,ಅಪ್ಪಂಗಾಯಿ, ಶಿಕ್ಷಕರಿಗೆ, ಪೋಷಕರಿಗೆ ಹಾಗೂ ಹಿರಿಯ ವಿದ್ಯಾರ್ಥಿಗಳಿಗೆ ಹಗ್ಗಜಗ್ಗಾಟ ಸಹಿತ ವಿವಿಧ ಸ್ಪರ್ಧೆಗಳು ನಡೆದವು.ಶಾಲಾ ಶಿಕ್ಷಕರಾದ ರವಿಶಂಕರ್ ಹಾಗೂ ಶ್ರೀಮತಿ ಮಹಾಲಕ್ಷ್ಮಿಯವರು ಈ ಕಾರ್ಯಕ್ರಮ ನಿರೂಪಿಸಿದರು.ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಬಂದಂತಹ ಎಲ್ಲರಿಗೂ ಸಿಹಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.