5,64,13,541 ರೂ. ವ್ಯವಹಾರ, 4,11,386 ರೂ.ಲಾಭ, ಶೇ.10 ಡಿವಿಡೆಂಡ್
ಪುತ್ತೂರು: ಬಿಎಮ್ಎಸ್ ಅಟೋರಿಕ್ಷಾ ಚಾಲಕ ಮಾಲಕರ ಸೌಹಾರ್ದ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಆ.19ರಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಮುದಾಯ ಭವನದ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಸುರೇಶ್ ಸುಧಾಕರ್ ನಾಯಕ್ ಮಾತನಾಡಿ ಸಂಘವು 2024-25ನೇ ಸಾಲಿನಲ್ಲಿ 5,64,13,541 ರೂ.ಗಳ ವ್ಯವಹಾರ ಮಾಡಿದೆ. 87,86,926 ರೂ. ವಿವಿಧ ರೀತಿಯ ಒಟ್ಟು ಸಾಲಗಳನ್ನು ನೀಡಿದೆ. ನೀಡಿದ ಸಾಲಗಳಲ್ಲಿ ಒಟ್ಟು ಬಡ್ಡಿ ರೂ.13,86,948 ಹಾಗೂ ಇತರ ಮೂಲಗಳಿಂದ ರೂ.5,17,426 ಆದಾಯ ಬಂದಿದ್ದು ಒಟ್ಟು ರೂ.4,11,386 ಲಾಭ ಗಳಿಸಿದೆ. ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದು ಎಂದರು. ಸಾಲಗಳಿಗೆ ಜಾಮೀನು ಕೊಡುವಾಗ ಸಾಲ ಪಡೆಯುವ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಬೇಕು. ಇದಕ್ಕೆ ಸಂಘ ಜವಾಬ್ದಾರರಲ್ಲ. ಬಿಎಂಎಸ್ ಸಂಘಟನೆ ಬೇರೆ ಸೌಹಾರ್ದ ಸಹಕಾರಿ ಸಂಘ ಬೇರೆಯಾಗಿದೆ. ಸಹಕಾರಿ ಸಂಘ ಕಾನೂನಿನ ಪ್ರಕಾರ ನಡೆಯಬೇಕಾಗುತ್ತದೆ. ಸಾಲದ ವಾಯಿದೆ ಒಂದು ದಿನ ತಡವಾದರೂ ಸುಸ್ಥಿ ಸಾಲವಾಗುತ್ತದೆ ಎಂದ ಅವರು ಸಾಲವನ್ನು ಕ್ಲಪ್ತ ಸಮಯದಲ್ಲಿ ಪಾವತಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಿ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು.
ಸಂಘದ ನಿರ್ದೇಶಕ ರಾಜೇಶ್ ಮರೀಲು ಮಾತನಾಡಿ ರಿಕ್ಷಾ ಚಾಲಕರು ಹೊಸ ರಿಕ್ಷಾ ಪಡೆಯಲು ನಮ್ಮ ಸಹಕಾರಿ ಸಂಘದಲ್ಲಿಯೇ ಸಾಲ ಪಡೆಯಬೇಕು. ಇದರಿಂದ ಸಂಘ ಅಭಿವೃದ್ಧಿಯಾಗುತ್ತದೆ. ಸಾಲ ವಿತರಣೆ ಹೆಚ್ಚಾಗಬೇಕು. ಸಾಲದ ಮರುಪಾವತಿಯೂ ಸರಿಯಾಗಿರಬೇಕು ಆಗ ಸಂಘದ ಬೆಳವಣಿಗೆಯಾಗುತ್ತದೆ ಎಂದರು. ನಿರ್ದೇಶಕ ಸುಂದರ ನಾಯ್ಕ ಮಾತನಾಡಿ ಸಂಘದಿಂದ ನೀಡಲಾಗುತ್ತಿದ್ದ ವೈಯುಕ್ತಿಕ ಸಾಲವನ್ನು ಪ್ರಸ್ತುತ ರದ್ದುಗೊಳಿಸಲಾಗಿದೆ. ನಮ್ಮ ಸಂಘದಲ್ಲಿ ಒಟ್ಟು ವ್ಯವಹಾರ ಕಡಿಮೆಯಾಗಿದೆ. ಸದಸ್ಯರು ಸಾಲ ಪಡೆದುಕೊಂಡು ಪಾವತಿ ಮಾಡಿ ಸಂಘವನ್ನು ಅಭಿವೃದ್ಧಿ ಮಾಡಬೇಕು ಎಂದು ಹೇಳಿ ಸಂಘದ ಅಧ್ಯಕ್ಷರು, ನಿರ್ದೇಶಕರು, ಸಿಬಂದಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.
sಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸರ್ವಮಂಗಲ 2024-25ನೇ ಸಾಲಿನ ವಾರ್ಷಿಕ ವರದಿ ಮಂಡನೆ ಮಾಡಿದರು. ಸಿಬಂದಿ ಧನ್ಯಶ್ರೀ 2023-24ನೇ ಸಾಲಿನ ವಾರ್ಷಿಕ ಸಭೆಯ ನಡಾವಳಿಯನ್ನು ಓದಿ ಅನುಮೋದಿಸಿದರು. 2025-26ನೇ ಸಾಲಿನ ಅಂದಾಜು ಆಯವ್ಯಯ ಮತ್ತು ಕಾರ್ಯಯೋಜನೆ ಮಂಡನೆ ಮಾಡಿದರು.
ಉಪಾಧ್ಯಕ್ಷ ಬಿ.ಮೋಹನ್ ಹೆಗ್ಡೆ, ಬಿ.ಕೆ.ದೇವಪ್ಪ ಗೌಡ, ಎಮ್.ಬಾಲಕೃಷ್ಣ ಗೌಡ, ಹುಸೈನ್ ಜಿ., ರಾಘವೇಂದ್ರ ರೈ, ರಾಜೇಶ್ ಕೆ., ಬಿ.ಜನಾರ್ಧನ, ಬಿ.ಕೆ.ಸುಂದರ ನಾಯ್ಕ, ಎ.ಭಾಸ್ಕರ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿ ಧನ್ಯಶ್ರೀ ಪ್ರಾರ್ಥಿಸಿದರು. ಪಿಗ್ಮಿ ಸಂಗ್ರಾಹಕ ರವಿಚಂದ್ರ ವಂದಿಸಿದರು. ಪಿಗ್ಮಿ ಸಂಗ್ರಾಹಕ ಮಹೇಶ ಪ್ರಭು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.