ಉಪ್ಪಿನಂಗಡಿ: 47 ವರ್ಷಗಳ ಹಿಂದೆ ಸಹಪಾಠಿಗಳಾಗಿದ್ದು, ಇದೀಗ ವೃತ್ತಿಯಿಂದ ನಿವೃತ್ತರಾಗಿರುವ ಮಂದಿಯೆಲ್ಲಾ ಒಗ್ಗೂಡಿ, ತಮ್ಮ ನೆಚ್ಚಿನ ಶಿಕ್ಷಕರನ್ನು ಕರೆಯಿಸಿ ಅವರಿಗೆ ಗೌರವವಂದನೆ ಸಲ್ಲಿಸಿ, ಸ್ನೇಹಕೂಟವನ್ನು ನಡೆಸುವ ಮೂಲಕ ವಿದ್ಯಾರ್ಥಿ ಜೀವನದ ಸವಿ ನೆನಪನ್ನು ಮತ್ತೆ ಸವಿದ ವಿದ್ಯಾಮಾನ ಉಪ್ಪಿನಂಗಡಿಯಲ್ಲಿ ನಡೆದಿದೆ.
1977-78 ನೇ ಸಾಲಿನಲ್ಲಿ ಉಪ್ಪಿನಂಗಡಿಯ ಸರಕಾರಿ ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳ ಪುನರ್ ಮಿಲನ ಕಾರ್ಯಕ್ರಮ ವೈಶಿಷ್ಟ್ಯಪೂರ್ಣವಾಗಿ ನಡೆಯಿತು. ಸುಮಾರು 25 ಮಂದಿ ಸಹಪಾಠಿಗಳು ಮತ್ತೆ ತಾವು ಕಲಿತ ತರಗತಿಯಲ್ಲಿ ಒಗ್ಗೂಡಿದರು. ತಮಗೆ ಅಂದು ಪಾಠ ಮಾಡುತ್ತಿದ್ದ ಶಿಕ್ಷಕರಾದ ಎಂ. ನಾರಾಯಣ ಭಟ್ ಮತ್ತು ಕಾಂಚನ ಸುಂದರ ಭಟ್ ರವರನ್ನು ಕರೆಯಿಸಿ ಅವರಿಗೆ ಗುರುವಂದನೆ ಸಲ್ಲಿಸಿದರು.
ಒಗ್ಗೂಡಿದವರಲ್ಲಿ ವೈದ್ಯರು, ಮಾಜಿ ಶಾಸಕರು, ಉದ್ಯಮಿಗಳು, ಸಾಹಿತಿಗಳು, ಕೃಷಿಕರು, ಸರಕಾರಿ ನೌಕರರು, ಸಹಕಾರಿ ನೌಕರರು, ಪತ್ರಿಕಾ ವರದಿಗಾರರು, ಗೃಹಿಣಿಯರು ಸೇರಿದಂತೆ ಎಲ್ಲಾ ವರ್ಗದ ಮಂದಿಯೂ ಸೇರಿದ್ದರು. ಶಾಲಾ ಜೀವನ ಬಳಿಕದ ಜೀವನದ ಸವಿ ನೆನಪುಗಳ ವಿನಿಮಯ ನಡೆಸಿ ಸಂತಸಪಟ್ಟರು.
ರುಕ್ಮಿಣಿ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಡಾ. ಗೋವಿಂದ ಪ್ರಸಾದ್ ಕಜೆ ಸ್ವಾಗತಿಸಿದರು. ಗೋಪಾಲ ಕೃಷ್ಣ ಭಟ್ ಪ್ರಸ್ತಾವಿಕ ಮಾತುಗಳನ್ನಾಡಿದರು. ವಿಜಯಕುಮಾರ್ ಕಲ್ಲಳೀಕೆ ವಂದಿಸಿದರು. ಜಲೀಲ್ ಮುಕ್ರಿ ಕಾರ್ಯಕ್ರಮ ನಿರೂಪಿಸಿದರು. ಕರಾಯ ಗಣೇಶ್ ನಾಯಕ್ ಸಿಹಿ ಭೋಜನದ ಪ್ರಾಯೋಜಕತ್ವ ವಹಿಸಿದ್ದರು.
ಒಟ್ಟಾರೆ ಬಾಳ ಸಂಧ್ಯಾ ಕಾಲದಲ್ಲಿ ವಿದ್ಯಾರ್ಥಿ ಬದುಕಿನ ಸವಿ ನೆನಪುಗಳನ್ನು ತಮ್ಮ ನೆಚ್ಚಿನ ಗುರುಗಳ ಉಪಸ್ಥಿತಿಯೊಂದಿಗೆ ಹಂಚಿಕೊಳ್ಳುವ ಈ ಅಪೂರ್ವ ಸನ್ನಿವೇಶದಿಂದಾಗಿ ಜೀವನೋತ್ಸಾಹ ಹೆಚ್ಚಿಸಲು ಕಾರಣವಾಯಿತು.