ಮೂರು ದಿನದೊಳಗೆ ಸಮಸ್ಯೆಗೆ ಸಂಪೂರ್ಣ ವಿರಾಮ: ಶಾಸಕ ಅಶೋಕ್ ರೈ
ಪುತ್ತೂರು: ದಕ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಉಂಟಾಗಿರುವ ಕೆಂಪು ಕಲ್ಲು ಸಮಸ್ಯೆ ಬಗ್ಗೆ ಆ.20ರಂದು ವಿಧಾನಸೌಧ ಸಭಾಂಗಣದಲ್ಲಿ ಸ್ಪೀಕರ್ ಯು ಟಿ ಖಾದರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಉಭಯ ಜಿಲ್ಲೆಗಳಲ್ಲಿ ಉಂಟಾಗಿರುವ ಕೆಂಪು ಕಲ್ಲು ಸಮಸ್ಯೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಈ ಹಿಂದೆ 74 ರೂ ಇದ್ದ ರಾಯಲ್ಟಿ ಟ್ಯಾಕ್ಸನ್ನು ಹೊಸ ಕಾನೂನಿನಡಿ 256 ಕ್ಕೆ ಏರಿಕೆ ಮಾಡಲಾಗಿತ್ತು. ಏರಿಕೆ ಮಾಡಲಾದ ರಾಯಲ್ಟಿ ಟ್ಯಾಕ್ಸನ್ನು 100 ರೂ ಗೆ ಸೀಮಿತಿಗೊಳಿಸುವುದು ಮತ್ತು ಪರವಾನಿಗೆ ಯನ್ನು ಎರಡು ವರ್ಷಕ್ಕೆ ಏರಿಕೆ ಮಾಡುವುದಾಗಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಕೆಂಪು ಕಲ್ಲು ಸಮಸ್ಯೆಯಿಂದ ಉಭಯ ಜಿಲ್ಲೆಗಳಲ್ಲಿ ಮನೆ ನಿರ್ಮಾಣ ಮಾಡುವಲ್ಲಿ ತೀವ್ರ ಸಮಸ್ಯೆಯಾಗಿರುವ ಮತ್ತು ಕೂಲಿ ಹಾಗೂ ಗಾರೆ ಕಾರ್ಮಿಕರಿಗೆ ತೊಂದರೆಯಾಗಿರುವ ವಿಚಾರವನ್ನು ಶಾಸಕ ಅಶೋಕ್ ರೈ ಹಾಗೂ ಇತರ ಜಿಲ್ಲೆಯ ಶಾಸಕರು ಈ ವಿಚಾರವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದರು. ಮನವಿಯನ್ನು ಪುರಸ್ಕರಿಸಿದ್ದ ಸದನ ಈ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದ್ದರು. ಅದರಂತೆ (ಆ.20) ರಂದು ಸಭೆ ನಡೆದಿದೆ. ಸಭೆಯ ರೂಪುರೇಶೆಗಳನ್ನು ಕ್ಯಾಬಿನೆಟ್ ಸಮಿತಿಗೆ ಕಳುಹಿಸಲಾಗಿದ್ದು ಮೂರು ದಿನದೊಳಗೆ ಇದಕ್ಕೆ ಅಂತಿಮ ತೆರೆ ಬೀಳುವ ಸಾಧ್ಯತೆ ಇದೆ. ಸಭೆಯಲ್ಲಿ ದ ಕ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸೇರಿದಂತೆ ದ ಕ ಹಾಗೂ ಉಡುಪಿ ಜಿಲ್ಲೆಯ ಶಾಸಕರುಗಳು ಉಪಸ್ಥಿತರಿದ್ದರು.
ವಿಧಾನಸಭಾ ಅಧ್ಯಕ್ಷರಾದ ಯು ಟಿ ಖಾದರ್ ಅಧ್ಯಕ್ಷತೆಯಲ್ಲಿ ಇಂದು ಸಭೆ ನಡೆದಿದೆ. ಸಭೆಯಲ್ಲಿ ಕೆಂಪು ಕಲ್ಲು ಸಮಸ್ಯೆಯ ಬಗ್ಗೆ ದೀರ್ಘ ಚರ್ಚೆ ನಡೆದಿದೆ. ಮುಂದೆ ಯಾವ ರೀತಿ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು ಎಂಬುದರ ಬಗ್ಗೆ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಸಭೆಯ ವರದಿಯನ್ನು ಕ್ಯಾಬಿನೆಟ್ ಸಮಿತಿಗೆ ಕಳುಹಿಸಲಾಗಿದೆ. ಸಮಸ್ಯೆ ಇತ್ಯರ್ಥವಾಗಲಿದೆ.
ಅಶೋಕ್ ರೈ, ಶಾಸಕರು ಪುತ್ತೂರು