ಪುತ್ತೂರು: ಈ ಬಾರಿಯ ಗಣೇಶೋತ್ಸವ ಆಚರಣೆಯಲ್ಲಿ ಪೊಲೀಸ್ ಹಾಗೂ ಸಂಬಂಧಿತ ಇಲಾಖೆಗಳ ಕಡ್ಡಾಯ ಲಿಖಿತ ಅನುಮತಿ ಪತ್ರ ಪಡೆದುಕೊಂಡು ಗಣೇಶೋತ್ಸವ ಕಾರ್ಯಕ್ರಮ ಹಾಗೂ ಮೆರವಣಿಗೆ ನಡೆಸಬೇಕು. ಯಾವುದೇ ಕಾರಣಕ್ಕೂ ರಾತ್ರಿ 11.30 ರ ನಂತರ ಮೆರವಣಿಗೆ ನಡೆಸಲು ಅನುಮತಿ ಇಲ್ಲ. ಅಲ್ಲದೆ ಡಿಜೆ ಸಂಪೂರ್ಣ ನಿಷೇಧಗೊಳಿಸಲಾಗಿದೆ. ರಾತ್ರಿ 10 ಗಂಟೆಗೆ ಧ್ವನಿವರ್ಧಕಗಳ ಬಳಕೆ ಸಂಪೂರ್ಣ ನಿಷೇಧ ಮಾಡಲಾಗಿದೆ ಎಂದು ಸಂಪ್ಯ ಠಾಣಾ ಎಸ್ಐ ಜಂಬೂರಾಜ್ ಮಹಾಜನ್ ಹೇಳಿದರು.
ಪುತ್ತೂರು ಗ್ರಾಮಾಂತ್ರರ ಠಾಣಾ ವ್ಯಾಪ್ತಿಯ ಗಣೇಶೋತ್ಸವ ಕಾರ್ಯಕ್ರಮ ಆಯೋಜಕರ ಸಭೆಯಲ್ಲಿ ಗಣೇಶೋತ್ಸವ ಸಮಿತಿ ಆಚರಣೆಗೆ ಸಂಬಂಧಿಸಿ ಕೆಲವು ಸೂಚನೆಗಳನ್ನು ಅವರು ನೀಡಿದರು. ಖಾಸಗಿ ಸ್ಥಳದಲ್ಲಿ ಕಾರ್ಯಕ್ರಮ ನಡೆಸುವವರು ಸಂಬಂಧಪಟ್ಟ ಸ್ಥಳದ ಮಾಲಕರಿಂದ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಧ್ವನಿವರ್ಧಕ ಬಳಕೆಗೆ ಮುಂಚಿತವಾಗಿ ಅನುಮತಿ ಪಡೆಯಬೇಕು. ಧಾರ್ಮಿಕ ವಿರೋಧಿ ಘೋಷಣೆ, ದ್ವೇಷ ಭಾಷಣ, ಭಿತ್ತಿಪತ್ರಗಳು, ಸೋಷಿಯಲ್ ಮೀಡಿಯಾ ಪೋಸ್ಟ್ಗಳು ಧರ್ಮ ವಿರೋಧ ಉಂಟು ಮಾಡುವ ರೀತಿಯಲ್ಲಿ ಇರಬಾರದು. ಕಾರ್ಯಕ್ರಮದಲ್ಲಿ ಜನಸಂದಣಿಗೆ ಕಡ್ಡಾಯ ಸ್ವಯಂಸೇವಕರ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು. ಕಾರ್ಯಕ್ರಮಕ್ಕೆ ಡ್ರೋಣ್ಗಳನ್ನು ಬಳಸಲು ಮುಂಚಿತ ಅನುಮತಿ ಕಡ್ಡಾಯವಾಗಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಬಾರದು. ಆಯೋಜನೆಯ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದ ಅವರು ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಈ ನಿಯಮಗಳನ್ನು ಅನುಸರಿಬೇಕು. ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ನಮ್ಮ ಸಂಸ್ಕೃತಿ, ಸಂಪ್ರದಾಯದಂತೆ ಗಣೇಶೋತ್ಸವ ಆಚರಣೆ ಮಾಡಿ ಎಂದು ಹೇಳಿದರು.
ಮೆರವಣಿಗೆಯ ಸಂದರ್ಭದಲ್ಲಿ ಧ್ವನಿವರ್ಧಕ ಬಳಸಲು ರಾತ್ರಿ ಒಂದು ಗಂಟೆ ಹೆಚ್ಚುವರಿ ಅನುಮತಿ ನೀಡಬೇಕು ಎಂದು ಆಯೋಜಕರು ತಿಳಿಸಿದರು. ಮೆರವಣಿಗೆಗೂ ಹೆಚ್ಚುವರಿ ಕಾಲಾವಕಾಶ ನೀಡುವಂತೆ ಮನವಿ ಮಾಡಿಕೊಂಡರು. ಗ್ರಾಮಾಂತರ ವ್ಯಾಪ್ತಿಯ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.