ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಪದವಿ ಕಾಲೇಜಿನ ಕಲಾ ವಿಭಾಗದ ಒಕ್ಕೂಟವಾದ ‘ಧೃತಿ’ ಯ ಉದ್ಘಾಟನೆ ಕಾಲೇಜಿನ ಆಂತರಿಕ ಗುಣಮಟ್ಟ ದ ಭರವಸೆಯ ಕೋಶದ ಸಹಭಾಗಿತ್ವದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಹಿಳಾ ಪ್ರಥಮ ದರ್ಜೆ ಕಾಲೇಜು ಪುತ್ತೂರು ಇದರ ನಿವೃತ್ತ ಪ್ರಾಂಶುಪಾಲರು ಪ್ರೊ.ಕ್ಸೇವಿಯರ್ ಡಿಸೋಜಾ, ಪದವಿ ಶಿಕ್ಷಣ ದಲ್ಲಿ
ವಿದ್ಯಾರ್ಥಿಗಳು ಆಯ್ಕೆ ಮಾಡುವ ವಿಷಯಗಳಿಗೆ ಸಂಬಂಧಿಸಿದಂತೆ ಕಲಾ ವಿಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ಎಲ್ಲಾ ವಿಷಯಗಳಿಗೆ ಅದರದೇ ಆದ ಮಹತ್ವವಿದೆ. ಕಲಾ ಪದವಿ ಪಡೆದ ವಿದ್ಯಾರ್ಥಿಗಳಿಗೆ ಶಿಕ್ಷಣ, ರಾಜಕೀಯ, ಸಾಹಿತ್ಯ ಮುಂತಾದ ಹಲವಾರು ಕ್ಷೇತ್ರಗಳನ್ನು ಆಯ್ಕೆ ಮಾಡಬಹುದು. ಪದವಿ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಆಯ್ಕೆ ಮಾಡುವ ವಿಷಯ ಹೊರತುಪಡಿಸಿ, ತಮ್ಮನ್ನು ತಾವು ಹೇಗೆ ಸಂಪೂರ್ಣವಾಗಿ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದೀರಿ ಎಂಬುವುದು ಪ್ರಾಮುಖ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯುವಲ್ಲಿ ಶ್ರಮ ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷ ಜಯಂತ್ ನಡುಬೈಲ್ ಕಲಾ ವಿಭಾಗದ ನೂತನ ಪ್ರಾಜೆಕ್ಟರ್ ಉದ್ಘಾಟಿಸಿ , ವಿದ್ಯಾರ್ಥಿಗಳು ಕಲಾ ವಿಭಾಗವನ್ನು ಆಯ್ಕೆ ಮಾಡುವಲ್ಲಿ ಹಿಂಜರಿದರೂ, ಅವರಿಗೆ ಕಲಾ ವಿಭಾಗದ ವಿಷಯಗಳ ಜೊತೆಗೆ ವೃತ್ತಿಪರ ಶಿಕ್ಷಣವನ್ನು ನೀಡುತ್ತಿದ್ದು, ನಮ್ಮ ಸಂಸ್ಥೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಪೂರಕ ವಾತಾವರಣ ನಿರ್ಮಿಸಿದೆ. ವಿದ್ಯಾರ್ಥಿಗಳು ಪ್ರಮಾಣಿಕ ಮತ್ತು ನಿರಂತರ ಪರಿಶ್ರಮದಿಂದ ತಮ್ಮ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಸೂಕ್ತ ಸಲಹೆ ನೀಡಿದರು.
ಕಲಾ ವಿಭಾಗದ ಮುಖ್ಯಸ್ಥರಾದ ಅಶೋಕ ಎಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲರಾದ ಸಂಪತ್ ಕೆ ಪಕ್ಕಳ, ಕಾಲೇಜಿನ ಆಡಳಿತಾಧಿಕಾರಿ ಅರ್ಪಿತ್ ಟಿ ಎ ಆಂತರಿಕ ಗುಣಮಟ್ಟ ಭರವಸೆಯ ಕೋಶದ ಸಂಯೋಜಕರಾದ ರಶ್ಮಿ ಕೆ ಉಪಸ್ಥಿತರಿದ್ದರು. ಕಲಾ ವಿಭಾಗದ ಒಕ್ಕೂಟದ ಸಂಯೋಜಕರಾದ ಗಂಧರ್ವ ಸ್ವಾಗತಿಸಿ, ಒಕ್ಕೂಟದ ಕಾರ್ಯದರ್ಶಿ ವಿದ್ಯಾರ್ಥಿ ಶರಣ್ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿಗಳಾದ ಶ್ರೇಯಾ, ಕಾವ್ಯ ಶ್ರೀ ಮತ್ತು ದೀಪ ಶ್ರೀ ಪ್ರಾರ್ಥಿಸಿ, ದ್ವಿತೀಯ ಪದವಿ ಕಲಾ ವಿಭಾಗದ ಹರಿಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸಿದರು.