ಅಡಿಕೆ ಕೃಷಿಕರ ಹಿತಾಸಕ್ತಿ ರಕ್ಷಿಸಲು ಬದ್ಧ : ಬಿಜೆಪಿ ಸಂಸದರ ನಿಯೋಗಕ್ಕೆ ಕೇಂದ್ರ ಕೃಷಿ ಸಚಿವರ ಭರವಸೆ

0

ಬೆಂಗಳೂರು: ಅಡಿಕೆ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವುದು ನಿಜವೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಹಚ್ಚಲು ಶೀಘ್ರದಲ್ಲಿ ಸಂಶೋಧನೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಭಾರತೀಯ ಕೃಷಿ ಸಂಶೋಧನಾ ಮಂಡಳಿ-ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್(ಐಸಿಎಆರ್)ಗೆ ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್ ನಿರ್ದೇಶನ ನೀಡಿದರಲ್ಲದೆ,ಅಡಿಕೆ ಕೃಷಿಕರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.


ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕರ್ನಾಟಕದಲ್ಲಿ ಅಡಿಕೆಗೆ ವ್ಯಾಪಕ ಕೊಳೆ ರೋಗ ಹರಡಿರುವುದರಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನು ಮನಗಂಡು ಕರ್ನಾಟಕದ ಬಿಜೆಪಿ ಸಂಸದರ ನಿಯೋಗವೊಂದು ದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿ, ಕೊಳೆರೋಗದಿಂದ ಬೆಳೆ ಹಾನಿಯಾಗಿ ನಷ್ಟ, ಹಳದಿ ಎಲೆ ಚುಕ್ಕೆ ರೋಗ ಸೇರಿದಂತೆ ಅಡಿಕೆ ಕೃಷಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ. ಈ ಸಂದರ್ಭ,ಕರ್ನಾಟಕದ ಸಂಸದರ ನಿಯೋಗ ಮತ್ತು ಕೇಂದ್ರ ಸಚಿವರ ಜತೆಗೆ ವಿವಿಧ ಇಲಾಖೆಯ ಪ್ರಮುಖ ಅಽಕಾರಿಗಳೊಂದಿಗೆ ದೆಹಲಿ ಕೃಷಿ ಭವನದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ಸಚಿವ ಚೌಹಾಣ್ ಅವರು,ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರಲ್ಲದೆ, ಪರಿಹಾರಗಳನ್ನು ಕಂಡುಹಿಡಿಯಲು ಶೀಘ್ರದಲ್ಲೇ ಬೆಂಗಳೂರಿಗೆ ಬರುವುದಾಗಿ ಭರವಸೆ ನೀಡಿ, ವಿಜ್ಞಾನಿಗಳ ತಂಡದೊಂದಿಗೆ ಭೇಟಿಗೆ ದಿನಾಂಕ ನಿಗದಿಗೆ ಸೂಚಿಸಿದರು.


ಅನಾದಿ ಕಾಲದಿಂದಲೂ ಅಡಿಕೆ ಬಳಕೆ
ಭಾರತದಲ್ಲಿ ಅನಾದಿಕಾಲದಿಂದಲೂ ಅಡಿಕೆಯನ್ನು ಉಪಯೋಗಿಸಲಾಗುತ್ತಿದೆ.ಪ್ರತಿ ಶ್ರೇಷ್ಟ ಸಂದರ್ಭದಲ್ಲಿ ಅಡಿಕೆಯನ್ನು ಬಳಸಲಾಗುತ್ತದೆ.ಅನೇಕ ಧಾರ್ಮಿಕ,ಸಾಮಾಜಿಕ ಮತ್ತು ಸಾಂಸ್ಕೃತಿಕ ಆಚರಣೆಗಳಲ್ಲಿ ಅಡಿಕೆಯನ್ನು ಬಳಸಲಾಗುತ್ತದೆ.ಇದನ್ನು ಆಯುರ್ವೇದ ಮತ್ತು ಪಶುವಿಜ್ಞಾನ ಔಷಽಗಳಲ್ಲಿಯೂ ಬಳಸಲಾಗುತ್ತದೆ.ಆದರೆ ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಇರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಹೆಚ್‌ಒ)ಯ ವರದಿಯೊಂದರಿಂದಾಗಿ ಗೊಂದಲ ಮೂಡಿದೆ.ಈ ನಿಟ್ಟಿನಲ್ಲಿ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ ಎಂದು ಹೇಳಿದ ಸಚಿವರು,ನಿಗದಿತ ಕಾಲಮಿತಿಯೊಳಗೆ ಸಂಶೋಧನೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಇಕಾರ್‌ಗೆ ಸೂಚಿಸಿದರು.


ನಷ್ಟಕ್ಕೆ ಪರಿಹಾರ
ಕೊಳೆರೋಗದಿಂದ ಅಡಿಕೆ ಬೆಳೆ ನಾಶವಾಗಿರುವ ಸಂಬಂಧ ಆಗಿರುವ ನಷ್ಟಕ್ಕೆ ಸರ್ಕಾರ ಸೂಕ್ತ ಪರಿಹಾರ ಒದಗಿಸಲಿದೆ ಎಂದು ಹೇಳಿದ ಸಚಿವ ಚೌಹಾಣ್ ಅವರು ಅಡಿಕೆ ಕೃಷಿಕರ ಹಿತಾಸಕ್ತಿ ರಕ್ಷಿಸಲು ಸರಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.


ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ನೇತೃತ್ವದ ಕರ್ನಾಟಕದ ಬಿಜೆಪಿ ಸಂಸದರ ನಿಯೋಗವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕರೆದೊಯ್ದು ಕೃಷಿ ಸಚಿವರನ್ನು ಭೇಟಿ ಮಾಡಿಸಿ ಅಡಿಕೆ ಬೆಳಗಾರರ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಅಡಿಕೆ ಬೆಳೆಗಾರರ ಸಮಸ್ಯೆ ಮತ್ತು ಬೇಡಿಕೆಗಳ ಕುರಿತ ನಿಯೋಗದ ಮಾಹಿತಿಯನ್ನು ತಾಳ್ಮೆಯಿಂದ ಆಲಿಸಿದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಅಡಿಕೆ ರೈತರ ಸಮಸ್ಯೆ ತ್ವರಿತವಾಗಿ ಇತ್ಯರ್ಥ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ದ.ಕ.ಸಂಸದ ಕ್ಯಾ|ಬ್ರಿಜೇಶ್ ಚೌಟ ಸೇರಿದಂತೆ ರಾಜ್ಯದಲ್ಲಿ ಅಡಿಕೆ ಬೆಳೆಯುವ ಪ್ರದೇಶದ ಬಿಜೆಪಿ ಸಂಸದರು ನಿಯೋಗದಲ್ಲಿದ್ದರು.


ಕಾಲಾವಧಿಯಲ್ಲಿ ಸಮಸ್ಯೆಬಗೆಹರಿಸುವ ಭರವಸೆ-ಎಚ್‌ಡಿಕೆ
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಭಾರೀ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ, ನಾನಾ ಕಾರಣಗಳಿಂದ ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದು,ಈ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು.ಬೆಳೆಗಾರರ ಸಮಸ್ಯೆಗಳನ್ನು ಕಾಲಾವಧಿಯಲ್ಲಿ ಬಗೆಹರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.


ಹಲವು ಬೇಡಿಕೆಗಳನ್ನು ನೀಡಿದ್ದೇವೆ-ಕಾಗೇರಿ
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ,ಇಂದು ಕರ್ನಾಟಕದ ಹಾಗೂ ದೇಶದ ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ನಿರ್ಮಲ ಸೀತಾರಾಮನ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಲಾಗಿದೆ.ಡಬ್ಲ್ಯೂಎಚ್‌ಒ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ, ಕ್ಯಾನ್ಸರ್‌ಗೆ ಕಾರಣ ಆಗುತ್ತದೆ ಎಂದು ಹೇಳಿದೆ.ಇದು ಸುಪ್ರೀಂಕೋರ್ಟ್‌ಗೆ ಹೋಗಿದ್ದು,ಕೋರ್ಟ್ ಕೇಂದ್ರಕ್ಕೆ ವರದಿ ಕೇಳಿದೆ.ಈ ಹಿನ್ನೆಲೆಯಲ್ಲಿ ಅಡಿಕೆ ಅಧ್ಯಯನಕ್ಕೆ ಸರ್ಕಾರ ಸೂಚಿಸಿದ್ದು ಅಧ್ಯಯನ ವರದಿಯನ್ನು ಶೀಘ್ರ ಕೊಡಬೇಕು ಮತ್ತು ಉನ್ನತ ಸಮಿತಿ ಜೊತೆಗೆ ಒಂದು ಸಭೆ ಏರ್ಪಡಿಸಲು ಮನವಿ ಮಾಡಲಾಗಿದೆ.ಹಳದಿ ಎಲೆ ರೋಗ, ಎಲೆ ಚುಕ್ಕೆ ರೋಗದ ಬಗ್ಗೆಯೂ ಚರ್ಚೆ ಮಾಡಲಾಗಿದೆ.ಹಳದಿ ಎಲೆ ರೋಗ ಬಂದರೆ ಆ ಪ್ರದೇಶದಲ್ಲಿ ಮತ್ತೆ ಅಡಿಕೆ ಬೆಳೆಯಲು ಸಾಧ್ಯವಿಲ್ಲ.ಪೂರ್ಣ ಪ್ರಮಾಣದಲ್ಲಿ ಅಡಿಕೆ ಬೆಳಯಲು ಅಲ್ಲಿ ಸಾಧ್ಯವಾಗುತ್ತಿಲ್ಲ,ಅದಕ್ಕೆ ಪರಿಹಾರ ಹೇಗೆ ಕೊಡಬಹುದು? ಹಾಗೂ ಹಳದಿ ಎಲೆ ರೋಗಕ್ಕೆ ಔಷಽ ಬೇಕಿದೆ, ಇದಕ್ಕೆ ಪರಿಹಾರ ಕಂಡುಕೊಳ್ಳಲು ಕೇಳಿಕೊಂಡಿದ್ದೇವೆ.ಈ ಬಗ್ಗೆ ಸಚಿವ ಶಿವರಾಜ್ ಸಿಂಗ್ ಚೌಹಾನ್ ಸಹ ಅಽಕಾರಿಗಳಿಗೆ ಸೂಚಿಸಿದ್ದಾರೆ ಎಂದು ಹೇಳಿದರು.


ಅಡಿಕೆಗೆ 11ಶೇ.ಮಾಯಿಷರ್ ಇದ್ದೇ ಇರುತ್ತದೆ.ಸದ್ಯ ಅದು 7ಶೇ. ಇದೆ.ಇದು ಸಾಧ್ಯವಿಲ್ಲ. ಹೀಗಾಗಿ ಇದನ್ನು ಶೇ.11ಕ್ಕೆ ಹೆಚ್ಚಿಸಿ ಬೆಲೆ ಸರಿಯಾಗಿ ನೀಡಲು ಕೇಳಿಕೊಳ್ಳಲಾಗಿದೆ. ಅಡಿಕೆ ಸೈಜ್ ನಿಂದ ದರದಲ್ಲಿ ವ್ಯತ್ಯಾಸವಾಗುತ್ತಿದೆ.ಇದು ಆಗಬಾರದು ಎಂದು ಮನವಿ ಮಾಡಲಾಗಿದೆ. ಅಡಿಕೆಗೆ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ. 5ಶೇ.ಜಿಎಸ್ಟಿ ಇದೆ.ಇದನ್ನು ಕಡಿಮೆ ಮಾಡಲು ಮನವಿ ಮಾಡಿದ್ದೇವೆ.ಅಡಿಕೆ ಕುಯ್ಲುಗೆ ಕಾರ್ಮಿಕರ ಸಮಸ್ಯೆಯಾಗಿದೆ. ಅದಕ್ಕೆ ಫೈಬರ್ ದೋಟಿಗೆ 48ಶೇ.ಕಸ್ಟಮ್ಸ್ ಇದೆ.ಅದನ್ನು ಕಡಿಮೆ ಮಾಡಲು ಮನವಿ ಮಾಡಲಾಗಿದೆ.ಅಡಿಕೆ ಕೊಳೆ ರೋಗಕ್ಕೆ ಬಳಕೆಯಾಗುವ ಕಾಪರ್ ಸಲೇಟ್‌ಗೆ 18ಶೇ.ಜಿಎಸ್‌ಟಿ ಇದ್ದು ಅದನ್ನು 5% ಇಳಿಕೆಗೆ ಕೇಳಲಾಗಿದೆ ಎಂದು ಮಾಹಿತಿ ನೀಡಿದರು.

ಕೃಷಿಕರಿಗೆ ಬ್ಯಾಂಕುಗಳಲ್ಲಿ ಇರುವ ಸಾಲ ಸೌಲಭ್ಯ ಹೆಚ್ಚಿಸಬೇಕು ಮತ್ತು ಕಡಿಮೆ ಬಡ್ಡಿ ವಿಽಸಲು ಮನವಿ ಮಾಡಲಾಗಿದೆ.ಅಡಿಕೆ ಹಾಳೆ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಯಾಗುತ್ತಿದೆ.ಈ ಬಗ್ಗೆ ಸರ್ಕಾರ ಜಾಗೃತಿ ಮೂಡಿಸಬೇಕು. ಹವಾಮಾನ ಆಧರಿತ ಬೆಳೆ ವಿಮೆ ಯೋಜನೆಯಿಂದ ಅಡಿಕೆ ಬೆಳೆಗಾರರಿಗೆ ಅನುಕೂಲ ಆಗುತ್ತಿದೆ.ಮಳೆ ಮಾಪನ ಯಂತ್ರಗಳು ಪ್ರತಿ ಪಂಚಾಯತ್‌ನಲ್ಲಿರುತ್ತವೆ. ಆದರೆ ರಾಜ್ಯದಲ್ಲಿ 130 ಯಂತ್ರಗಳು ಕೆಟ್ಟು ನಿಂತಿವೆ.ಅದನ್ನು ಸರಿಪಡಿಸಲು, ಮೇಲ್ವಿಚಾರಣೆ ಮಾಡಲು ಕೇಳಲಾಗಿದೆ. ಮಳೆ ಪ್ರಮಾಣ ದಾಖಲಾದರೆ ಮಾತ್ರ ವಿಮೆ ಕ್ಲೈಮ್ ಮಾಡಬಹುದು ಎಂದು ಕಾಗೇರಿ ಹೇಳಿದರು.

ನಿಯೋಗದ ಬೇಡಿಕೆಗಳು
ಕೇಂದ್ರ ಕೃಷಿ ಸಚಿವರನ್ನು ಭೇಟಿಯಾದ ನಿಯೋಗ ಮಂಡಿಸಿರುವ ಪ್ರಮುಖ ಬೇಡಿಕೆಗಳು ಇಂತಿವೆ. ಅಡಿಕೆ ಹಳದಿ ಎಲೆ ಶಿಲೀಂಧ್ರ ಮತ್ತು ಇತರ ರೋಗಗಳಿಗೆ ದೀರ್ಘಾವಧಿಯ ಅಧ್ಯಯನ ಮಾಡಲು ಮತ್ತು ಪರಿಹಾರ ಕಂಡು ಹಿಡಿಯಲು ಪ್ರತಿಷ್ಠಿತ ಸಂಶೋಧನಾ ಸಂಸ್ಥೆಯಿಂದ ಸಮಗ್ರ ಅಧ್ಯಯನ ನಡೆಸಬೇಕು. ದೇಶಕ್ಕೆ ಅಡಿಕೆ ಅಕ್ರಮ ಆಮದನ್ನು ತಡೆಯಲು ಕಸ್ಟಮ್ಸ್ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು. ಅಡಿಕೆಯ ಅಕ್ರಮ ವ್ಯಾಪಾರ ತಡೆಗೆ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಹಾಗೂ ಚೆಕ್ ಪಾಯಿಂಟ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಎಫ್ ಎಸ್‌ಎಸ್‌ಎಐ ಪ್ರಕಾರ ಅಡಿಕೆಯಲ್ಲಿ ತೇವಾಂಶ ಪ್ರಮಾಣ ಶೇ.7ರಷ್ಟಿರಬೇಕು.ಈ ಮಟ್ಟ ಕಾಯ್ದುಕೊಳ್ಳುವುದು ತುಂಬಾ ಕಷ್ಟ. ಹವಾಮಾನ ಪರಿಸ್ಥಿತಿಗಳಿಂದಾಗಿ ಈ ಪ್ರಮಾಣ ಶೇ.12 ಇರಬಹುದು ಎಂದು ಆದೇಶ ಹೊರಡಿಸಬೇಕು.ಅಡಿಕೆ ಕೃಷಿಗೆ ನೀಡುವ ಸಾಲದ ಮೇಲಿನ ಬಡ್ಡಿ ಕಡಿತ ಮಾಡಬೇಕು.ಅಡಿಕೆ ಮೇಲಿನ ಜಿಎಸ್‌ಟಿಯನ್ನು ಶೇ.5ರಿಂದ ಶೇ.2ಕ್ಕೆ ಇಳಿಸಬೇಕು.ಅಡಿಕೆ ಬೆಳೆಗಾರರು ಬಳಸುವ ಕಾಪರ್ ಸಲೇಟ್ ಮೇಲಿನ ಜಿಎಸ್‌ಟಿಯನ್ನು ಶೇ.18ರಿಂದ ಶೇ.5ಕ್ಕೆ ಕಡಿಮೆ ಮಾಡಬೇಕು. ರೈತರು ಅಡಿಕೆ ಶೇಖರಣೆ ಮಾಡಲು ಗೋದಾಮುಗಳ ವ್ಯವಸ್ಥೆ ಮಾಡಬೇಕು. ರೈತರಿಗೆ ಬೆಳೆ ವಿಮಾ ಸೌಲಭ್ಯ ಸರಳೀಕರಣಗೊಳಿಸಬೇಕು.

LEAVE A REPLY

Please enter your comment!
Please enter your name here