ಕುಂಬಾರಿಕೆಯ ಉತ್ಪನ್ನಗಳ ಮಾರಾಟಕ್ಕೆ ಚಾಲನೆ, ಆ್ಯಪ್ ಬಿಡುಗಡೆ, ಸಾಧಕರಿಗೆ ಸನ್ಮಾನ
ಪುತ್ತೂರು: ಕುಂಬಾರರ ಗುಡಿಕೈಗಾರಿಕಾ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.24ರಂದು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾ ಭವನದಲ್ಲಿ ನಡೆಯಿತು.
ಕುಂಬಾರಿಕೆಯ ಉತ್ಪನ್ನಗಳ ಮಾರಾಟಕ್ಕೆ ಚಾಲನೆ ನೀಡಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಕುಂಬಾರರು ಅನಾದಿ ಕಾಲದಿಂದಲೂ ಕುಂಬಾರಿಕೆ ವೃತ್ತಿ ಮಾಡಿದವರು. ಕರಕುಶಲ ವಸ್ತುಗಳಿಗೂ ಬೇಡಿಕೆಯಿದೆ. ಸಂಘವನ್ನು ಬೆಳೆಸುವಲ್ಲಿ ಬಿ.ಎಸ್ ಕುಲಾರ್ ಪ್ರಯತ್ನವಿದೆ. ಇದೀಗ ಹೊಸ ಪರಿಲ್ಪಣೆಯೊಂದಿಗೆ ವಿವಿಧ ಕಡೆಗಳಲ್ಲಿ ಮಾರಾಟಕ್ಕೆ ಚಾಲನೆ ನೀಡಲಾಗಿದೆ. ಅಡುಗೆಗೆ ಯಾವುದೇ ಆಧುನಿಕ ಸಾಮಾಗ್ರಿಗಳು ಬಂದರೂ ಮಣ್ಣಿನ ಪಾತ್ರೆಯ ಅಡುಗೆ ರುಚಿ ವಿಶೇಷವಾಗಿದೆ. ವಿವಿಧ ರಾಜ್ಯಗಳಲ್ಲಿ ಮಾತ್ರವಲ್ಲದೇ ಅಮೇರಿಕಾದಲ್ಲಿಯೂ ಮಾಂಸಹಾರ ಅಡುಗೆ ಮಣ್ಣಿನ ಪಾತೆಯಲ್ಲಿ ಮಾಡುತ್ತಾರೆ. ಮಣ್ಣಿನ ಪಾತ್ರೆಗಳಿಗೆ ಸಾಕಷ್ಟು ಬೇಡಿಕೆಯಿದ್ದು ಆನ್ಲೈನ್ ವೆಬ್ಸೈಟ್ ಮಾಡಿ ಅದರ ಮುಖಾಂತರ ಜನರ ಆವಶ್ಯಕತೆಯನ್ನು ತಲುಪಿಸುವ ಕೆಲಸವಾಗಬೇಕು. ಕುಂಬಾರಿಕೆಯನ್ನು ಅಭಿವೃದ್ಧಿ ಪಡಿಸಬೇಕು. ಎಂದ ಅವರು ಕುಂಬಾರರ ಯಾವುದೇ ಕಾರ್ಯಕ್ರಮಗಳಿಗೂ ಬೇಡಿಕೆಗಳಿಗೂ ಸ್ಪಂದನೆ ನೀಡಲಾಗುವುದು. ಸಂಘಕ್ಕೆ ಸ್ವಂತ ನಿವೇಶನ ಆವಶ್ಯಕತೆಯಿದ್ದರೆ ಜಾಗ ತೋರಿಸಿ ಅದರ ಆರ್ಟಿಇ ನೀಡಿದರೆ ಮಂಜೂರುಗೊಳಿಸುವುದು, ಸಂಘಟನೆಗೆ ಅನುದಾನ ನೀಡಲಾಗುವುದು ಎಂದರು.
ಆ್ಯಪ್ ಬಿಡುಗಡೆ ಮಾಡಿದ ನಡುಬೊಟ್ಟು ಕ್ಷೇತ್ರದ ಧರ್ಮದರ್ಶಿ ಡಾ|ರವಿ ಎನ್ ನಡುಬೊಟ್ಟು ಮಾತನಾಡಿ, ತನ್ನ ಎಲ್ಲಾ ರೀತಿಯ ಬೆಳವಣಿಗೆಯಲ್ಲಿ ಕುಂಬಾರರ ಗುಡಿಕೈಗಾರಿಕಾ ಸಹಕಾರ ಸಂಘವು ಬಹಳಷ್ಟು ಸಹಕಾರ ನೀಡಿದ್ದು ಸಂಘವು ನನ್ನ ಕಣ್ಣಿಗೆ ಬೆಳಕು ನೀಡಿದೆ. ಸಂಘವು ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿದ್ದು ಇನ್ನಷ್ಟು ಬೆಳೆಯಲಿ, 100 ಶಾಖೆಗಳು ಪ್ರಾರಂಭವಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಭಾಸ್ಕರ ಎಂ. ಪೆರುವಾಯಿ ಮಾತನಾಡಿ, ನಮ್ಮ ಆಡಳಿತ ಮಂಡಳಿಗೆ ಅಧಿಕಾರ ದೊರೆತ ಸಮಯದಲ್ಲಿದ್ದ ರೂ.13 ಕೋಟಿಯಿಂದ ಠೇವಣಿ ಈಗ ರೂ.130 ಕೋಟಿಗೆ ಏರಿಕೆ ಮಾಡಲಾಗಿದೆ. ಶಾಖೆಗಳನ್ನು 6ರಿಂದ 16ಕ್ಕೆ ಏರಿಕೆ, ಸಿಬಂದಿಗಳನ್ನು 14ರಿಂದ 46ಕ್ಕೆ ಏರಿಕೆಯಾಗಿದೆ. 2400 ಇದ್ದ ಸದಸ್ಯರ ಸಂಖ್ಯೆ 4೦,೦೦೦ಕ್ಕೆ ಏರಿಕೆಯಾಗಿದೆ. ಸಂಘದ ಸಾಧನೆಯಿಂದಾಗಿ ದೆಹಲಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸುವ ಅವಕಾಶ ದೊರೆತಿದೆ. ಸಿಬಂದಿಗಳಿಗೆ ಉತ್ತಮ ವೇತನ, 60 ವರ್ಷ ಮೇಲ್ಪಟ್ಟ ಕುಂಬಾರ ಕುಶಲಕರ್ಮಿಗಳಿಗೆ ಮಾಸಾಶನ ನೀಡಲಾಗುತ್ತಿದೆ. ಈ ಆರ್ಥಿಕ ವರ್ಷದಲ್ಲಿ ಠೇವಣಿಯನ್ನು ರೂ.150ಕೋಟಿ ಹಾಗೂ ಮುಂದಿನ ವರ್ಷ 200ಕೋಟಿಗೆ ಏರಿಕೆ ಮಾಡುವ ಯೋಜನೆಯಿದೆ. ಇನ್ನೂ 10 ಶಾಖೆ ಮಾಡಿ 50 ಜನರಿಗೆ ಉದ್ಯೋಗ ನೀಡಲಾಗುವುದು. ದಾನ ಧರ್ಮ ನಿಧಿಯಿಂದ ಮಾಣಿ ಕುಲಾಲ ಸಂಘದ ಮನವಿಯಂತೆ ಕುಲಾಲ ಭವನ ನಿರ್ಮಾಣಕ್ಕೆ ರೂ.2ಲಕ್ಷ ದೇಣಿಗೆ ನೀಡಲಾಗುವುದು. ಸಂಘದ 17ನೇ ಶಾಖೆ ಕಲ್ಲಡ್ಕ 18ನೇ ಶಾಖೆ 19ನೇ ಶಾಖೆ ಪ್ರಾರಂಭಗೊಳ್ಳಲಿದೆ. ಸಮಾಜ ಬಾಂಧವರು ಉತ್ತಮ ರೀತಿಯಿಂದ ವ್ಯವಹರಿಸಿದಾಗ ಸಂಘದ ಉನ್ನತಿ ಸಾಧ್ಯವಿದೆ ಎಂದರು.
ಆ್ಯಪ್ ಬಿಡುಗಡೆ:
ಸಹಕಾರಿ ಸಂಘದ ಬ್ಯಾಂಕಿಂಗ್ ವ್ಯವಹಾರದ ಮಾಹಿತಿಯನ್ನು ನೀಡುವ ನೂತನ ಆ್ಯಪ್ ಶ್ರೀ ಕ್ಷೇತ್ರ ನಡುಬೊಟ್ಟು ಇದರ ಧರ್ಮದರ್ಶಿ ಡಾ.ರವಿ ಎನ್ ನಡುಬೊಟ್ಟು ಬಿಡುಗಡೆ ಮಾಡಿದರು.
ಸನ್ಮಾನ
ನಿವೃತ್ತ ಯೋಧ ಮೋಹನ್ ಜಿ ಮೂಲ್ಯ, ಕುಂಬಾರಿಕಾ ಉದ್ಯಮ ನಡೆಸುತ್ತಿರುವ ರಂಜನ್ ಬಿ.ಕುಲಾಲ್, ಸಹಕಾರಿ ಸಂಘದ ಮಾಜಿ ಅಧ್ಯಕ್ಷರು, ಹಾಲಿ ನಿರ್ದೇಶಕ ಬಿ.ಎಸ್ ಕುಲಾಲ್ರವರನ್ನು ಸನ್ಮಾನಿಸಲಾಯಿತು.
ಮಾಣಿ ಸಂಘಕ್ಕೆ ದೇಣಿಗೆ:
ಮಾಣಿ ಕುಲಾಲ ಸಂಘದಿಂದ ನಿರ್ಮಾಣವಾಗಿರುವ ಕುಲಾಲ ಭವನಕ್ಕೆ ಸಹಕಾರ ಸಂಘದಿಂದ ಪ್ರಾರಂಭಿಕ ಹಂತವಾಗಿ ರೂ.1ಲಕ್ಷದ ಚೆಕ್ನ್ನು ಸಂಘದ ಪದಾಧಿಕಾರಿಗಳಿಗೆ ಮಹಾಸಭೆಯಲ್ಲಿ ಹಸ್ತಾಂತರಿಸಲಾಯಿತು.
ಸಂಘದ ನಿರ್ದೇಶಕರಾದ ಬಿ.ಎಸ್ ಕುಲಾಲ್, ಗಣೇಶ್ ಪಿ., ಪದ್ಮಕುಮಾರ್ ಎಚ್., ಪೂವಪ್ಪ ಕಡಂಬಾರು, ಸೇಸಪ್ಪ ಕುಲಾಲ್, ಪ್ರಶಾಂತ್ ಬಂಜನ್, ನಾಗೇಶ್ ಕುಲಾಲ್, ರೇಖಾ ದಿನೇಶ್ ಹಾಗೂ ರಂಜಿತ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮಹಾಸಭೆಯಲ್ಲಿ ಸಹಕಾರಿ ಸಂಘದ 2024-25ನೇ ಸಾಲಿನ ವರದಿ, ಆಯ-ವ್ಯಯ, ಉಪನಿಬಂಧನೆ ತಿದ್ದುಪಡಿ, ಆಡಿಟ್ ವರದಿ, ಸಂಘದ ಮುಂದಿನ ಕಾರ್ಯಚಟುವಟಿಕೆಗಳನ್ನು ಮಂಡಿಸಿ ಮಹಾಸಭೆಯ ಅನುಮೋದನೆ ಪಡೆಯಲಾಯಿತು.
ಸಂಘದ ಉಪಾಧ್ಯಕ್ಷ ದಾಮೋದರ ಕುಲಾಲ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಜನಾರ್ದನ ಮೂಲ್ಯ ವಂದಿಸಿದರು. ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು. ಸಿಬಂದಿಳಾದ ಭವ್ಯ, ದಿಶಾ, ಯಶಸ್ಚಿನಿ ಪ್ರಾರ್ಥಿಸಿದರು. ರಮೇಶ್ ಕುಂಬಾರಿಕೆಯ ಪ್ರಾತ್ಯಕ್ಷಿಕೆ ನೀಡಿದರು. ಮಹಾಸಭೆಯಲ್ಲಿ ಅಗಲಿದ ಸದಸ್ಯರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನೆರವೇರಿತು. ಸಂಘದ ಸಾವಿರಾರು ಮಂದಿ ಸದಸ್ಯರು ಮಹಾಸಭೆಯಲ್ಲಿ ಭಾಗವಹಿಸಿದ್ದರು.
ಕುಂಬಶ್ರೀ ಮಾಂಗಲ್ಯ ನಿಧಿ ಠೇವಣಿ ಪ್ರಾರಂಭ
ಸಹಕಾರ ಸಂಘದ ವತಿಯಿಂದ ಸಮಾಜದ ಯುವತಿಯರಿಗಾಗಿ ಕುಂಬಶ್ರೀ ಮಾಂಗಲ್ಯ ನಿಧಿ ಠೇವಣಿ ಪ್ರಾರಂಭಿಸಲಾಗುವುದು. ಇದರಲ್ಲಿ ಸಮಾಜದ 15 ವರ್ಷದ ಕೆಳಗಿನ ಹುಡುಗಿಯರಿಗೆ ಖಾತೆ ಮಾಡಿ ಪ್ರತಿ ತಿಂಗಳು ಠೇವಣಿ ಮಾಡಬೇಕಾಗುತ್ತದೆ. ಸಂಘದಕ್ಕೆ ಹೂಡುವ ಠೇವಣಿಗೆ ಶೇ.10 ಬಡ್ಡಿ ನೀಡಲಾಗುವುದು. ಠೇವಣಿದಾರರಿಗೆ 21 ವರ್ಷದ ಪೂರೈಸಿದ ನಂತರ ಠೇವಣಿಯನ್ನು ಹಿಂಪಡೆದುಕೊಳ್ಳುವ ಯೋಜನೆಯಾಗಿದ್ದು ಹೆಚ್ಚಿನ ಮಾಹಿತಿಗಳನ್ನು ಆಯಾ ಶಾಖೆ ವ್ಯವಸ್ಥಾಪಕರಿಂದ ಮಾಹಿತಿ ಪಡೆದುಕೊಳ್ಳಬಹುದು.
-ಭಾಸ್ಕರ ಎಂ.ಪೆರುವಾಯಿ ಅಧ್ಯಕ್ಷರು
ಮಹಾಸಭೆಯಲ್ಲಿ ದೊಡ್ಡ ಮಟ್ಟದಲ್ಲಿ ಸಮಾಜ ಬಾಂಧವರು ಸೇರಿದ್ದು ದ. ಕ ಜಿಲ್ಲೆಯಲ್ಲಿ ಕುಂಬಾರರು ಯಾವುದೇ ನಿರ್ಧಾರ ಕೈಗೊಂಡರೂ ಅದನ್ನು ಮಾಡಬಹುದು ಎಂಬ ಸಂದೇಶ ಸಮಾಜಕ್ಕೆ ನೀಡಿದ್ದಾರೆ. ರಾಜಕೀಯ ಪಕ್ಷಗಳಿಗೂ ಎಚ್ಚರಿಕೆ ನೀಡುವ ಕೆಲಸವಾಗಿದೆ. ಅಂತಹ ದೊಡ್ಡ ಶಕ್ತಿ ಪುತ್ತೂರಿನಲ್ಲಿದೆ ಎಂದು ಮಹಾಸಭೆಯ ಮೂಲಕ ತೋರಿಸಿದ್ದಾರೆ.
-ಅಶೋಕ್ ಕುಮಾರ್ ರೈ ಶಾಸಕರು, ಪುತ್ತೂರು