ನೆಲ್ಯಾಡಿ: 43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ನೆಲ್ಯಾಡಿ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ-ಕೌಕ್ರಾಡಿ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೆಲ್ಯಾಡಿ-ಕೌಕ್ರಾಡಿ ಇದರ ವತಿಯಿಂದ 43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ.27ರಂದು ನೆಲ್ಯಾಡಿ-ಕೌಕ್ರಾಡಿ ಶ್ರೀ ಶಬರೀಶ ಕಲಾಮಂದಿರದಲ್ಲಿ ನಡೆಯಿತು.


ಬೆಳಿಗ್ಗೆ ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ ನೂಜಿನ್ನಾಯ ಅವರ ಪೌರೋಹಿತ್ಯದಲ್ಲಿ ಗಣಪತಿ ದೇವರ ಪ್ರತಿಷ್ಠೆ ನಡೆಯಿತು. ಬಳಿಕ ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ, ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ 8.15ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ಸೀಯಾಳಾಭಿಷೇಕ ನಡೆಯಿತು. ಬಳಿಕ ಗಣಹೋಮ ನಡೆಯಿತು. ಶ್ರೀ ಶಬರೀಶ ಕಲಾಮಂದಿರದಲ್ಲಿ ಛದ್ಮವೇಷ ಸ್ಪರ್ಧೆ, ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಿತು. ಸುರೇಶ್ ಪಡಿಪಂಡ ಸ್ಪರ್ಧಾ ಕಾರ್ಯಕ್ರಮ ನಿರೂಪಿಸಿದರು.

ಧರ್ಮಜಾಗೃತಿ ಸಭೆ:
ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಧಾರ್ಮಿಕ ಉಪನ್ಯಾಸ ನೀಡಿ, ಫಲಾಪೇಕ್ಷೆ ಇಲ್ಲದೆ ಮಾಡುವ ಸೇವೆಗೆ ಅಪೇಕ್ಷೆ ಮಾಡದೇ ಇದ್ದರೂ ಬಯಸಿದ್ದು ಸಿಗುತ್ತದೆ. ನಾವು ಮೃಗತ್ವದಿಂದ ದೈವತ್ವದೆಡೆಗೆ ಸಾಗಬೇಕು. ಪರೋಪಕಾರವೇ ಸೇವೆ. ಈ ಸೇವೆಯಲ್ಲಿ ದೇವರನ್ನು ಕಾಣುವ ಉದತ್ತವಾದ ಮನಸ್ಥಿತಿ ಇರಬೇಕು. ಆತ್ಮವೇ ದೇವರು ಎಂದು ನಂಬಿದಾಗ ನಮ್ಮಲ್ಲಿ ಧರ್ಮಜಾಗೃತಿಯಾಗುತ್ತದೆ. ಅರಚಾಟ, ಕಿರಚಾಟಕ್ಕೆ ದೇವರ ಅನುಗ್ರಹ ಸಿಗುವುದಿಲ್ಲ. ಭಕ್ತಿಗೆ ದೇವರ ಅನುಗ್ರಹವಿದೆ ಎಂದರು. ಸೇವಾ ಭಾರತಿ ಮಂಗಳೂರು ಮಹಾ ಇದರ ಚೀಪ್ ಎಕ್ಸಿಕ್ಯೂಟಿವ್ ಆಫೀಸರ್ ಪೃಥ್ವಿಪಾಲ್ ಕೆ. ಉದ್ಘಾಟಿಸಿ ಮಾತನಾಡಿ, ಹಿಂದೂ ಧರ್ಮ ಜಗತ್ತಿಗೆ ದಾರಿ ತೋರಿಸಿದ ಧರ್ಮ. ನಾವು ಜಾಗೃತ, ಸ್ವಾಭಿಮಾನಿ ಹಿಂದೂಗಳು ಆಗಬೇಕೆಂದು ಹೇಳಿದರು. ನೆಲ್ಯಾಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಶುಭಹಾರೈಸಿದರು.


ಗಣಪತಿ ದೇವರಿಗೆ ರಥ ನಿರ್ಮಾಣಕ್ಕೆ ಸಹಕಾರ ನೀಡಿದ ಕಳೆದ ವರ್ಷದ ಗಣೇಶೋತ್ಸವ ಸಮಿತಿ ಅಧ್ಯಕ್ಷ ರವಿಚಂದ್ರ ಅತ್ರಿಜಾಲು, ಕಾರ್ಯದರ್ಶಿ ರಕ್ಷಿತ್ ಅವರನ್ನು ಗೌರವಿಸಲಾಯಿತು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಮೋಹನ ಗೌಡ ಕಟ್ಟೆಮಜಲು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ನಗದು ಮೇಲ್ವಿಚಾರಕ ಗಿರೀಶ್, ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಗೋಳಿತ್ತೊಟ್ಟು, ಕೋಶಾಧಿಕಾರಿ ರಾಕೇಶ್ ಎಸ್.ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಡಾ.ಸದಾನಂದ ಕುಂದರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಅಣ್ಣಿ ಏಳ್ತಿಮಾರ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಸಂದೇಶ್ ಶೆಟ್ಟಿ ಆಮುಂಜ ವಂದಿಸಿದರು. ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಕಾರ್ಯದರ್ಶಿ ಸುಧೀರ್‌ಕುಮಾರ್ ಕೆ.ಎಸ್.ನಿರೂಪಿಸಿದರು. ಮಧ್ಯಾಹ್ನ ಶ್ರೀ ಗಣಪತಿ ದೇವರಿಗೆ ಮಹಾರಂಗಪೂಜೆ ಮತ್ತು ಮಹಾಪೂಜೆ ನಡೆಯಿತು. ಬಳಿಕ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸುರೇಖಾ ಮತ್ತು ಶಿಷ್ಯ ವೃಂದದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

ಭವ್ಯ ಶೋಭಾಯಾತ್ರೆ
ಸಂಜೆ ಶ್ರೀ ಮಹಾಗಣಪತಿ ದೇವರ ಶೋಭಾಯಾತ್ರೆಯು ವಿವಿಧ ಭಜನಾತಂಡ, ಸ್ತಬ್ಧ ಚಿತ್ರಗಳೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ನೆಲ್ಯಾಡಿ ಪೇಟೆ ಮೂಲಕ ಸಾಗಿತು. ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here