ನೆಲ್ಯಾಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮುದ್ಯ-ಬಜತ್ತೂರು ಇದರ ವತಿಯಿಂದ ಮುದ್ಯ ಶ್ರೀ ಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಕೃಷ್ಣಪ್ರಸಾದ್ ಉಡುಪ ಇವರ ನೇತೃತ್ವದಲ್ಲಿ 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ.27ರಂದು ಬಜತ್ತೂರು ಮುದ್ಯ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.

ಗೌರಿ ಗಣೇಶ ಹಬ್ಬದ ಪ್ರಯುಕ್ತ ಆ.26ರಂದು ಸಂಜೆ ಏಕಾದಶ ರುದ್ರಾಭಿಷೇಕ ನಡೆಯಿತು. ಆ.27ರಂದು ಬೆಳಿಗ್ಗೆ ಪಡ್ಪು ಗ್ರಾಮ ದೈವಸ್ಥಾನದ ವ್ಯವಸ್ಥಾಪಕರಾದ ದಾಮೋದರ ಗೌಡ ಶೇಡಿಗುತ್ತು ಅವರು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಬೆಳಿಗ್ಗೆ ವಿದ್ಯಾಗಣಪತಿ ಪ್ರತಿಷ್ಠೆ, 12 ತೆಂಗಿನಕಾಯಿ ಗಣಹವನ, ಶ್ರೀ ಪಂಚಲಿಂಗೇಶ್ವರ ದೇವರಿಗೆ ನಿತ್ಯಪೂಜೆ ನಡೆಯಿತು. ಬಳಿಕ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ನಡ್ಪ-ಕಾಂಚನ ಇವರಿಂದ ಭಜನೆ, ಊರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ದೇವರಿಗೆ ಮಹಾಪೂಜೆ ನಡೆಯಿತು.
ಧಾರ್ಮಿಕ ಸಭೆ:
ಧಾರ್ಮಿಕ ಉಪನ್ಯಾಸ ನೀಡಿದ ಶ್ರೀ ಕ್ಷೇ.ಧ.ಗ್ರಾ.ಯೋಜನೆ ನಿವೃತ್ತ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಶಿಶಿಲ ಅವರು ಮಾತನಾಡಿ, ದೇವಸ್ಥಾನಗಳಲ್ಲಿ ಮೂರು ವರ್ಷಕ್ಕೊಮ್ಮೆ ರಾಜಕೀಯ ಪಕ್ಷಗಳ ನೆಲೆಯಲ್ಲಿ ಆಡಳಿತ ನಡೆಯುವುದು ದೊಡ್ಡ ಮಾರಕವಾಗಿ ಪರಿಣಮಿಸುತ್ತಿದೆ. ಧಾರ್ಮಿಕ ನಂಬಿಕೆ ರಾಜಕೀಯ ಹೊರತಾಗಿರಬೇಕೆಂದು ಹೇಳಿದರು. ಉತ್ಸವ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ ನೀರಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಮುದ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸ್ಥಾಪಕ ಸಂಚಾಲಕ ರಾಧಾಕೃಷ್ಣ ಕೆ.ಎಸ್.ಕುವೆಚ್ಚಾರು, ಉಪ್ಪಿನಂಗಡಿ ಸಿಎ ಬ್ಯಾಂಕ್ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪರಾಜ ಶೆಟ್ಟಿ, ಬಜತ್ತೂರು ಶಿಕ್ಷಣ ಸಮನ್ವಯ ಟ್ರಸ್ಟ್ ಅಧ್ಯಕ್ಷ ಉದಯ ರಾವ್ ಮಣಿಕ್ಕಳ, ಬಜತ್ತೂರು ಗ್ರಾ.ಪಂ.ಸದಸ್ಯ ಗಂಗಾಧರ ಕೆ.ಎಸ್.ಮೇಲೂರು, ಮುದ್ಯ ಶಿವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಅಂಬಟೆಮಾರು, ದೈವದ ನರ್ತಕ ಸುಬ್ಬಣ್ಣ ನಲಿಕೆ ಕಾಂಚನ, ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಉಪ್ಪಿನಂಗಡಿ ವಲಯ ಪ್ರತಿನಿಧಿ ಸದಾನಂದ ಶಿಬಾರ್ಲ, ಬೆದ್ರೋಡಿ ಜನಸ್ಪಂದನಾ ಸಮಿತಿ ಸದಸ್ಯ ಕುಶಾಲಪ್ಪ ಗೌಡ ಸುಳ್ಯ, ಮುದ್ಯ ಧನುಪೂಜಾ ಸಮಿತಿ ಕಾರ್ಯದರ್ಶಿ ಸುರೇಶ್ ಪೂಜಾರಿ ಶಿಬಾರ್ಲ, ಮುದ್ಯ ಸಾರ್ವಜನಿಕ ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷ ಸುನೀತಾ ಸೋಮಸುಂದರ ಕೊಡಿಪಾನ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಶೇಖರ ಪೂಜಾರಿ ಶಿಬಾರ್ಲ, ಹರೀಶ್ ಪೆಲತ್ರೋಡಿ, ಲಿಂಗಪ್ಪ ಗೌಡ ಗುಡ್ಡೆತ್ತಡ್ಕ ಹಾಗೂ ಪತ್ರಕರ್ತ ಹರೀಶ್ ಬಾರಿಂಜ ಅವರನ್ನು ಗಣೇಶೋತ್ಸವ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಜಗದೀಶ್ ಬಾರಿಕೆ ಸನ್ಮಾನಿತರನ್ನು ಪರಿಚಯಿಸಿದರು. 2024-25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ಬಜತ್ತೂರು ಗ್ರಾಮದ ವಿದ್ಯಾರ್ಥಿಗಳಿಗೆ ಸ್ಮರಣಿಕೆ, ಶಾಲು ಹಾಕಿ ಗೌರವಿಸಲಾಯಿತು. ರವಿ ಎಂಜಿರಡ್ಕ ವಿದ್ಯಾರ್ಥಿಗಳ ಹೆಸರು ವಾಚಿಸಿದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಧನಂಜಯ ಬಾರಿಕೆ ವರದಿ ವಾಚಿಸಿದರು. ಅಧ್ಯಕ್ಷ ಗೋಪಾಲ ವಳಾಲುದಡ್ಡು ಸ್ವಾಗತಿಸಿ, ಸೋಮಸುಂದರ ಕೊಡಿಪಾನ ವಂದಿಸಿದರು. ಗಣೇಶ್ ಕುಲಾಲ್ ವಳಾಲು ನಿರೂಪಿಸಿದರು. ಕೀರ್ತನಾ ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಕೀರ್ತನಾ ಕಲಾತಂಡ ಮುಂಡಾಜೆ ಇವರಿಂದ ಭಕ್ತಿಗಾನ ಯಕ್ಷ ನೃತ್ಯ ನಡೆಯಿತು.
ಶೋಭಾಯಾತ್ರೆ;
ಸಂಜೆ ಶ್ರೀ ಗಣಪತಿ ದೇವರ ಶೋಭಾಯಾತ್ರೆ ನಡೆಯಿತು. ಶೋಭಾಯಾತ್ರೆಯು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಹೊರಟು ಪಡ್ಪು ದೈವಸ್ಥಾನದ ಮುಂಭಾಗದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ನೀರಕಟ್ಟೆ ತನಕ ತೆರೆಳಿ ಅಲ್ಲಿಂದ ಹಿಂತಿರುಗಿ ವಳಾಲು, ಮುಗೇರಡ್ಕ ಕ್ರಾಸ್ ಮೂಲಕ ತೆರಳಿ ಬೆದ್ರೋಡಿ ನರ್ಸರಿ ಬಳಿಯ ನೇತ್ರಾವತಿ ನದಿಯಲ್ಲಿ ದೇವರ ಮೂರ್ತಿ ವಿಸರ್ಜನೆ ಮಾಡಲಾಯಿತು. ಶೋಭಾಯಾತ್ರೆಯಲ್ಲಿ ವಿವಿಧ ಭಜನಾ ತಂಡಗಳಿಂದ ಭಜನೆ, ಗೊಂಬೆ ಕುಣಿತ ವಿಶೇಷ ಆಕರ್ಷಣೆಯಾಗಿತ್ತು. ಜಲಸ್ತಂಭನ ಸ್ಥಳದಲ್ಲಿ ಶ್ರೀ ಸಿದ್ಧಿವಿನಾಯಕ ಭಜನಾ ತಂಡ ಬೆದ್ರೋಡಿ ಇವರಿಂದ ಭಜನೆ ನಡೆಯಿತು. ಕಟ್ಟೆಪೂಜೆ ಬಳಿಕ ದೇವರ ಮೂರ್ತಿ ವಿಸರ್ಜನೆ ಮಾಡಲಾಯಿತು. ಜಲಸ್ತಂಭನ ಜಾಗದಲ್ಲಿ ಬೆದ್ರೋಡಿ ವಿದ್ಯಾನಗರ ಜನಸ್ಪಂದನ ಸಮಿತಿ ವತಿಯಿಂದ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಹಕರಿಸಿದರು.