ಉಪ್ಪಿನಂಗಡಿ: ಪ್ರಾಮಾಣಿಕತೆ, ಉತ್ತಮ ಕಾರ್ಯದಕ್ಷತೆಯಿಂದ ಗ್ರಾಹಕ ಸ್ನೇಹಿಯಾಗಿ ಸಂಘದಲ್ಲಿ ಸುಧೀರ್ಘವಾದ ಸೇವೆ ಸಲ್ಲಿಸಿ ಸಂಘದ ಏಳಿಗೆಗಾಗಿ ತನ್ನದೇ ಆದ ಕೊಡುಗೆ ನೀಡಿ ಈಗ ನಮ್ಮನ್ನಗಲಿರುವ ದಿ. ಧರ್ಮಣ ನಾಯ್ಕರ ಅಗಲುವಿಕೆಯು ಸಂಸ್ಥೆಗೆ ತುಂಬಲಾರದ ನಷ್ಟ ಎಂದು ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ಸುನೀಲ್ ಕುಮಾರ್ ದಡ್ಡು ಹೇಳಿದರು.
ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದಲ್ಲಿ ಸುಧೀರ್ಘ 41 ವರ್ಷಗಳಿಂದ ಮಾರಾಟ ಗುಮಾಸ್ತರಾಗಿ ಕರ್ತವ್ಯ ನಿರ್ವಹಿಸಿ ಇತ್ತೀಚೆಗೆ ನಿಧನರಾದ ದಿ. ಧರ್ಮಣ ನಾಯ್ಕ ಪಿ. ಅವರಿಗೆ ಸಂಘದ ಕೇಂದ್ರ ಕಚೇರಿಯ ಸಂಗಮ ಕೃಪಾ ಸಭಾ ಭವನದಲ್ಲಿ ಸಂಘದ ವತಿಯಿಂದ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿದರು.

ಸಂಘದ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ತಾಳ್ತಾಜೆಯವರು ಮಾತನಾಡಿ, ಸಂಘದ ರಸಗೊಬ್ಬರ ವ್ಯವಹಾರದ ಉನ್ನತಿಗೆ ಸಿಬ್ಬಂದಿಯ ಮಟ್ಟದಲ್ಲಿ ಧರ್ಮಣರವರ ಕೊಡುಗೆ ಅಪಾರವಿದೆ. ಕಾಲಕಾಲಕ್ಕೆ ತಕ್ಕಂತೆ ರಸಗೊಬ್ಬರದ ಬೇಡಿಕೆಗಳು, ಮಾರುಕಟ್ಟೆ, ಮಾರಾಟ ದರ ಹಾಗೂ ಗ್ರಾಹಕ ಸ್ನೇಹಿಯಾಗಿ ಪೈಪೋಟಿಯ ದರವನ್ನು ತಿಳಿದುಕೊಂಡು ಆಡಳಿತ ಮಂಡಳಿಗೆ ಮಾಹಿತಿಯನ್ನು ಒದಗಿಸುತ್ತಿದ್ದರು. ಸಂಸ್ಥೆಗೆ ಇವರ ಶ್ರಮವು ವ್ಯವಹಾರ ಅಧ್ಯಯನ ಶಾಸ್ತ್ರದಲ್ಲಿ ಪದವಿ ಪಡೆದುಕೊಂಡವರಿಗೆ ಸಮವಾಗಿದೆ ಎಂದರು.
ಸಂಘದ ಮಾಜಿ ಅಧ್ಯಕ್ಷರಾದ ಪೆಲಪ್ಪಾರು ವೆಂಕಟ್ರಮಣ ಭಟ್ ಮಾತನಾಡಿ, ಧರ್ಮಣ ನಾಯ್ಕರ ಸೇವೆ ನಮ್ಮ ಸಹಕಾರಿ ಸಂಘಕ್ಕೆ ಅನನ್ಯವಾಗಿತ್ತು. ಅವರ ನಗುಮುಖದ ಸೇವೆಯು ಗ್ರಾಹಕರನ್ನು ಆಕರ್ಷಿಸುತ್ತಿತ್ತು ಎಂದರು. ಸಂಘದ ಮಾಜಿ ಅಧ್ಯಕ್ಷ ಕೆ.ವಿ. ಪ್ರಸಾದ ಮಾತನಾಡಿ, ಮಾರಾಟ ವಿಭಾಗದಲ್ಲಿದ್ದ ಧರ್ಮಣ ನಾಯ್ಕರು ಕೇವಲ ಸಂಘದ ಕಾರ್ಯವ್ಯಾಪ್ತಿಯ 5 ಗ್ರಾಮದ ರೈತರ ಸಂಪರ್ಕ ಮಾತ್ರವಲ್ಲದೆ, ಪುತ್ತೂರು, ಬೆಳ್ತಂಗಡಿ, ಕಡಬ, ಬಂಟ್ವಾಳ ತಾಲೂಕುಗಳ ರೈತರ ಸಂಪರ್ಕವನ್ನೂ ಹೊಂದಿದ್ದರು. ವ್ಯವಹಾರದ ಪ್ರಗತಿಗೆ ಈ ಸಂಪರ್ಕ ಪೂರಕವಾಗಿತ್ತು ಎಂದರು.
ಸಂಘದ ಮಾಜಿ ನಿರ್ದೇಶಕ ಅಜೀಝ್ ಬಸ್ತಿಕ್ಕಾರ್ ಮಾತನಾಡಿ, ಕಳೆದ 25 ವರ್ಷಗಳಿಂದ ಧರ್ಮಣ ನಾಯ್ಕರನ್ನು ನಿತ್ಯ ಕಾಣುತ್ತಿದ್ದ ನನಗೆ ಅವರಲ್ಲಿ ಸರಳತೆ ಹಾಗೂ ಸೌಮ್ಯ ಸ್ವಭಾವ ಎದ್ದು ಕಾಣುತ್ತಿತ್ತು ಎಂದರು. ಸಂಘದ ನಿವೃತ್ತ ಸಿಬ್ಬಂದಿ ವಿಶ್ವನಾಥ ಗೌಡ ಪಿಜಕ್ಕಳ ಮಾತನಾಡಿ, ಧರ್ಮಣ ನಾಯ್ಕರು ತನ್ನ ಕರ್ತವ್ಯವನ್ನು ಪರಿಪಕ್ವತೆ ಹಾಗೂ ನಿಷ್ಠೆಯಿಂದ ಮಾಡುತ್ತಿದ್ದರು. ಕಚೇರಿ ಸಮಯಕ್ಕಿಂತ ಮುಂಚಿತವಾಗಿ ತಮ್ಮ ಉಪಸ್ಥಿತಿ ತೋರಿಸುತ್ತ ಹಾಗೂ ಕಚೇರಿ ಸಮಯದ ಬಳಿಕವೂ ಸಂಸ್ಥೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾ, ಸಂಘವನ್ನು ತನ್ನದು ಅನ್ನುವ ಉದಾತ್ತಭಾವದೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ದಯಾನಂದ ಸರೋಳಿ, ನಿರ್ದೇಶಕರಾದ ರಾಜೇಶ್, ವಸಂತ ಪಿ., ಶ್ರೀರಾಮ, ಸುಬ್ರಹ್ಮಣ್ಯ ಕುಮಾರ್ ಅಗರ್ತ, ಉಷಾ ಮುಳಿಯ, ಸಂಧ್ಯಾ, ಗೀತಾ, ರಾಘವ ನಾಯ್ಕ ಮತ್ತು ಸುಂದರ ಕೆ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಕೆ., ಮಾಜಿ ನಿರ್ದೇಶಕ ಜಗದೀಶ ರಾವ್ ಎಂ., ಬಜತ್ತೂರು ಗ್ರಾ.ಪಂ. ಅಧ್ಯಕ್ಷ ಗಂಗಾಧರ ಪಿ.ಎನ್., ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಸುರೇಶ್ ಅತ್ರೆಮಜಲು, ಸಂಘದ ಸದಸ್ಯರಾದ ಹರಿರಾಮಚಂದ್ರ, ಪ್ರಸಾದ್ ಬಂಡಾರಿ, ಧರ್ಮಣ ನಾಯ್ಕರ ತಂದೆ, ಪತ್ನಿ ಹಾಗೂ ಪುತ್ರ ಮತ್ತು ಸಂಘದ ಸಿಬ್ಬಂದಿ ಉಪಸ್ಥಿತರಿದ್ದರು.
ಸಂಘದ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪರಾಜ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.