ಜಮೀನು ಪರಭಾರೆಗೆ ಎನ್‌ಒಸಿಗಾಗಿ ಲಂಚ ಸ್ವೀಕಾರ: ಆರೋಪಿಗೆ ನ್ಯಾಯಾಂಗ ಬಂಧನ-ಇನ್ನೂ ಪತ್ತೆಯಾಗದ ತಹಸಿಲ್ದಾರ್

0

ಪುತ್ತೂರು:ಅಕ್ರಮ ಸಕ್ರಮದಡಿ ಮಂಜೂರಾಗಿರುವ ಜಮೀನು ಪರಭಾರೆ ಮಾಡಲು ನಿರಾಕ್ಷೇಪಣಾ ಪತ್ರ ನೀಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ತಹಸಿಲ್ದಾರ್ ಕಚೇರಿಯ ಭೂಸುಧಾರಣಾ ಶಾಖೆಯ ಕೇಸ್ ವರ್ಕರ್ ಸುನಿಲ್‌ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.


ಈಶ್ವರಮಂಗಲದ ಅಜಿತ್ ಎಂಬವರ ಚಿಕ್ಕಪ್ಪನಿಗೆ ನೆಟ್ಟಣಿಗೆ ಮುಡ್ನೂರು ಗ್ರಾಮದಲ್ಲಿ 65 ಸೆಂಟ್ಸ್ ಜಮೀನು ಅಕ್ರಮ ಸಕ್ರಮದನ್ವಯ ದರ್ಖಾಸ್ತು ಮಂಜೂರಾಗಿತ್ತು.ಅವರು ಸದರಿ ಜಮೀನನ್ನು ಪರಭಾರೆ ಮಾಡಲೆಂದು ನಿರಾಕ್ಷೇಪಣಾ ಪತ್ರ ಕೋರಿ 2024ರ ಡಿಸೆಂಬರ್‌ನಲ್ಲಿ ಪುತ್ತೂರು ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿದ್ದರು.ಆದರೆ ಅರ್ಜಿ ವಿಲೇವಾರಿಯಾಗದೆ ಬಾಕಿಯಾಗಿತ್ತು.ಸದ್ರಿ ಅರ್ಜಿಯ ಬಗ್ಗೆ ವಿಚಾರಿಸಲೆಂದು ಅಜಿತ್ ಅವರು,ಪುತ್ತೂರು ತಹಶೀಲ್ದಾರ್ ಕಛೇರಿಯ ಭೂ ಸುಧಾರಣಾ ಶಾಖೆಯ ಕೇಸ್ ವರ್ಕರ್ ಸುನೀಲ್ ಅವರಲಿ ವಿಚಾರಿಸಿದ ವೇಳೆ, ತಹಶೀಲ್ದಾರ್‌ರವರ ಸಹಿಗೆ ಬಾಕಿ ಇರುತ್ತದೆ. ಅದಕ್ಕೆ ಸ್ವಲ್ಪ ಹಣ ಖರ್ಚು ಇದ್ದು ತಹಶೀಲ್ದಾರರಿಗೆ ರೂ.10,೦೦೦ ಕೊಡಬೇಕಾಗುತ್ತದೆ ಮತ್ತು ನನಗೂ ಹಣ ಕೊಡಬೇಕಾಗುತ್ತದೆ ಎಂದು ಹೇಳಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದೆ.
ಈ ಕುರಿತು ಅಜಿತ್ ಅವರು ನೀಡಿದ್ದ ದೂರಿನ ಮೇರೆಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕೇಸ್ ವರ್ಕರ್ ಸುನೀಲ್ ಮತ್ತು ತಹಶೀಲ್ದಾರ್ ವಿರುದ್ಧ ಪ್ರಕರಣ ದಾಖಲಾಗಿತ್ತು.ಆ.28ರಂದು ಭೂಸುಧಾರಣಾ ಶಾಖೆಯ ಕೇಸ್ ವರ್ಕರ್ ಸುನೀಲ್ ಅವರು ಅಜಿತ್ ಅವರಿಂದ ರೂ.12 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು.ಆರೋಪಿಯನ್ನು ಬಂಽಸಿ ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.


ಇನ್ನೂ ಪತ್ತೆಯಾಗದ ತಹಶೀಲ್ದಾರ್: ಈ ಪ್ರಕರಣದಲ್ಲಿ ಪುತ್ತೂರು ತಹಶೀಲ್ದಾರರ ವಿರುದ್ಧವೂ ಪ್ರಕರಣ ದಾಖಲಾಗಿದ್ದು ಅವರ ಪಾತ್ರದ ಕುರಿತೂ ತನಿಖೆ ನಡೆಸಲಾಗುತ್ತಿದೆ.ಆದರೆ ತಹಶೀಲ್ದಾರ್ ಸದ್ಯ ತಲೆಮರೆಸಿಕೊಂಡಿರುತ್ತಾರೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here