ರೋಗಿಗಳ ಮನಸ್ಸಿಗೆ ನೋವಾಗುವ ಯಾವ ಸಂಗತಿಯೂ ಆಸ್ಪತ್ರೆಗಳಲ್ಲಿ ನಡೆಯಬಾರದು: ಅಶೋಕ್ ರೈ
ಪುತ್ತೂರು: ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಅವರ ಕುಟುಂಬಸ್ಥರು ಅತ್ಯಂತ ನೋವಿನಿಂದ ಇರುತ್ತಾರೆ, ಅನಾರೋಗ್ಯದ ಕಾರಣಕ್ಕೆ ಟೆನ್ಸ್ಯನ್ ಮಾಡಿಕೊಂಡು ಆಸ್ಪತ್ರೆಗೆ ಬರುತ್ತಾರೆ. ಹೀಗೆ ಬರುವ ಕೆಲವರು ಇಲ್ಲಿನ ಸಿಬಂದಿಗಳ ಜೊತೆ ದರ್ಪದಿಂದ ವರ್ತಿಸಬಹುದು ಆಗ ಇಲ್ಲಿನ ಸಿಬಂದಿಗಳೂ ಅದೇ ರೀತಿ ವರ್ತಿಸಬಹುದು ಈ ರೀತಿಯ ಘಟನೆಗಳು ಎಂದಿಗೂ ನಡೆಯಬಾರದು, ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ಮತ್ತು ಇಲ್ಲಿ ಇರುವವರು ತಾಳ್ಮೆಯಿಂದ ವರ್ತಿಸುವಂತಾಗಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ತಾಲೂಕು ಆರೋಗ್ಯ ಇಲಾಖೆ ಕೇಂದ್ರದ ಸಭಾಂಗಣದಲ್ಲಿ ಆ.30ರಂದು ನಡೆದ ಸರಕಾರಿ ಆಸ್ಪತ್ರೆಯ ಆರೋಗ್ಯ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಪುತ್ತೂರು ಸರಕಾರಿ ಆಸ್ಪತ್ರೆ ಖಾಸಗಿ ಆಸ್ಪತ್ರೆಗೆ ಸಮಾನವಾಗಿಯೇ ಇದೆ, ಇಲ್ಲಿನ ವೈದ್ಯರು ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತಿದ್ದಾರೆ, ಕೆಲವೊಂದು ಸಣ್ಣ ಪುಟ್ಟ ತಪ್ಪುಗಳು ಎಲ್ಲಾ ಕಡೆಯೂ ಆಗುತ್ತದೆ ಅವೆಲ್ಲವನ್ನೂ ಸರಿಮಾಡಿಕೊಂಡು ಹೋಗಬೇಕು. ಆಸ್ಪತ್ರೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನಿರಂತರವಾಗಿ ಕಲ್ಪಿಸುವ ಕೆಲಸಗಳು ನಡೆಯುತ್ತಿದೆ. ಇಲ್ಲಿನ ಡಯಾಲಿಸಿಸ್ ಕೇಂದ್ರ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ, ಇದಕ್ಕೆ ಬೇಕಾದ ಯಂತ್ರಗಳೂ ನಮ್ಮಲ್ಲಿದೆ. ಲ್ಯಾಬ್ ಇದೆ, ವೈದ್ಯರು ಇದ್ದಾರೆ, ಶುಶ್ರೂಷಕಿಯರೂ ಇದ್ದಾರೆ ಇವೆಲ್ಲವನ್ನೂ ಸಾರ್ವಜನಿಕರು ಬಳಸಿಕೊಳ್ಳಬೇಕು ಎಂದು ಹೇಳಿದರು. ಹಿಂದೆಗಿಂತ ಹೆಚ್ಚಾಗಿ ಈಗ ಸಾರ್ವಜನಿಕರು ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದು ತೆರಳುತ್ತಿದ್ದಾರೆ ಎಂದು ಹೇಳಿದರು.
ರಕ್ಷಾ ಸಮಿತಿ ಸದಸ್ಯರು ಸೇವೆ ಮಾಡಬೇಕು
ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಆಸ್ಪತ್ರೆಗೆ ಬರುವ ಬಡವರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಸಮಸ್ಯೆಯಾದಾಗ ಅದಕ್ಕೆ ಸ್ಪಂದಿಸುವ ಕೆಲಸವನ್ನು ಮಾಡಬೇಕು. ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ನೆರವಾಗಬೇಕು ಅದು ಅತ್ಯಂತ ಪುಣ್ಯದ ಕೆಲಸವಾಗಿದೆ, ವೈದ್ಯರಿದ್ದಾರೆ, ಸಿಬಂದಿಗಳಿದ್ದಾರೆ ಅವರು ಮಾಡಲಿ ಎಂದು ಕಾಯುವ ಬದಲು ಸಹಾಯ ಹರಸಿ ಬರುವ ಪ್ರತೀಯೊಬ್ಬರಿಗೂ ನೆರವಾಗಬೇಕು ಎಂದು ಶಾಸಕರು ಹೇಳಿದರು.
ಲ್ಯಾಬ್ಗೆ ಸಿಬಂದಿ ನೇಮಕವಾಗಬೇಕು: ಸುದೇಶ್ ಶೆಟ್ಟಿ
ಸಮಿತಿ ಸದಸ್ಯರಾದ ಸುದೇಶ್ ಶೆಟ್ಟಿ ಮಾತನಾಡಿ, ಇಲ್ಲಿನ ಲ್ಯಾಬ್ನಲ್ಲಿ ಸಿಬಂದಿಗಳ ಬೇಡಿಕೆ ಇದ್ದು ಗುತ್ತಿಗೆ ಆಧಾರದಲ್ಲಿ ಅವರನ್ನು ನೇಮಕ ಮಾಡಿದರೆ ಇನ್ನಷ್ಟು ಸೇವೆ ನೀಡಲು ಸಾಧ್ಯವಾಗುತ್ತದೆ. ಆಂಬುಲೆನ್ಸ್ ಬೇಡಿಕೆಯೂ ಇದೆ, ಮತ್ತು ಹೊರ ರೋಗಿಗಳು ರಕ್ತ ಪರೀಕ್ಷೆಗೆ ಹೊರಗಡೆ ಲ್ಯಾಬ್ಗೆ ಹೋದಾಗ ಅವರಿಗೆ ಪ್ರಥಮ ಅಧ್ಯತೆಯನ್ನು ಕೊಡಬೇಕು ಮತ್ತು ಅವರಿಗೆ ಬಿಲ್ನಲ್ಲಿ ಡಿಸ್ಕೌಂಟ್ ಕೊಡಬೇಕು ಮತ್ತು ಆಸ್ಪತ್ರೆಗೆ ಭದ್ರತಾ ಸಿಬ್ಬಂದಿ ನೇಮಕ ಮಾಡಬೇಕಿದೆ, ವಿಕಲಚೇತನರು ಪ್ರಮಾಣ ಪತ್ರಕ್ಕಾಗಿ ಬಂದಲ್ಲಿ ಅವರಿಗೆ ಆದಷ್ಟು ಮಾನವೀಯತೆ ನೆಲೆಯಲ್ಲಿ ಆಸ್ಪತ್ರೆಯಲ್ಲಿ ಸಹಾಯ ಮಾಡುವ ಕೆಲಸ ಆಗಬೇಕು ಎಂದು ಹೇಳಿದರು. ಇದಕ್ಕೆ ಸದಸ್ಯರಾದ ಅನ್ವರ್ ಕಬಕ , ಆಸ್ಕರ್ ಆನಂದ್, ಸಿದ್ದಿಕ್ ಸುಲ್ತಾನ್ ಧ್ವನಿಗೂಡಿಸಿದರು.
ಅಗತ್ಯ ಬಿದ್ದರೆ ಉಪ್ಪಿನಂಗಡಿಯಿಂದ ಅಂಬುಲೆನ್ಸ್ ತರಿಸಿ
ಪುತ್ತೂರಿಗೆ ಅಗತ್ಯ ಬಿದ್ದರೆ ಉಪ್ಪಿನಂಗಡಿಯಲ್ಲಿರುವ ಅಂಬುಲೆನ್ಸ್ ತರಿಸಿ, ಜನರ ಸೇವೆಗೆಂದೇ ಇರುವ ಈ ವ್ಯವಸ್ಥೆಯನ್ನು ಬಳಸಿಕೊಳ್ಳಬೇಕು ಎಂದು ಶಾಸಕರು ಸಭೆಗೆ ತಿಳಿಸಿದರು.
ಆಸ್ಪತ್ರೆಯಲ್ಲಿ ನಂದಿನಿ ಕ್ಷೀರ ಸ್ಥಾಪನೆ !
ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳಿಗೆ, ರೋಗಿಗಳ ಮೇಲ್ವಿಚಾರಕರು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರ ಅನುಕೂಲತೆಗೆ ಆಸ್ಪತ್ರೆಯ ಆವರಣದಲ್ಲಿ ನಂದಿನಿ ಕ್ಷೀರ ಕೇಂದ್ರ ಸ್ಥಾಪಸಿಲು ನಿಯಾಮವಳಿ ಇದ್ದು, ಅದರಂತೆ ಸದರಿ ವಿಷಯವಾಗಿ ಕೆ.ಎಂ.ಎಫ್ ಮಂಗಳೂರು ರವರು ಪ್ರಸ್ತಾವನೆ ಸಲ್ಲಿಸಿದ್ದು ನಕ್ಷೆಯಾನುಸಾರ ಪಿ.ಡಬ್ಲ್ಯು.ಡಿ. ಇಲಾಖೆರವರು ಬಾಡಿಗೆ ನಿಗದಿಪಡಿಸಿರುತ್ತಾರೆ. ಅದರಂತೆ ನಂದಿನಿ ಕ್ಷೀರ ಕೇಂದ್ರ ಸ್ಥಾಪಿಸುವ ಕುರಿತು ಚರ್ಚಿಸಲಾಯಿತು. 2024-25 ಸಾಲಿನ ಖರ್ಚಿನ ವಿವರಗಳನ್ನು ರಾಜೇಂದ್ರ ಸಿ ಮಂಡಿಸಿದರು.
2025-26 ಸಾಲಿನ ಬಜೆಟ್ ಯೋಜನೆಯನ್ನು ಡಾ. ಕರಣಾಕರ ಬಿ.ವಿ ಮಂಡಿಸಿದರು. ವೇದಿಕೆಯಲ್ಲಿ ಸಹಾಯಕ ಕಮಿಷನರ್ ಸ್ಟೆಲ್ಲಾ ವರ್ಗಿಸ್, ಪುತ್ತೂರು ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ, ಪ್ರಭಾರ ವೈಧ್ಯಾಧಿಕಾರಿ ಡಾ, ಅಮಿತ್, ರಕ್ಷಾ ಸಮಿತಿ ಸದಸ್ಯರಾದ ವಿಕ್ಟರ್ ಪಾಯಸ್ , ಅರುಣಾ ಉಪಸ್ಥಿತರಿದ್ದರು. ವೈದ್ಯಾಧಿಕಾರಿ ಡಾ. ಯದುರಾಜ್ ವರದಿ ವಾಚಿಸಿದರು. ತಾರನಾಥ ಕಾರ್ಯಕ್ರಮ ನಿರ್ವಹಿಸಿದರು.

ಮೆಡಿಕಲ್ ಕಾಲೇಜು ಬನ್ನೂರಲ್ಲೇ ಆಗಲಿದೆ,ಸರಕಾರಿ ಆಸ್ಪತ್ರೆ ಹೆರಿಗೆ ಮಕ್ಕಳ ಆಸ್ಪತ್ರೆಯಾಗಲಿದೆ
ಬನ್ನೂರಿನಲ್ಲಿ ನಿಗಧಿತ ಜಾಗದಲ್ಲೇ ಮೆಡಿಕಲ್ ಕಾಲೇಜು ನಿರ್ಮಾಣವಾಗಲಿದೆ. ಮೆಡಿಕಲ್ ಕಾಲೇಜು ನಿರ್ಮಾಣವಾದ ಬಳಿಕ ಈಗ ಇರುವ ಸರಕಾರಿ ಆಸ್ಪತ್ರೆಯನ್ನು ಇನ್ನೂ ಹೆಚ್ಚಿನ ಅಭಿವೃದ್ದಿ ಮಾಡಿ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯನ್ನಾಗಿ ಮಾಡಲಾಗುತ್ತದೆ ಎಂದು ಶಾಸಕರು ಹೇಳಿದರು. ಈ ಬಗ್ಗೆ ಯಾವುದೇ ಗೊಂದಲವಿಲ್ಲ , ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆಯೂ ಮಾತನಾಡಿದ್ದೇನೆ. ಶೀಘ್ರವೇ ಮೆಡಿಕಲ್ ಕಾಲೇಜಿಗೆ ಶಿಲಾನ್ಯಾಸ ಕಾರ್ಯವೂ ನಡೆಯಲಿದೆ.
ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು
ಸಭೆಯಲ್ಲಿ ಮಂಡನೆಯಾದ ವಿವಿಧ ವಿಷಯಗಳು:
ಆಸ್ಪತ್ರೆಯ ಶವಗಾರದಲ್ಲಿ ಅಗತ್ಯ ಮೂಲಸೌಕರ್ಯ ಸುಧಾರಣೆ ಮತ್ತು ನವೀಕರಣ ಕಾರ್ಯಗಳನ್ನು ಕೈಗೊಳ್ಳುವ ಮತ್ತು ಆಸ್ಪತ್ರೆಯ ರಕ್ತ ಶೇಖರಣ ಘಟಕದ ಮೇಲ್ಚಾವಣಿಯಲ್ಲಿ ಸೋರಿಕೆ ಇರುವುದರಿಂದ ಶೀಟ್ ಅಳವಡಿಕೆ ಮತ್ತು ಬಣ್ಣ ಬಳಿಯುವ ಕೆಲಸವನ್ನು ಕೈಗೊಳ್ಳುವ ಹಾಗು ಆಸ್ಪತ್ರೆಯ ವಠಾರದ ಒಳಚರಂಡಿ ನೀರು ಮಳೆಗಾಲದ ಸಮಯದಲ್ಲಿ ಸೋರಿಕೆಯಾಗುತ್ತಿದ್ದು ಒಳಚರಂಡಿ ನೀರನ್ನು ಶುದ್ಧೀಕರಿಸಲು, ಮಲಿನ ನೀರಿನ ಶುದ್ಧೀಕರಣ ಘಟಕ (Sewage Water Treatment Plant) ಸ್ಥಾಪನೆ ಅಗತ್ಯವಿರುತ್ತದೆ. ಅದರಂತೆ ಮಲಿನ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸುವಂತೆ ಹಾಗು ಆಸ್ಪತ್ರೆಯಲ್ಲಿ ಹೊಸ ಬಿ.ಪಿ.ಎಚ್.ಯು ಲ್ಯಾಬ್ ಕಟ್ಟಡ ನಿರ್ಮಾಣವಾಗುತ್ತಿದ್ದು, ಆಸ್ಪತ್ರೆಯಲ್ಲಿ ಸಭೆಗಳನ್ನು ನಡೆಸಲು ಸಭಾಂಗಣ ಇಲ್ಲದಿರುವ ಕಾರಣ, ಹೊಸ ಕಟ್ಟಡದ ಮಹಡಿಯಲ್ಲಿ ಹೊಸದಾಗಿ ಸಭಾಂಗಣ ನಿರ್ಮಿಸುವ ಕುರಿತು ಪ್ರಸ್ತಾವನೆಗೆ ಕುರಿತು ಸಭೆಯಲ್ಲಿ ವಿಚಾರ ಮಂಡನೆಯಾಯಿತು.