ʼಟ್ರಸ್ಟ್ಗೆ ಜಾಗ ಹಸ್ತಾಂತರ ಆದರೆ ಗೋ ಶಾಲೆಯೂ ಲೋಕಾರ್ಪಣೆʼ- ಅರುಣ್ ಕುಮಾರ್ ಪುತ್ತಿಲ
ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಮಾಂಗಲ್ಯಂ ತಂತುನಾನೇನ ಸಾಮೂಹಿಕ ವಿವಾಹದ ಕುರಿತ ಪೂರ್ವಭಾವಿ ಸಭೆಯು ಆ.31ರಂದು ಸಂಜೆ ಪುತ್ತೂರು ಮುಕ್ರಂಪಾಡಿ ಸುಭದ್ರಾ ಕಲಾ ಮಂದಿರದಲ್ಲಿ ನಡೆಯಿತು. ಸಭೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ರಚನೆ ಮಾಡಲಾಯಿತು.
ಸಮಾಜದ ಮುಂದಿರುವ ಯಾವುದೇ ಸವಾಲನ್ನು ಹಿಂದು ಸಮಾಜ ಎದುರಿಸಲಿದೆ:
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಆರಂಭದಲ್ಲಿ ಮಾತನಾಡಿ, ಹಿಂದುತ್ವ ಮತ್ತು ರಾಷ್ಟ್ರೀಯತೆಯ ಮಹತ್ವವನ್ನು ಜಗತ್ತಿಗೆ ಸಾರಿ, ಸ್ವಾಭಿಮಾನಿ ಸನಾತನ ಹಿಂದೂ ಸಮಾಜವನ್ನು ನಿರ್ಮಾಣ ಮಾಡುವ ಸಂಕಲ್ಪದಿಂದ ಪುತ್ತಿಲ ಪರಿವಾರ ಟ್ರಸ್ಟ್ ಕಳೆದ 2 ವರ್ಷಗಳ ಹಿಂದೆ ಆರಂಭವಾಗಿ ಹಿಂದೂ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಆರೋಗ್ಯ, ಶಿಕ್ಷಣ, ಉದ್ಯೋಗ ಸಹಿತ ಹಲವು ಸೇವೆಗಳನ್ನು ಮಾಡುತ್ತಾ ಬಂದಿದೆ. ಈ ನಡುವೆ ಲೋಕ ಕಲ್ಯಾಣಾರ್ಥವಾಗಿ ಶ್ರೀನಿವಾಸ ಕಲ್ಯಾಣೋತ್ಸವವನ್ನು ನಡೆಸಿಕೊಂಡು ಬಂದು ಈ ಬಾರಿ 3ನೇ ವರ್ಷದ ಕಾರ್ಯಕ್ರಮವಾಗಿ ಶ್ರೀನಿವಾಸ ಕಲ್ಯಾಣೋತ್ಸವದ ಜೊತೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷದ ಹಿನ್ನೆಲೆಯಲ್ಲಿ ಸಾಮೂಹಿಕ ವಿವಾಹವನ್ನು ಮಾಡುವುದಾಗಿ ಘೋಷಣೆ ಮಾಡಿದಂತೆ ಮಾಂಗಲ್ಯಂ ತಂತುನಾನೇನ ಕಾರ್ಯಕ್ರಮ ನಡೆಯಲಿದೆ. ಈಗಗಲೇ 6 ಗ್ರಾಮಗಳಿಂದ 12 ಜೋಡಿ ಸಾಮೂಹಿಕ ವಿವಾಹಕ್ಕೆ ನೋಂದಾವಣೆ ಮಾಡಿದ್ದಾರೆ. ಕಳೆದ ವರ್ಷ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ರೂ. 52 ಲಕ್ಷ ವೆಚ್ಚವಾಗಿದೆ. ಈ ಭಾರಿ ಸಾಮೂಹಿಕ ವಿವಾಹವು ಇರುವುದರಿಂದ ಸುಮಾರು ರೂ. 1.10 ಕೋಟಿ ಖರ್ಚು ಆಗಬಹುದೆಂದು ಅಂದಾಜಿಸಲಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಕಲ್ಪವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಟ್ರಸ್ಟ್ ಮೂಲಕ ಈಗಾಗಲೇ 100 ಬೂತ್ಗಳಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ಮಾಡಿದ್ದೇವೆ. ಮುಂದೆ ರಕ್ತದಾನ ಕಾರ್ಯಕ್ರಮವನ್ನೂ ಮಾಡಲಿದ್ದೇವೆ. ಹಿಂದೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಅಪಮಾನ, ಅವಮಾನ ಆದರೂ ನಾವು ಸುಮ್ಮನಿರದೆ ಅದನ್ನು ಎದುರಿಸಬೇಕು. ಸಮಾಜದ ಮುಂದಿರುವ ಯಾವುದೇ ಸವಾಲು ಇದ್ದರೂ ಹಿಂದೂ ಸಮಾಜ ಒಂದಾಗಿ, ಒಟ್ಟಾಗಿ ಕೆಲಸ ಮಾಡುತ್ತದೆ ಎಂದರು.

ಎರಡೂವರೇ ವರ್ಷದಲ್ಲಿ ಹಲವು ಸಾಮಾಜಿಕ ಚಟುವಟಿಕೆ:
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನಿಂದ ಕಳೆದ ಎರಡೂವರೆ ವರ್ಷದಲ್ಲಿ ಹಲವು ಸಾಮಾಜಿಕ ಚಟುವಟಿಕೆಗಳನ್ನು ಮಾಡಲಾಗಿದೆ. ಈಗಾಗಲೇ ಅಶಕ್ತರಿಗೆ ನಾಲ್ಕೈದು ಮನೆ ನಿರ್ಮಾಣ ಮಾಡಿ ಹಸ್ತಾಂತರ ಮಾಡಲಾಗಿದೆ. ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ವಾಟ್ಸಪ್ ಗ್ರೂಪ್ ಮಾಡಿಕೊಂಡು ಸುಮಾರು 3850 ಮಂದಿಗೆ ಟ್ರಸ್ಟ್ ಮೂಲಕ ಉದ್ಯೋಗ ಕಲ್ಪಿಸಲಾಗಿದೆ. ವಿದ್ಯಾಭ್ಯಾಸಕ್ಕೆ ಪೂರಕವಾಗಿ ಆರ್ಥಿಕ ನೆರವು ನೀಡಲಾಗಿದೆ. ಅದೇ ರೀತಿ ಸಂಪ್ರದಾಯವನ್ನು ನೆನಪಿಸುವ ನಿಟ್ಟಿನಲ್ಲಿ ಕೆಸರ್ದ ಕೂಟ, ವರಮಹಾಲಕ್ಷ್ಮೀ ಪೂಜೆ ಕಾರ್ಯಕ್ರಮ ಮಾಡಿದ್ದೇವೆ. ಅಟಲ್ ಬಿಹಾರಿ ವಾಜಪೇಯಿ ಜನ್ಮಶತಾಬ್ಧಿ ನಿಮಿತ್ತ ಪಾಣಾಜೆಯಲ್ಲಿ ಮನೆ ನಿರ್ಮಾಣ ಮಾಡಿಕೊಡುವ ಸಂಕಲ್ಪ ಕೈಗೊಂಡಂತೆ ಅದನ್ನು ಹಸ್ತಾಂತರ ಮಾಡಲಾಗುವುದು. ಮುಂದಿನ ದಿನ ಅಶಕ್ತರಿಗೆ ಮನೆಯ ಅಪೇಕ್ಷೆ ಇದ್ದಾಗ ಅವರಿಗೆ ಮನೆ ಕಟ್ಟಿಕೊಡುವುದು ಸಹಿತ ಹಲವಾರು ಕಾರ್ಯಕ್ರಮ ಪ್ರತಿ ತಿಂಗಳು ನಡೆಯುತ್ತಾ ಬರುತ್ತದೆ. ಇದೆಲ್ಲ ಕಾರ್ಯಕರ್ತರ ಸಹಕಾರದಿಂದ ನಡೆಯಲಿದೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಸರಕಾರ ಪ್ರಾಯೋಜಿತ ತೊಂದರೆಗಳನ್ನು ಎದುರಿಸಬೇಕು;
ಪ್ರಸ್ತುತ ದಿನದಲ್ಲಿ ಗಣೇಶೋತ್ಸವ ಆಚರಿಸುವ ಸಂದರ್ಭ ಪದಾಧಿಕಾರಿಗಳಿಗೆ ಇಲಾಖೆಯ ಮೂಲಕ ತೊಂದರೆ ಕೊಡುವ ಕೆಲಸ ಸರಕಾರ ಪ್ರಾಯೋಜಿತವಾಗಿ ಆಗಿದೆ. ಇದನ್ನು ಸಾಮೂಹಿಕವಾಗಿ ವಿರೋಧ ಮಾಡಿದರೆ ಮಾತ್ರ ಮುಂದಿನ ದಿನ ಧಾರ್ಮಿಕ ಕಾರ್ಯಕ್ರಮಗಳನ್ನು ಉಳಿಸಬಹುದು ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಲೋಕಕಲ್ಯಾಣಾರ್ಥವಾಗಿ ನಡೆಯುವ ಕಾರ್ಯಕ್ರಮ :
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷರಾಗಿ ಆಯ್ಕೆಗೊಂಡ ವಕೀಲ ನರಸಿಂಹಪ್ರಸಾದ್ ಅವರು ಮಾತನಾಡಿ, ನನ್ನ ಮತ್ತು ಅರುಣ್ ಕುಮಾರ್ ಅವರ ನಡುವೆ 30 ವರ್ಷದ ಬಾಂಧವ್ಯ ಇದೆ. ವೃತ್ತಿಯ ಒತ್ತಡದ ನಡುವೆಯೂ ಸಾಮಾಜಿಕ ಕಾರ್ಯದಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದೇನೆ. ಇದು ಲೋಕ ಕಲ್ಯಾಣಾರ್ಥವಾಗಿ ನಡೆಯುವ ಕಾರ್ಯಕ್ರಮ. ಈ ಕಾರ್ಯಕ್ರಮದ ಮಹತ್ವವನ್ನು ತಿಳಿಸುವಲ್ಲಿ ಎಲ್ಲರು ಧ್ವನಿಯಾಗಿ ಎಂದ ಅವರು ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲು ಈ ಭಾರಿ ಸುಮಾರು 1.10 ಕೋಟಿ ರೂ. ಖರ್ಚು ಅಂದಾಜಿಸಲಾಗಿದೆ. ನಮ್ಮ ಧರ್ಮವನ್ನು ಒಡೆಯಲು ಮತಾಂಧರು ಎಷ್ಟೋ ಕೋಟಿ ರೂಪಾಯಿ ವ್ಯಯಿಸುತ್ತಾರಂತೆ. ಇದಕ್ಕೆ ನಿದರ್ಶನವಾಗಿ ಧರ್ಮಸ್ಥಳ ಪ್ರಕರಣ ನೋಡುತ್ತಿದ್ದೇವೆ. ಧರ್ಮವನ್ನು ಒಗ್ಗೂಡಿಸಲು ನಾವೆಷ್ಟು ಕೋಟಿ ಖರ್ಚು ಮಾಡಬೇಕೆಂಬುದನ್ನು ಚಿಂತಿಸಬೇಕು ಎಂದ ಅವರು ಈ ಕಾರ್ಯಕ್ರಮ ಮಾಡಲು ಆರ್ಥಿಕವಾಗಿ ಹಿಂಜರಿಯದೆ ಕಾರ್ಯಕ್ರಮ ಯಶಸ್ವಿಗೊಳಿಸುತ್ತೇವೆ. ಸಾಮೂಹಿಕ ವಿವಾಹ ಎಂಬ ಭ್ರಮೆ ಬೇಡ. ಇಲ್ಲಿ ಸಾಮೂಹಿಕ ವಿವಾಹಕ್ಕೆ ಯೋಗ ಬೇಕು ಎಂಬುದು ಎಲ್ಲರೂ ತಿಳಿದಿರಬೇಕು ಎಂದು ಹೇಳಿದರು.
ಎಲ್ಲಾ ಹಿಂದೂಗಳು ಕಾರ್ಯಕ್ರಮದಲ್ಲಿ ಜೊತೆಗೂಡಿ:
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಅಧ್ಯಕ್ಷ ಶ್ರೀರಾಮ್ ಭಟ್ ಪಾತಾಳ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾತಿ, ಪಕ್ಷ, ಬೇಧ ಮರೆತು ಎಲ್ಲಾ ಹಿಂದೂಗಳು ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಜೊತೆ ಗೂಡುವಂತೆ ಹೇಳಿದರು. ವಿಜ್ರಂಭಣೆಯಿಂದ ನಡೆಯುವ ಈ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯವಾಗಿ ಬೇಕೆಂದರು.
ಧರ್ಮಸಭೆ, ಶ್ರೀನಿವಾಸ ಕಲ್ಯಾಣ, ಸಾಮೂಹಿಕ ವಿವಾಹ:
ಟ್ರಸ್ಟ್ನ ನಿರ್ದೇಶಕ ಉಮೇಶ್ ಕೋಡಿಬೈಲು ಅವರು ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ವಿವರಣೆ ನೀಡಿದರು. ನ.28ಕ್ಕೆ ಸಂಜೆ ದರ್ಬೆಯಿಂದ ಹೊರೆಕಾಣಿಕೆ ಮೆರವಣಿಗೆ ಬರಲಿದೆ. ನ.29ಕ್ಕೆ ಸಂಜೆ ಗಂಟೆ 4 ರಿಂದ ಬೊಳುವಾರಿನಿಂದ ಶ್ರೀದೇವರನ್ನು ಶೋಭಯಾತ್ರೆಯೊಂದಿಗೆ ಗೋವಿಂದ ಮಂಟಪಕ್ಕೆ ಬರಮಾಡಿಕೊಳ್ಳುವುದು. ಬಳಿಕ ವಿವಿಧ ಕಾರ್ಯಕ್ರಮದೊಂದಿಗೆ ಸಂಜೆ ಹಿಂದವಿ ಸಾಮ್ರಾಜ್ಯ ಧರ್ಮಸಭೆ ನಡೆಯಲಿದೆ. ಈ ಕಾರ್ಯಕ್ರಮದ ವೇದಿಕೆಯಲ್ಲಿ 12 ಮಂದಿ ಸ್ವಾಮೀಜಿಯವರು ಭಾಗವಹಿಸಲಿದ್ದಾರೆ. ರಾತ್ರಿ ಗಂಟೆ 8.30ರಿಂದ ಹರಿಕಥೆ ನಡೆಯಲಿದೆ. 9 ಗಂಟೆಯಿಂದ ಸಾರ್ವಜನಿಕ ಅನ್ನಸಂರ್ಪಣೆ ನಡೆಯಲಿದೆ. ನ.30ರಂದು ಬೆಳಗ್ಗೆ ಗಂಟೆ 5.30ರಿಂದ ಸುಪ್ರಭಾತ ಸೇವೆ, ಮಧ್ಯಾಹ್ನ ಗಂಟೆ 11ರಿಂದ ಸಾಮೂಹಿಕ ವಿವಾಹ, 12.30ಕ್ಕೆ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ಗಂಟೆ 2.30ರಿಂದ ಭಜನೋತ್ಸವ, ಸಂಜೆ ಗಂಟೆ 4.30ರಿಂದ ಸಂಗೀತ ಕಾರ್ಯಕ್ರಮ. ಸಂಜೆ ಗಂಟೆ 6ರಿಂದ ವೈಭವದ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಕಾರ್ಯದರ್ಶಿ ಪ್ರೇಮ್ರಾಜ್ ಅರ್ಲಪದವು, ಕೋಶಾಧಿಕಾರಿ ರೂಪೇಶ್ ನಾೖಕ್ ಟಿ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ನೂತನ ಕಾರ್ಯಾಧ್ಯಕ್ಷ ಪ್ರಾಣೇಶ್ ಕೆಮ್ಮಾಯಿ, ಕೋಶಾಧಿಕಾರಿ ಉದಯ ಕುಮಾರ್ ಉಪಸ್ಥಿತರಿದ್ದರು. ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ತಿಂಗಳಾಡಿ ವಂದಿಸಿದರು. ರವಿ ಶೆಟ್ಟಿ ಕೈಂದಾಡಿ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ವಿವಾಹ ನೋಂದಾವಣೆ ಪತ್ರವನ್ನು ನೀಡಲಾಯಿತು. ಈಗಾಗಲೇ 6 ಗ್ರಾಮದಲ್ಲಿ 12 ಜೋಡಿ ನೋಂದಾವಣೆ ಆಗಿದೆ. ಮುಂದೆ ಇನ್ನೂ ನೋಂದಾವಣೆಗೆ ಬಾಕಿ ಇದೆ ಎಂದು ಸಭೆಯಲ್ಲಿ ಸಂಘಟಕರು ತಿಳಿಸಿದರು. ಸಭೆಯಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಗೌರವಾಧ್ಯಕ್ಷ ಶಶಾಂಕ್ ಕೊಟೆಚಾ, ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಪ್ರೇಮಾರಾಧಾಕೃಷ್ಣ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ರಚನೆ
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷರಾಗಿ ನ್ಯಾಯವಾದಿ ನರಸಿಂಹ ಪ್ರಸಾದ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ಶೆಟ್ಟಿ ತಿಂಗಳಾಡಿ, ಕಾರ್ಯಾಧ್ಯಕ್ಷರಾಗಿ ಪ್ರಾಣೇಶ್ ಕೆಮ್ಮಾಯಿ, ಕೋಶಾಧಿಕಾರಿಯಾಗಿ ಉದಯ ಕುಮಾರ್ ಸಂಪ್ಯ ಅವರನ್ನು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರು ಘೋಷಣೆ ಮಾಡಿ ಒಂದು ವಾರದ ಒಳಗೆ ಪೂರ್ಣ ಪ್ರಮಾಣದ ಸಮಿತಿ ರಚನೆಯಾಗಲಿದೆ. ಇನ್ನಷ್ಟು ಉಪಸಮಿತಿಗಳನ್ನು ಮಾಡುವುದಕ್ಕಿದೆ ಎಂದರು.
ಟ್ರಸ್ಟ್ಗೆ ಜಾಗ ಹಸ್ತಾಂತರ ಆದರೆ ಗೋ ಶಾಲೆಯೂ ಲೋಕಾರ್ಪಣೆ
ಕಳೆದ ವರ್ಷ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಪೇಜಾವರ ಶ್ರೀಗಳ ಆಶೀರ್ವಾದದಂತೆ ಗೋ ಶಾಲೆ ನಿರ್ಮಾಣದ ಕುರಿತು ಘೋಷಣೆ ಮಾಡಿದ್ದೆವು. ಗೋವಿನಿಂದಾಗಿ ಸಮಾಜದಲ್ಲಿ ನಡೆಯುವ ಸಂಘರ್ಷವನ್ನು ತಡೆಯಲು ಗೋ ಶಾಲೆ ನಿರ್ಮಾಣ ಅಗತ್ಯವಿತ್ತು. ಈ ನಿಟ್ಟಿನಲ್ಲಿ ಮುಂಡೂರು ಬದಿಯಡ್ಕದಲ್ಲಿರುವ 5.92 ಎಕ್ರೆ ಗೋಮಾಳ ಜಾಗವನ್ನು ನಮ್ಮ ಟ್ರಸ್ಟ್ಗೆ ಹಸ್ತಾಂತರ ಮಾಡುವಂತೆ ಜಿಲ್ಲಾಧಿಕಾರಿಯವರಿಗೆ ನಿವೇದನೆ ಮಾಡಿದ್ದೇವೆ. ಅವರು ಅಲ್ಲಿಂದ ಅದನ್ನು ತಹಸೀಲ್ದಾರ್ ಕಚೇರಿಗೆ ಕಳುಹಿಸಿದ್ದಾರೆ. ಸರಕಾರದ ಕಡೆಯಿಂದ ಆ ಜಾಗ ಟ್ರಸ್ಟ್ಗೆ ಹಸ್ತಾಂತರ ಆದಲ್ಲಿ ಸಾಮೂಹಿಕ ಶ್ರೀನಿವಾಸ ಕಲ್ಯಾಣೋತ್ಸವದ ಸಂದರ್ಭದಲ್ಲೇ ಗೋ ಶಾಲೆಯನ್ನೂ ಸಹ ಲೋಕಾರ್ಪಣೆ ಮಾಡಲು ಸಿದ್ದರಿದ್ದೇವೆ.
-ಅರುಣ್ ಕುಮಾರ್ ಪುತ್ತಿಲ
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸ್ಥಾಪಕರು