ಪುತ್ತೂರು: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು. ಹಾಗೂ ಸುದಾನ ವಸತಿಯುತ ಶಾಲೆ ಪುತ್ತೂರು ಇವರ ಸಹಯೋಗದಲ್ಲಿ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ – ಬಾಲಕಿಯರ ಟೇಬಲ್ ಟೆನ್ನಿಸ್ ಪಂದ್ಯಾಟವು ಸೆಪ್ಟೆಂಬರ್ 1 ರಂದು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿ ಆಸ್ಕರ್ ಆನಂದ್ ವಹಿಸಿಕೊಂಡಿದ್ದರು. ಸುದಾನ ಶಾಲೆಯ ಸಂಚಾಲಕ ರೆ. ವಿಜಯ ಹಾರ್ವಿನ್ ರವರು ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಮನಸ್ಸಿನ ಏಕಾಗ್ರತೆ, ಮತ್ತು ಕೈಯ ಚಳಕ ಟೇಬಲ್ ಟೆನ್ನಿಸ್ ನಲ್ಲಿ ಅತಿ ಮುಖ್ಯ. ಮಕ್ಕಳು ಸಶಕ್ತರಾಗಿ ಬೆಳೆಯಲು ಕ್ರೀಡೆಯು ಅತ್ಯಗತ್ಯ ಎಂದು ನುಡಿದರು.
ಪುತ್ತೂರು ಪ್ರೌಢಶಾಲಾ ವಿಭಾಗದ ನೋಡೆಲ್ ಅಧಿಕಾರಿ ನರೇಶ್ ಲೋಬೋ ಪ್ರಾಸ್ತಾವಿಕ ಭಾಷಣದಲ್ಲಿ ಸ್ಪರ್ಧೆಯ ನಿಯಮಗಳ ಬಗ್ಗೆ ವಿವರಿಸಿದರು. ಪುತ್ತೂರು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಯ್ಯ ಮಾತನಾಡಿ, ಸ್ಪರ್ಧೆಯಲ್ಲಿ ನಿಯಮಗಳ ಪಾಲನೆ ಅತಿಮುಖ್ಯ, ತೀರ್ಪುಗಾರರ ತೀರ್ಮಾನವೇ ಅಂತಿಮ. ಇದರಿಂದ ವಿದ್ಯಾರ್ಥಿಯಲ್ಲಿ ಜೀವನ ಶಿಸ್ತು ಬೆಳೆಯುತ್ತದೆ ಎಂದರು.
ಶಾಲಾ ಐ.ಟಿ ವಿಭಾಗದ ಮುಖ್ಯಸ್ಥ ರಂಜಿತ್ ಮಥಾಯಿಸ್ ಕ್ರೀಡಾ ಪದಕಗಳು ಹಾಗೂ ಟ್ರೋಫಿಗಳನ್ನು ಪ್ರಾಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಪುತ್ತೂರಿನ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ, ಮತ್ತು ಪುತ್ತೂರಿನ ಪ್ರಾಥಮಿಕ ಶಾಲಾ ವಿಭಾಗದ ನೋಡೆಲ್ ಅಧಿಕಾರಿ ಕುಸುಮಾವತಿ ಪಂದ್ಯಾಟಕ್ಕೆ ಶುಭಹಾರೈಸಿ, ಮಾರ್ಗದರ್ಶನ ನೀಡಿದರು. ಪುತ್ತೂರು ತಾಲೂಕಿನ ಸುಮಾರು ಎಂಟು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಸ್ವಾಗತಿಸಿ, ಶಾಲಾ ದೈಹಿಕ ಶಿಕ್ಷಕ ನವೀನ್ ಕಾರ್ಯಕ್ರಮವನ್ನು ನಿರೂಪಿಸಿ, ಶಾಲಾ ದೈಹಿಕ ಶಿಕ್ಷಕ ಪುಷ್ಪರಾಜ್ ವಂದಿಸಿದರು. ಶಾಲಾ ದೈಹಿಕ ಶಿಕ್ಷಕರಾದ ಲೀಲಾವತಿ ಮತ್ತು ಜೀವಿತ ಎನ್ ಕೆ ಶಾಲಾ ಸ್ಪೋಟ್ಸ್ ಕ್ಲಬ್ ಶಕ್ತಿಯ ಶಿಕ್ಷಕರು ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಸಹಕರಿಸಿದರು.