ಆಲಂಕಾರು: ಸಾಲ ತೀರಿಸಲಾಗದೆ ಮನನೊಂದು ವಿಷ ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಕಡಬ ತಾಲೂಕಿನ ಆಲಂಕಾರು ಗ್ರಾಮದಲ್ಲಿ ನಡೆದಿದೆ.
ಆಲಂಕಾರು ಗ್ರಾಮದ ನೆಕ್ಕಿಲಾಡಿ ನಿವಾಸಿ ಚಂದ್ರಾವತಿ(75.ವ) ಮೃತಪಟ್ಟವರು. ಚಂದ್ರಾವತಿಯವರು 3 ವರ್ಷದ ಹಿಂದೆ ಬ್ಯಾಂಕ್ನಲ್ಲಿ ಸಾಲ ಪಡೆದುಕೊಂಡಿದ್ದರು. ಸದ್ರಿ ಸಾಲ ತೀರಿಸಲಾಗದೇ ಮಾನಸಿಕವಾಗಿ ನೊಂದಿದ್ದರು. ಆ.29ರಂದು ಮಧ್ಯಾಹ್ನ 2 ಗಂಟೆಗೆ ಅವರ ಪುತ್ರ ಗಂಗಾಧರ ಗೌಡರವರು ಆಲಂಕಾರು ಹಾಲು ಉತ್ಪಾದಕರ ಸಹಕಾರ ಸಂಘದ ಮೀಟಿಂಗ್ ಮುಗಿಸಿ ಮನೆಗೆ ಬಂದಾಗ ಮನೆಯ ಅಂಗಳದಲ್ಲಿ ಚಂದ್ರಾವತಿ ಅವರು ಅಸ್ವಸ್ಥರಾಗಿ ಬಿದ್ದಿದ್ದರು. ಅವರನ್ನು ಉಪಚರಿಸಿದಾಗ ವಿಷ ಸೇವಿಸಿದ ವಾಸನೆ ಬಂದಿದ್ದು ಕೂಡಲೇ ಚಿಕಿತ್ಸೆಗೆ ಆಲಂಕಾರು ಲಕ್ಷ್ಮಿ ಕ್ಲಿನಿಕ್ಗೆ, ಬಳಿಕ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ಕರೆತಂದು ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಯಲ್ಲಿದ್ದವರು ಆ.31ರಂದು ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತರ ಪುತ್ರಿ ಇಂದಿರಾ ಅವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಕೇಸು ದಾಖಲಾಗಿದೆ.