ಹದಗೆಟ್ಟ ನಂದಿನಿನಗರ- ಹರಿನಗರ ರಸ್ತೆ : 15 ದಿನಗಳೊಳಗೆ ಸರಿಪಡಿಸಲು ಆಗ್ರಹ

0

ತಪ್ಪಿದ್ದಲ್ಲಿ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಉಪ್ಪಿನಂಗಡಿ: ಪುತ್ತೂರು ತಾಲೂಕು ಹಿರೇಬಂಡಾಡಿ ಗ್ರಾಮದ ಹರಿನಗರವನ್ನು ಸಂಪರ್ಕಿಸುವ ನಂದಿನಿನಗರದ ಬಳಿಯ ರಸ್ತೆಯ ಡಾಮರು ಸಂಪೂರ್ಣವಾಗಿ ಕಿತ್ತು ಹೋಗಿದ್ದು, ದಿನ ನಿತ್ಯ ವಾಹನ ಸವಾರರು ಅಪಘಾತಕ್ಕೀಡಾಗುವಂತಿದೆ. ಆದರೂ ಇದರ ದುರಸ್ತಿ ಬಗ್ಗೆ ಹಿರೇಬಂಡಾಡಿ ಗ್ರಾ.ಪಂ. ನಿರ್ಲಕ್ಷ್ಯ ವಹಿಸುತ್ತಿದ್ದು, ಇದು ಮುಂದುವರೆದರೆ ಮುಂಬರುವ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಹಾಗೂ ಪ್ರತಿಭಟನೆ ನಮಗೆ ಅನಿವಾರ್ಯವೆಂದು ನಾಗರಿಕರು ಗ್ರಾ.ಪಂ. ಹಾಗೂ ಜಿಲ್ಲಾಡಳಿತಕ್ಕೆ ಲಿಖಿತ ಎಚ್ಚರಿಕೆಯನ್ನು ನೀಡಿದ್ದಾರೆ.


ಹಿರೇಬಂಡಾಡಿ ಗ್ರಾಮದ ಹರಿನಗರವನ್ನು ಸಂಪರ್ಕಿಸುವ ನಂದಿನಿ ನಗರ – ವೇದಶಂಕರ ನಗರ ರಸ್ತೆಯ ಇಳಿಜಾರು ಭಾಗದಲ್ಲಿ ರಸ್ತೆಯ ಡಾಮರು ಸಂಪೂರ್ಣ ಕಿತ್ತು ಹೋಗಿ ಏರುತಗ್ಗುಗಳಿಂದ ಕೂಡಿದ ರಸ್ತೆಯಾಗಿ ಬದಲಾಗಿದೆ. ಅಲ್ಲಿರುವ ಜಲ್ಲಿ ಕಲ್ಲುಗಳಿಗೆ ಸಿಲುಕಿ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗುತ್ತಿದ್ದು, ಹಲವು ಮಂದಿ ಆಸ್ಪತ್ರೆಗೆ ದಾಖಲಾಗುವಂತಾಗಿದೆ. ಕನಿಷ್ಟ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ದುರಸ್ತಿ ಮಾಡಿ ಎಂದು ಅಲ್ಲಿನ ಜನತೆ ಪದೇ ಪದೇ ಮನವಿ ಸಲ್ಲಿಸಿದ್ದರೂ ಗ್ರಾ.ಪಂ. ಯಾವುದೇ ಸ್ಪಂದನೆ ತೋರದಿರುವುದರಿಂದ ಅಲ್ಲಿನ ಜನತೆ ಸಂಕಷ್ಟವನ್ನು ನಿತ್ಯ ಅನುಭವಿಸುವಂತಾಗಿದೆ. ಕೆಲ ದಿನಗಳ ಹಿಂದೆ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದಾಗ ವಾಹನ ಅಪಘಾತಕ್ಕೀಡಾಗಿ ಮಕ್ಕಳಿಗೆ ತೊಂದರೆಯಾಗುವಂತಹ ಪರಿಸ್ಥಿತಿ ನಿರ್ಮಾಣವಾದಾಗ ಅಲ್ಲಿನ ನಿವಾಸಿಗರ ಸಹನೆಯ ಕಟ್ಟೆ ಒಡೆಯಲ್ಪಟ್ಟಿದ್ದು, ರಸ್ತೆಯನ್ನು ದುರಸ್ತಿ ಮಾಡಲಾಗದಿದ್ದರೆ, ಯಾವೊಬ್ಬ ಜನಪ್ರತಿನಿಧಿಯೂ ಮುಂದಿನ ಯಾವುದೇ ಚುನಾವಣೆಯ ಸಂಧರ್ಭದಲ್ಲಿ ನಮ್ಮ ಭಾಗಕ್ಕೆ ಕಾಲಿರಿಸಬಾರದು. ನಾವೆಲ್ಲರೂ ಚುನಾವಣೆಯನ್ನು ಬಹಿಷ್ಕರಿಸಲಿದ್ದೇವೆ ಎಂದು ಜಿಲ್ಲಾಡಳಿತ ಹಾಗೂ ಪಂಚಾಯತ್ ಆಡಳಿತಕ್ಕೆ ಈ ಭಾಗದ ಜನತೆ ಲಿಖಿತ ಎಚ್ಚರಿಕೆ ನೀಡಿದ್ದು, ಅದಕ್ಕಾಗಿ ಸೆಷ್ಟೆಂಬರ್ 15ನೇ ತಾರೀಕಿನ ಗಡುವನ್ನೂ ನೀಡಿದ್ದಾರೆ.


ರಾಜಕೀಯ ಜಿದ್ದಿಗೆ ಬಲಿಯಾಗುತ್ತಿದ್ದೇವೆ ನಾವು!:
ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದರೂ ನಮ್ಮ ಭಾಗಕ್ಕೆ ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲ. ನಮ್ಮ ಗ್ರಾಮದ ಪಂಚಾಯತ್ ಸದಸ್ಯರೊಬ್ಬರ ಮೇಲಿನ ರಾಜಕೀಯ ದ್ವೇಷಕ್ಕಾಗಿ ನಮ್ಮ ವಾರ್ಡನ್ನು ಸತತ ಕಡೆಗಣಿಸಲಾಗುತ್ತಿದೆ. ಅವರುಗಳ ರಾಜಕೀಯ ದ್ವೇಷ ಸಾಧನೆಗೆ ನಾವು ದಿನ ನಿತ್ಯ ಅಪಘಾತಕ್ಕೀಡಾಗಿ ಕೈಕಾಲು ಸೊಂಟ ಮುರಿಸಿಕೊಂಡು ಆಸ್ಪತ್ರೆಗೆ ದಾಖಲಾಗುತ್ತಿದ್ದೇವೆ. ಇನ್ನು ನಮ್ಮಿಂದ ಸಹಿಸಲು ಸಾಧ್ಯವಿಲ್ಲ. ಸುಲಲಿತ ಸಂಚಾರಕ್ಕಾಗಿ ಸುರಕ್ಷಿತ ರಸ್ತೆಯನ್ನು ಒದಗಿಸಿಕೊಡಿ ಎಂಬ ನಮ್ಮ ಒಂದು ನ್ಯಾಯೋಚಿತ ಬೇಡಿಕೆಯನ್ನು ಈಡೇರಿಸಲಾಗದಿದ್ದರೆ ನಮಗೆ ಯಾವ ಚುನಾವಣೆಯೂ ಬೇಕಾಗಿಲ್ಲ. ಯಾವ ಜನಪ್ರತಿನಿಧಿಯೂ ಬೇಕಾಗಿಲ್ಲ. ಅದಕ್ಕಾಗಿ ಚುನಾವಣೆ ಬಹಿಷ್ಕಾರದಂತಹ ಕ್ರಮಕ್ಕೆ ಮುಂದಾಗಿರುವೆವು. ಮಾತ್ರವಲ್ಲ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಸಹಿತ ಹಲವಾರು ಮಾರ್ಗೋಪಾಯದಲ್ಲಿ ನಮ್ಮ ಜನಾಕ್ರೋಶ ವ್ಯಕ್ತವಾಗಲಿದೆ ಎಂದು ಸ್ಥಳೀಯ ನಿವಾಸಿ ಭರತ್ ಹರಿನಗರ ತಿಳಿಸಿದ್ದಾರೆ.


ಸ್ಪಂದಿಸಲಾಗುವುದು:
ಈ ಬಗ್ಗೆ ಪ್ರತಿಕ್ರಿಯಿಸಿದ ಹಿರೆಬಂಡಾಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಸದಾನಂದ ಶೆಟ್ಟಿ, ಹರಿನಗರದ ನಿವಾಸಿಗರ ಚುನಾವಣೆ ಬಹಿಷ್ಕಾರದ ಎಚ್ಚರಿಕೆಯ ಪತ್ರ ಸ್ವೀಕರಿಸಲಾಗಿದೆ. ಈಗಾಗಲೇ ಅಡ್ವಾನ್ಸ್ ವರ್ಕ್ ಸಂಬಂಧ 40 ಲಕ್ಷ ರೂ. ಪಾವತಿಗೆ ಬಾಕಿ ಇರುವುದರಿಂದ ಇನ್ನು ಹೆಚ್ಚುವರಿ ಕೆಲಸ ನಿರ್ವಹಿಸಲು ಗುತ್ತಿಗೆದಾರರು ಒಪ್ಪುತ್ತಿಲ್ಲ. ಹೀಗಾಗಿ ಅಲ್ಲಿನ ರಸ್ತೆ ದುರಸ್ತಿ ಕಾಮಗಾರಿ ನಡೆಸಲು ಆಗಿರಲಿಲ್ಲ. ಇದೀಗ ಅಲ್ಲಿನ ಜನರು ಚುನಾವಣೆ ಬಹಿಷ್ಕಾರ ಮತ್ತು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿರುವುದರಿಂದ ಅವರ ನ್ಯಾಯೋಚಿತ ಬೇಡಿಕೆಯನ್ನು ಈಡೇರಿಸಲು ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಲಾಗಿದೆ. ಗಡುವಿನ ಮೊದಲು ಸಮಸ್ಯೆಯನ್ನು ಬಗೆಹರಿಸಲಾಗುವುದೆಂದು ತಿಳಿಸಿದ್ದಾರೆ.


ಜನರ ಶಾಪ ತಟ್ಟುವ ಮುನ್ನಾ ಕರ್ತವ್ಯ ಪಾಲಿಸಿ:
ದಿನ ನಿತ್ಯ ಮಕ್ಕಳು, ಮಹಿಳೆಯರು ಈ ಭಾಗದಲ್ಲಿ ಬಿದ್ದೇಳುತ್ತಿರುವುದನ್ನು ಕಂಡು ಮನಸ್ಸು ನೊಂದಿದೆ. ದಿನಕೂಲಿ ಸಂಪಾದನೆಯ ಮಂದಿ ಈ ರಸ್ತೆಯ ಕಾರಣಕ್ಕೆ ಕೈಕಾಲು ಮುರಿದು ದುಡಿಯಲಾಗದ ಸ್ಥಿತಿಗೆ ಸಿಲುಕಿರುವುದು ಒಂದೆಡೆಯಾದರೆ, ದುಡಿದ ಹಣವನ್ನು ಆಸ್ಪತ್ರೆಗೆ ಸುರಿಯುವ ಅನಿವಾರ್ಯತೆ ಇನ್ನೊಂದೆಡೆ. ಈ ಅಸಾಹಾಯಕ ಸ್ಥಿತಿಯಲ್ಲಿ ಪಂಚಾಯತ್ ಆಡಳಿತಗಾರರಿಗೆ ಶಾಪವನ್ನಿತ್ತು ಮೌನವಾಗುತ್ತಿದ್ದ ನಾವು ಇದೀಗ ಎಲ್ಲರ ಒತ್ತಾಯಕ್ಕೆ ಒಳಗಾಗಿ ಹೋರಾಟದ ಹಾದಿಯತ್ತ ಸಾಗುತ್ತಿದ್ದೇವೆ. ಜನರ ಶಾಪ ತಟ್ಟುವ ಮುನ್ನಾ ಕರ್ತವ್ಯ ಪಾಲಿಸಿ ಎನ್ನುವುದೇ ನಮ್ಮ ವಿನಂತಿ ಎಂದು ಮಂಜುನಾಥ್ ಹರಿನಗರ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here