47 ಜನ ಬಿಡಿ 2 ಜನರನ್ನು ಕರಕೊಂಡು ಬರ್ತೆನೆ ಅವರಿಗೆ ಉತ್ತರ ಕೊಡಲಿ – ಅಶೋಕ್ ರೈ
ಪುತ್ತೂರು: ಶಾಸಕ ಅಶೋಕ್ ರೈ ಅವರು ಕಳೆದ ಎರಡು ವರ್ಷಗಳಿಂದ ಪುತ್ತೂರಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಲಂಚವನ್ನು ಮರೆಮಾಚಲು ಮಾಜಿ ಶಾಸಕರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಮಾಜಿ ಶಾಸಕರ ಮೇಲೆ ಲಂಚದ ಆರೋಪ ಹೊರಿಸಿದ ಹಾಲಿ ಶಾಸಕರು ಲಂಚ ಕೊಟ್ಟ ವ್ಯಕ್ತಿಗಳನ್ನು ಕರೆದು ಕೊಂಡು ಬರಲಿ. ನಾವು ಕೂಡಾ ಅವರು ಹೇಳಿದ ಜಾಗಕ್ಕೆ ಮಾಜಿ ಶಾಸಕರನ್ನು ಕರೆದುಕೊಂಡು ಬರುತ್ತೇವೆ ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಅವರು ಪತ್ರಿಕಾಗೋಷ್ಟಿಯಲ್ಲಿ ಸವಾಲು ಹಾಕಿದ್ದಾರೆ.
ಪುತ್ತೂರು ತಾಲೂಕು ಕಚೇರಿಯಲ್ಲಿ ನಡೆದ ಲೋಕಾಯುಕ್ತ ದಾಳಿಯ ಕುರಿತು ಕೆಲವೊಂದು ಗಂಭೀರ ಆರೋಪಗಳನ್ನು ಮಾಜಿ ಶಾಸಕರು ಮಾಡಿದ್ದರು. ಇದೇ ವಿಚಾರಕ್ಕೆ ಶಾಸಕ ಅಶೋಕ್ ರೈ ಅವರು ಮಾಜಿ ಶಾಸಕ ಸಂಜೀವ ಮಠಂದೂರು ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಅಶೋಕ್ ರೈ ಅವರು ಕಳೆದ ಎರಡು ವರ್ಷಗಳಿಂದ ಪುತ್ತೂರಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗು ಲಂಚವನ್ನು ಮರೆಮಾಚಲು ಮಾಜಿ ಶಾಸಕರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಬಿಜೆಪಿಯಲ್ಲಿದ್ಧಾಗ ಈ ಆರೋಪಗಳು ಸಾರ್ವಜನಿಕರಿಂದ ಬಂದಾಗ ಭ್ರಷ್ಟಾಚಾರದ ಬಗ್ಗೆ ಯಾಕೆ ಮೌನವಹಿಸಿದ್ದಾರೆ. ಇದೇ ಶಾಸಕನಾಗಿ ಎರಡೂವರೆ ವರ್ಷದ ನಂತರ ತಾಲೂಕು ಕಚೇರಿ ಸಿಬ್ಬಂದಿ ಮೇಲೆ ಲೋಕಾಯುಕ್ತ ದಾಳಿಯಾದಾಗ ಅವರು ಸಮರ್ಥನೆ ಮಾಡುವ ಕೆಲಸ ಮಾಡಿದ್ದಾರೆ ಎಂದ ಅವರು ನಮ್ಮ ಮಾಜಿ ಶಾಸಕರು ಹಾಗು ಅಕ್ರಮ ಸಕ್ರಮ ಸಮಿತಿಯ ಸದಸ್ಯರ ಬಗ್ಗೆ ಪೂರ್ಣ ವಿಶ್ವಾಸವಿದೆ. ನಿಮ್ಮ ಆರೋಪದಲ್ಲಿ 47 ಮಂದಿ ಫಲಾನುಭವಿಗಳು ಹಾಗು ದನ ಮಾರಿದ ಮಹಿಳೆಯಿಂದ ತಲಾ ರೂ. 2 ಲಕ್ಷ ರೂಪಾಯಿ ಲಂಚ ತೆಗೆದುಕೊಂಡ ಗಂಭೀರ ಆರೋಪಕ್ಕೆ ಸಂಬಂಧಿಸಿ ದೇವರ ಎದುರು ಪ್ರಮಾಣಕ್ಕೆ ಸವಾಲು ಹಾಕಿದ್ದೀರಿ. ಆದರೆ ನಿಮಗೆ ತಾಕತ್ತಿದ್ದರೆ 47 ಮಂದಿ ಲಂಚಕೊಟ್ಟ ವ್ಯಕ್ತಿಗಳ ಹಾಗು ದನ ಮಾರಿ ಹಣ ಕೊಟ್ಟ ಮಹಿಳೆಯನ್ನು ಕರೆದುಕೊಂಡು ಬನ್ನಿ. ನೀವು ಜಾಗ, ದಿನಾಂಕ, ಸಮಯ ನಿಗದಿ ಮಾಡಿ. ನಾವು ಮತ್ತು ಮಾಜಿ ಶಾಸಕರು ಹಾಗು ಅಂದಿನ ಅಕ್ರಮ ಸಕ್ರಮ ಸಮಿತಿಯ ಸದಸ್ಯರನ್ನು ಕರೆದುಕೊಂಡು ಅಲ್ಲಿಗೆ ಬರುತ್ತೇವೆ ಎಂದರು.
ನಿಮ್ಮ ಜಾತಕ ನಮ್ಮಲ್ಲೂ ಇದೆ:
ಶಾಸಕರು ಗಾಜಿನ ಮನೆಯಲ್ಲಿ ಕೂತು ಇನ್ನೊಬ್ಬರಿಗೆ ಕಲ್ಲು ಹೊಡೆಯುತ್ತಾ ಇದ್ದೀರಿ. ನಿಮ್ಮ ಜಾತಕ ನಮ್ಮಲ್ಲಿಯೂ ಇದೆ. ನಿಮ್ಮ ಜನ್ಮ ಜಾಲಾಡಿಸುವ ಕೆಲಸ ನಾವು ಕೂಡ ಸಮಯ ಸಂದರ್ಭ ಬಂದಾಗ ಮಾಡುತ್ತೆವೆ ಎಂದು ದಯಾನಂದ ಶೆಟ್ಟಿ ಉಜಿರೆಮಾರು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ನಗರ ಮಂಡಲದ ಉಪಾಧ್ಯಕ್ಷ ಯುವರಾಜ್ ಪೆರಿಯತ್ತೋಡಿ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ನಾಗೇಂದ್ರ ಬಾಳಿಗ ಉಪಸ್ಥಿತರಿದ್ದರು.
47 ಜನ ಬಿಡಿ 2 ಜನರನ್ನು ಕರಕೊಂಡು ಬರ್ತೆನೆ ಅವರಿಗೆ ಉತ್ತರ ಕೊಡಲಿ – ಅಶೋಕ್ ರೈ
47 ಜನರನ್ನು ಬಿಡಿ 2 ಜನರನ್ನು ಕರೆದುಕೊಂಡು ಬರುತ್ತೇನೆ. ಮೊದಲು ಅವರಿಗೆ ಉತ್ತರ ಕೊಡಲಿ ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಬಿಜೆಪಿಯವರ ಸವಾಲಿಗೆ ಪ್ರತ್ಯುತ್ತರ ನೀಡಿದ್ದಾರೆ.

ಪುತ್ತೂರು ಸರಕಾರಿ ಆಸ್ಪತ್ರೆಯ ಬಳಿ ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ನಾನು 47 ಜರನ್ನು ಕರೆದು ಕೊಂಡು ಬಂದು ಪುನಃ ಊರಿಗೆ ತಿಳಿಸುವುದಕ್ಕಿಂತ 2 ಮಂದಿಯನ್ನು ಕರೆದುಕೊಂಡು ಬರುತ್ತೇನೆ. ಅವರ ಅವಧಿಯಲ್ಲಿ 87 ಅರ್ಜಿಗಳು ಇನ್ನೂ ಆಗದ್ದು ಇದೆ. ಅವರನ್ನು ಒಮ್ಮೆ ತಾಲೂಕು ಕಚೇರಿಗೆ ಕರೆದುಕೊಂಡು ಬರುತ್ತೇನೆ. ನಾನು ಬರುತ್ತೇನೆ. ಸವಾಲು ಹಾಕುವವರು ಕೂಡ ಬರಲಿ. ಆಗ ಅರ್ಜಿದಾರರು ಯಾರ್ಯಾರು ಎಷ್ಟೆಷ್ಟು ಕೊಟ್ಟಿದ್ದಾರೆ ಎಂದು ಹೇಳುತ್ತಾರೆ. ಅವರು ಅಲ್ಲಿ ವಾದ ಮಾಡುವ ಅಗತ್ಯವಿಲ್ಲ. ತೆಗೆದುಕೊಂಡವರಿಗೆ ಎಷ್ಟೆಷ್ಟು ತೆಗೆದುಕೊಂಡಿದ್ದಾರೆ ಎಂಬುದು ಗೊತ್ತಿದೆ. ನಾನು ಮಾಧ್ಯಮದ ಮುಂದೆ ಅವರ ಹೆಸರು ಹೇಳಿ ವಿಚಾರ ತಿಳಿಸುವ ಅಗತ್ಯವಿಲ್ಲ. ಅವರಿಗೆ ಗೌರವ ಕೊಡುವ ಮಾಡುತ್ತೇನೆ. ಇನ್ನು ಹೆಚ್ಚು ಹೆಚ್ಚು ಹೇಳಿಕೆ ನೀಡಿದ್ದರೆ 47 ಅಲ್ಲ ಇನ್ನೂ ಒಂದಷ್ಟು ಜನ ಇದ್ದಾರೆ. 87 ಅರ್ಜಿದಾರರು ಇದ್ದಾರೆ. 6 ಲಕ್ಷ ರೂಪಾಯಿ ಕೊಟ್ಟವರೂ ಇದ್ದಾರೆ. ಇನ್ನೊಂದು ಸಲ ಕೆಣಕಿದರೆ ಒಂದೊಂದೆ ಹೆಸರು ಹೇಳುತ್ತೇನೆ. ಇವತ್ತು ರಿಯಾಯಿತಿ ಕೊಡುತ್ತೇನೆ. ಚಾಲೆಂಜ್ ಮಾಡಿದರೆ ಮುಂದಿನ ದಿನ ಅವರ ಮುಂದೆ ತಂದು ನಿಲ್ಲಿಸುತ್ತೇನೆ. ಅವರ ಜನ್ಮ ಜಾಲಾಡುವಾಗ ನಾನು ಕೂಡಾ ಜಾಲಾಡುತ್ತೇನೆ. ನಾವು ಮೊದಲು ಹೋಗುವುದಿಲ್ಲ. ಅವರು ಸುರು ಮಾಡಿದರೆ ನಾವು ಜನ್ಮ ಜಾಲಾಡಲಿಕ್ಕೆ ಸುರುಮಾಡುತ್ತೇವೆ ಎಂದು ಆರೋಪಕ್ಕೆ ಪ್ರತ್ಯುತ್ತ ನೀಡಿದ್ದಾರೆ.