ಪುತ್ತೂರು: ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಳಾರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಬೀದಿ ನಾಯಿಗಳನ್ನು ಸ್ಥಳಾಂತರಿಸಿ ಸೂಕ್ತ ಕ್ರಮ ವಹಿಸುವಂತೆ ಆಗ್ರಹಿಸಿ ಕಳಾರ 1ನೇ ವಾರ್ಡ್ನ ಗ್ರಾಮಸ್ಥರು ಸೆ.2ರಂದು ಕಡಬ ಪಟ್ಟಣ ಪಂಚಾಯತ್ಗೆ ಹಾಗೂ ಕಡಬ ಪಶು ಆಸ್ಪತ್ರೆ ವೈದ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಕಳಾರ 1ನೇ ವಾರ್ಡ್ನಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು ನಾಯಿಗಳ ಹಿಂಡು ಅಲ್ಲಲ್ಲಿ ಕಂಡು ಬರುತ್ತಿರುವುದರಿಂದ ವಿದ್ಯಾರ್ಥಿಗಳ ಮೇಲೆ ನಾಯಿಗಳ ಹಿಂಡು ದಾಳಿ ಮಾಡಿರುವ ಘಟನೆ ಕೂಡಾ ನಡೆದಿದೆ. ಮಕ್ಕಳು, ವೃದ್ಧರ ಮೇಲೆ ದಾಳಿ ಮಾಡುತ್ತಿದೆ, ಹಲವರಿಗೆ ಈಗಾಗಲೇ ಕಚ್ಚಿ ಗಾಯಗೊಳಿಸಿದ್ದು ಜನರು ಭಯದ ವಾತಾವರಣದಲ್ಲಿ ಕಾಲ ಕಳೆಯುವ ಸನ್ನಿವೇಶ ಉಂಟಾಗಿದೆ. ಹಾಗಾಗಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ.