ಆದರ್ಶ ಶಿಕ್ಷಕನೆಂಬ ಪರಿಕಲ್ಪನೆ

0

ಆದರ್ಶ ಎಂದರೆ ಮಾದರಿ. ಆದರ್ಶವಾದಿ ಎಂದರೆ ಗುರಿ ತಪ್ಪದೇ ನಡೆಯುವವ. ಆದರ್ಶ ಶಿಕ್ಷಕ ಎಂದರೆ ಆದರ್ಶವಾದಿಯಾದ, ಮೇಲ್ಪಂಕ್ತಿಯಾದ ಮಾದರಿ ಶಿಕ್ಷಕನಾಗಿರುವವನು. ಅಶಕ್ತ ಅಧ್ಯಾಪಕ ದೂರುತ್ತಾನೆ, ಸಾಮಾನ್ಯ ಅಧ್ಯಾಪಕ ವಿವರಿಸುತ್ತಾನೆ, ಉತ್ತಮ ಅಧ್ಯಾಪಕ ಬೇಧಿಸುತ್ತಾನೆ, ಮಹಾ ಅಧ್ಯಾಪಕ ಆದರ್ಶ ಶಿಕ್ಷಕ ಸ್ಪೂರ್ತಿಗೊಳಿಸುತ್ತಾನೆ. ಆದರೆ ಇಂದಿನ ಕಾಲದಲ್ಲಿ ಆದರ್ಶ ಶಿಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ. ವಿಷಯ ಜ್ಞಾನ ಕಡಿಮೆ, ಗಾಂಭೀರ್ಯ ಇಲ್ಲದ ನಡೆನುಡಿ, ಮಾನಸಿಕ ಹಿಂಸೆಯಿಂದ ಮಕ್ಕಳ ಸಾವು, ಆತ್ಮಹತ್ಯೆ, ಶಾಲೆ ಬಿಡುವುದು ಇದೆಲ್ಲಾ ಆದರ್ಶ ಶಿಕ್ಷಕನೆಂಬ ಕಲ್ಪನೆಯನ್ನು ದೂರ ಮಾಡಿದೆ.


“ಗುರುವ: ಬಹವೊ ಸಂತಿ ಶಿಷ್ಯವಿತ್ತಾಪಹಾರಕ : ‘ಗುರುವೇ ? ವಿರಲಾ ಸಂತಿ ಶಿಷ್ಯಚಿತ್ತಾಪಹಾರಕ:’ ಶಿಷ್ಯರ ಸಂಪತ್ತನ್ನು ಅಪಹರಿಸುವ ಗುರುಗಳ ಸಂಖ್ಯೆ ಹೆಚ್ಚಾಗಿದೆ, ಆದರೆ ಶಿಷ್ಯರ ಚಿತ್ತವನ್ನು ಅಪಹರಿಸುವ ಗುರುಗಳ ಸಂಖ್ಯೆ ಕಡಿಮೆಯಾಗಿದೆ. ಗುರು ಎಂಬ ದೈವಿಸತ್ವವನ್ನು ಗುರುಗಳು ಅಳವಡಿಸಿಕೊಳ್ಳಬೇಕು ಮತ್ತು ಮಕ್ಕಳು ಅರಿತುಕೊಳ್ಳಬೇಕು. ಏಕಲವ್ಯನಿಗೆ ದ್ರೋಣರ ಮೇಲಿನ ಭಕ್ತಿ, ವಿದ್ಯೆಯ ಆಸಕ್ತಿಯಿಂದ ಶಬ್ದವೇಧಿ ವಿದ್ಯೆಯನ್ನು ಕಲಿಯಲು ಸಾಧ್ಯವಾಯಿತು. ಜೈನ ಮತ್ತು ಬೌದ್ಧ ತತ್ವಚಿಂತಕರು ಸಹ ಅಧ್ಯಾಪಕರ ಬಗ್ಗೆ ಅತ್ಯಂತ ಗುರುತರ ಭಾವನೆಯನ್ನು ತಳೆದಿದ್ದರು. ಚೀನಾ ಯಾತ್ರಿಕ ಇಟ್ಸಿಂಗ್ ಉಲ್ಲೇಖಿಸಿರುವಂತೆ ಭಿಕ್ಷುವಾಗ ತಕ್ಕವರು ಹತ್ತು ವರ್ಷಗಳ ಕಾಲ ಸತತವಾಗಿ ಗುರುಗಳ ಮಾರ್ಗದರ್ಶನವನ್ನು ಪಡೆಯುತ್ತಿದ್ದರು.


ಒಂದು ಸಮಾರಂಭದಲ್ಲಿ ಗಣ್ಯರು ಹೇಳಿದರಂತೆ ” ನಿಮ್ಮ ಶಿಕ್ಷಕರನ್ನು ತೋರಿಸು, ದೇಶದ ಭವಿಷ್ಯ ಹೇಳುತ್ತೇನೆ ” ಇದರರ್ಥ, ಶಿಕ್ಷಕರು ರಾಷ್ಟ್ರ ನಿರ್ಮಾಪಕರು, ರಾಷ್ಟ್ರ ರಕ್ಷಕರು ಎಂದು ತಿಳಿಯಬಹುದು.
ಪುರಂದರದಾಸರು ‘ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’.ಎಂದು ಹೇಳಿದರು. ಕಬೀರ್ ದಾಸರು “ಇಡೀ ಭೂಮಿಯನ್ನು ಕಾಗದವನ್ನಾಗಿ ಮಾಡಿ, ಸಮಸ್ತ ಸಮುದ್ರವನ್ನು ಶಾಯಿಯಾಗಿ ಮಾಡಿದರು. ಗುರುವಿನ ಗುಣಗಾನ ಮಾಡಲು ಸಾಧ್ಯವಿಲ್ಲ”ಎಂದರು. ಜೊತೆಗೆ ಗೋವಿಗಿಂತ ಶ್ರೇಷ್ಠ ಎಂದರು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕರು ಆದರ್ಶ ಶಿಕ್ಷಕನಾಗಲೂ ಶ್ರಮಿಸಬೇಕು. ಸರ್ವೆಪಲ್ಲಿ ರಾಧಾಕೃಷ್ಣರಂತೆ ಆಗದಿದ್ದರೂ, ಅವರ ಬೆಳಕಿನಲ್ಲಿ ನಡೆಯುವಂತೆ ಆಗಬೇಕು.


ವಿದ್ಯಾರ್ಥಿಗಳಿಗೆ ಶಿಕ್ಷಕರೇ ಮಾದರಿ ಆಗಬೇಕು, ಗುರು – ಸರ್ವಶ್ರೇಷ್ಠ ಅನ್ನುವ ಅಂದಿನ ಸಂಸ್ಕೃತಿ ಮತ್ತೆ ವಿಲಾಸದಿಂದ ಮೆರೆಯಬೇಕು.
“ಗುರು ಮತ್ತು ಪರಮಾತ್ಮ ಸಮನಾಗಿ ನಿಂತಾಗ ಪ್ರಥಮ ವಂದನೆ ಗುರುವಿಗೆ ಸಲ್ಲಬೇಕು” ಎಂಬ ಕಬೀರರ ಮಾತಿಗೆ ಜೀವ ಸಿಗಬೇಕು.
ಬಂಧುಗಳು ಆದವರು ಬಂದುಂಡು ಹೋಗುವರು ಬಂಧನವ ಕಳೆಯಲರಿಯರು || ಗುರುವಿಂದ ಬಂಧುಗಳು ಉಂಟೆ ಸರ್ವಜ್ಞ|| ಸರ್ವಜ್ಞನ ಮಾತಿಗೆ ಬೆಲೆ ಸಿಗಬೇಕು. ಮಹಾತ್ಮ ಗಾಂಧೀಜಿ ಹೇಳಿದಂತೆ ” ಚಾರಿತ್ರ್ಯ ನಿರ್ಮಾಣ ಮಾಡಲು ಶಿಕ್ಷಕರು ಚರಿತ್ರಾರ್ಹರಾಗಿರಬೇಕು”.
“ಗುರು ಬ್ರಹ್ಮ ಗುರು ವಿಷ್ಣು, ಗುರುದೇವೋ ಮಹೇಶ್ವರ: ಗುರು ಸಾಕ್ಷತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮ: ಎಂಬ ಮಾತು ಸತ್ಯವಾಗಿ, ಪ್ರತಿಯೊಂದು ಹಂತದಲ್ಲೂ ಆದರ್ಶ ಶಿಕ್ಷಕ ಹುಟ್ಟಬೇಕು.

✍️ ಜಗದೀಶ್ ಬಾರಿಕೆ ವಳಾಲು, ಬಜತ್ತೂರು

LEAVE A REPLY

Please enter your comment!
Please enter your name here