ಪುತ್ತೂರು: ಕಡಬ ತಾಲೂಕಿನ ರಾಮಕುಂಜ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್ ಅವರು ಪ್ರೌಢಶಾಲಾ ವಿಭಾಗದಲ್ಲಿ 2024-25ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಸೆ.5ರಂದು ಬೆಂಗಳೂರಿನಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸತೀಶ್ ಭಟ್ ಅವರು ಕಳೆದ 36ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 11 ವರ್ಷಗಳಿಂದ ಮುಖ್ಯಶಿಕ್ಷಕರಾಗಿದ್ದಾರೆ. 1989 ಜೂ.1ರಂದು ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರಾಗಿ ಸೇವೆ ಆರಂಭಿಸಿದ್ದರು. ಇಲ್ಲಿ 22 ವರ್ಷ ಸೇವೆ ಸಲ್ಲಿಸಿ 2011ರಲ್ಲಿ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ವರ್ಗಾವಣೆಗೊಂಡು ಆಗಮಿಸಿದ್ದರು. ಇಲ್ಲಿ 2014ರಿಂದ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬೋಧಿಸುತ್ತಿರುವ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಪ್ರತಿ ವರ್ಷ ಶೇ.90ಕ್ಕಿಂತ ಹೆಚ್ಚು ಫಲಿತಾಂಶ ಬರುತ್ತಿದೆ. ಅಲ್ಲದೇ ಶಾಲಾ ಫಲಿತಾಂಶವೂ ಪ್ರತಿವರ್ಷ ಶೇ.90ಕ್ಕಿಂತ ಹೆಚ್ಚು ಬರುತ್ತಿದೆ. ಜಿಲ್ಲಾಮಟ್ಟದಲ್ಲಿ ಗಣಿತ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ನೂರಾರು ಕಾರ್ಯಾಗಾರಗಳಲ್ಲಿ ತರಬೇತಿ ನೀಡಿದ್ದಾರೆ. ಯೋಗ ಶಿಕ್ಷಕರಾಗಿ ಯೋಗ ತರಬೇತಿಯೂ ನೀಡುತ್ತಿದ್ದು ಇವರಿಂದ ಯೋಗ ಕಲಿತ ವಿದ್ಯಾರ್ಥಿಗಳು ಈಗ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಮುಖ್ಯಶಿಕ್ಷಕರಾಗಿರುವ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಕಲಿಕಾ ವಾತಾವರಣ ಉತ್ತೇಜಿಸುವುದಕ್ಕಾಗಿ ವಿಜ್ಞಾನ ಪ್ರಯೋಗಾಲಯ, ಗಣಿತ ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, ಭಾಷಾ ಪ್ರಯೋಗಾಲಯ ಆರಂಭಿಸಿದ್ದಾರೆ. ಟಿವಿ ಪ್ರೊಜೆಕ್ಟರ್ ಮೂಲಕ ವಿಶೇಷ ತರಗತಿ ಆರಂಭಿಸಿದ್ದಾರೆ. ಅಟಲ್ ಪ್ರಯೋಗಾಲಯ ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ರೊಬೊಟಿಕ್ ತರಬೇತಿಗಳನ್ನು ನೀಡಲಾಗುತ್ತಿದೆ. ಎನ್ಎಂಎಂಎಸ್, ಎನ್ಟಿಎಸ್ಇ ರಾಜ್ಯ ಸಂಪನ್ಮೂಲ ವ್ಯಕ್ತಿಯೂ ಆಗಿದ್ದು ಕಳೆದ 5 ವರ್ಷಗಳಲ್ಲಿ ರಾಮಕುಂಜ ಪ್ರೌಢಶಾಲೆಯಲ್ಲಿ ಇವರಿಂದ ತರಬೇತಿ ಪಡೆದುಕೊಂಡ 114 ವಿದ್ಯಾರ್ಥಿಗಳು ಎನ್ಎಂಎಂಎಸ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ. ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಂಪನ್ಮೂಲ ವ್ಯಕ್ತಿಯಾಗಿಯೂ ತರಬೇತಿ ನೀಡುತ್ತಿದ್ದಾರೆ. ಸಿಸ್ಕೋ, ಅರಿವು, ಡೆಲ್, ಒರೆಕಲ್, ಯೂತ್ಫಾರ್ ಸೇವಾ, ಪಿಡಬ್ಲ್ಯುಸಿ ಮತ್ತಿತರ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಶಾಲೆಗೆ ರೂ.1 ಕೋಟಿಗೂ ಹೆಚ್ಚು ವಿವಿಧ ಯೋಜನೆಗಳಿಗೆ ದೇಣಿಗೆ ತಂದು ಅನುಷ್ಠಾನಗೊಳಿಸಿದ್ದಾರೆ. ದಾನಿಗಳ ಸಹಾಯದಿಂದ 50 ಸಾವಿರ ರೂ.ವೆಚ್ಚದಲ್ಲಿ 10 ವಿದ್ಯಾರ್ಥಿಗಳಿಗೆ ಮೊಬೈಲ್, 10 ವಿದ್ಯಾರ್ಥಿಗಳಿಗೆ ಟ್ಯಾಬ್ ಒದಗಿಸಿಕೊಟ್ಟಿದ್ದಾರೆ. ಸತೀಶ್ ಭಟ್ ಅವರ ನಾಯಕತ್ವದಲ್ಲಿ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯು ಜಿಲ್ಲೆಯ ಅತ್ಯುತ್ತಮ ಶಾಲೆಯಾಗಿ ಗುರುತಿಸಿಕೊಂಡಿದ್ದು ನಿಟ್ಟೆ ವಿದ್ಯಾಸಂಸ್ಥೆಯವರು ಅತ್ಯುತ್ತಮ ಗ್ರಾಮೀಣ ಶಾಲೆ ದ್ವಿತೀಯ ಪ್ರಶಸ್ತಿಯೊಂದಿಗೆ 10 ಲಕ್ಷ ರೂ.ನಗದು ಬಹುಮಾನ ನೀಡಿ ಗೌರವಿಸಿದ್ದರು. ಶಿಕ್ಷಣ ಕ್ಷೇತ್ರಕ್ಕೆ ಸತೀಶ್ ಭಟ್ ಅವರು ಸಲ್ಲಿಸಿದ್ದ ಸೇವೆಗಾಗಿ 2017ರಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿತ್ತು.
ಶಿಕ್ಷಕ ವೃತ್ತಿಯ ಜೊತೆಗೆ ಜೆಸಿಐಯಲ್ಲೂ ತೊಡಗಿಕೊಂಡಿರುವ ಸತೀಶ್ ಭಟ್ ಅವರು ಜೆಸಿಐನ ರಾಷ್ಟ್ರೀಯ ತರಬೇತುದಾರರೂ ಆಗಿದ್ದು ರಾಜ್ಯದಾದ್ಯಂತ 3 ಸಾವಿರಕ್ಕೂ ಹೆಚ್ಚು ತರಬೇತಿ ನೀಡಿದ್ದಾರೆ. ವಿವಿಧ ಇಲಾಖೆಗಳ ನೌಕರರಿಗೆ ವ್ಯಕ್ತಿತ್ವ ವಿಕಸನ ತರಬೇತಿ ನೀಡುತ್ತಿದ್ದಾರೆ. 2018ರಲ್ಲಿ ಜೆಸಿಐಯಿಂದ ಅತ್ಯುತ್ತಮ ತರಬೇತುದಾರ ಪ್ರಶಸ್ತಿಯೂ ಲಭಿಸಿತ್ತು. ಇದರೊಂದಿಗೆ ಇತರೇ ಸಾಮಾಜಿಕ ಚಟುವಟಿಕೆಯಲ್ಲೂ ಗುರುತಿಸಿಕೊಂಡಿದ್ದಾರೆ.
ಮೂಲತ: ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಫಂಡಿಂಜೆ ದಿ| ಕೃಷ್ಣಭಟ್ ಹಾಗೂ ದಿ| ಅನುಸೂಯ ಭಟ್ ದಂಪತಿ ಪುತ್ರರಾದ ಸತೀಶ್ ಭಟ್ ಅವರು ಫಂಡಿಂಜೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಉಡುಪಿ ಎಸ್ಎಂಎಸ್ಪಿ ಹೈಸ್ಕೂಲ್ನಲ್ಲಿ ಪ್ರೌಢಶಿಕ್ಷಣ, ಉಡುಪಿ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ, ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಬಿ.ಎಸ್ಸಿ, ಮಂಗಳೂರಿನಲ್ಲಿ ಬಿ.ಎಡ್ ತರಬೇತಿ ಪಡೆದುಕೊಂಡಿದ್ದರು. ಯೋಗ ಹಾಗೂ ಕಂಪ್ಯೂಟರ್ ಸೈನ್ಸ್ನಲ್ಲಿ ಡಿಪ್ಲೋಮಾ ಪದವಿ ಪಡೆದುಕೊಂಡಿದ್ದಾರೆ. ಇವರು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಚೆಸ್ ಆಟಗಾರರೂ ಆಗಿದ್ದರು. ಪ್ರಸ್ತುತ ಪುತ್ತೂರು ಕೊಂಬೆಟ್ಟುನಲ್ಲಿ ವಾಸ್ತವ್ಯವಿರುವ ಸತೀಶ್ ಭಟ್ರವರ ಪತ್ನಿ ಸುಮನ ಪುತ್ತೂರಿನಲ್ಲಿ ಅಂಚೆ ಕಚೇರಿಯಲ್ಲಿ ಉದ್ಯೋಗಿಯಾಗಿದ್ದಾರೆ. ಮಗಳು ಸಹನ ಹಾಗೂ ಅಳಿಯ ರೋಹನ್ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ಗಳಾಗಿದ್ದಾರೆ.