ಪುತ್ತೂರು: ಲೋಕ ಪ್ರವಾದಿ ಮಹಮ್ಮದ್ ಪೈಗಂಬರ್ (ಸ.ಅ.) ರವರ 1500ನೇ ಜನ್ಮ ದಿನಾಚರಣೆ ಪ್ರಯುಕ್ತ ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರು ಹಾಗೂ ಈದ್ ಮಿಲಾದ್ ಸಮಿತಿ ಪುತ್ತೂರು ತಾಲೂಕು ಜಂಟಿ ಆಶ್ರಯದಲ್ಲಿ, 33ನೇ ವರ್ಷದ ಬೃಹತ್ ಮಿಲಾದ್ ಸಮಾವೇಶದ ಪ್ರಯುಕ್ತ ಆಕರ್ಷಕ ಕಾಲ್ನಡಿಗೆ ಜಾಥಾ ನಡೆಯಿತು. ದರ್ಬೆ ಪ್ರವಾಸಿ ಮಂದಿರದ ಬಳಿಯಿಂದ ಕಿಲ್ಲೆ ಮೈದಾನದವರೆಗೆ ನಡೆದ ಕಾಲ್ನಡಿಗೆ ಜಾಥಾದಲ್ಲಿ ಇಸ್ಲಾಮಿಕ್ ಸಾಂಸ್ಕೃತಿಕ ಕಲೆಗಳನ್ನು ಬಿಂಬಿಸುವ ಪ್ರದರ್ಶನ ಗಮನ ಸೆಳೆಯಿತು.
ಪ್ರಮುಖ ರಸ್ತೆಯಾಗಿ ಸಾಗಿದ ಕಾಲ್ನಡಿಗೆ ಜಾಥಾದಲ್ಲಿ ದಫ್ ಪ್ರದರ್ಶನಗಳು,ಸ್ಕೌಟ್ ಗೈಡ್ಸ್ ತಂಡ, ತಾಲೀಮು ತಂಡದವರಿಂದ ತಾಲೀಮು ಪ್ರದರ್ಶನ, ಇನ್ನಿತರ ಸಾಂಸ್ಕೃತಿಕ ಕಲೆಗಳ ಪ್ರದರ್ಶನ ನಡೆಯಿತು. ಹಿರಿಯ, ಕಿರಿಯರೆನ್ನದೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಮುಸಲ್ಮಾನ ಬಾಂದವರು ಜಾಥಾದಲ್ಲಿ ಪಾಲ್ಗೊಂಡರು.ಈಸ್ಟರ್ನ್ ಗ್ರೂಪ್ ಆಫ್ ಕಂಪೆನಿಯ ಮಾಲಕ ಖಲಂದರ್ ಈಸ್ಟರ್ನ್‌ರವರು ಬಿ.ಜಿ. ಕನ್ಸ್ಟ್ರಕ್ಷನ್ ಮಾಲಕ ಜುನ್ಯೆದ್ ರವರಿಗೆ ಧ್ವಜವನ್ನು ಹಸ್ತಾಂತರಿಸುವ ಮೂಲಕ ಕಾಲ್ನಡಿಗೆ ಜಾಥಾಕ್ಕೆ ದರ್ಬೆಯಲ್ಲಿ ಚಾಲನೆ ನೀಡಲಾಯಿತು.

ದ. ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ತಿನ ರಾಜ್ಯ ಸಂಚಾಲಕ ನ್ಯಾಯವಾದಿ ಎಂ.ಪಿ ಅಬೂಬಕ್ಕರ್, ಅಧ್ಯಕ್ಷ ಹಾಜಿ ಅಶ್ರಫ್ ಕಲ್ಲೇಗ, ಪುತ್ತೂರು ಅನ್ಸಾರುದ್ದೀನ್ ಜಮಾತ್ ಕಮಿಟಿಯ ಮಾಜಿ ಅಧ್ಯಕ್ಷ ಎಲ್. ಟಿ. ಅಬ್ದುಲ್ ರಜಾಕ್ ಹಾಜಿ, ಅನ್ಸಾರುದ್ದೀನ್ ಜಮಾತ್ ಕಮಿಟಿಯ ಖಜಾಂಚಿ ಹಸನ್ ಹಾಜಿ ಸಿಟಿ ಬಜಾರ್, ಪುತ್ತೂರು ತಾಲೂಕು ಈದ್ ಮಿಲಾದ್ ಸಮಿತಿ ಅಧ್ಯಕ್ಷ ಅಶ್ರಫ್ ಬಾವು ಪಡೀಲ್, ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಸಂಚಾಲಕ ನೂರುದ್ದೀನ್ ಸಾಲ್ಮರ .ಪ್ರಧಾನ ಕಾರ್ಯದರ್ಶಿ ನೌಶಾದ್ ಹಾಜಿ, ಈದ್ ಮಿಲಾದ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಶೀದ್ ಮುರ, ಕೋಶಾಧಿಕಾರಿ ಹನೀಫ್ ಬಗ್ಗುಮೂಲೆ, ಹಾಗೂ ದ.ಕ. ಮುಸ್ಲಿಂ ಯುವಜನ ಪರಿಷತ್ತಿನ ಸದಸ್ಯರು ಹಾಗೂ ಈದ್ ಮಿಲಾದ್ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ವಿವಿಧ ತಂಡಗಳ ದಫ್ ಪ್ರದರ್ಶನದೊಂದಿಗೆ ಪುತ್ತೂರು ಮುಖ್ಯ ರಸ್ತೆಯಾಗಿ ಕಿಲ್ಲೆ ಮೈದಾನದವರೆಗೆ ನಡೆದ ಜಾಥಾದಲ್ಲಿ ವಿವಿಧ ಕಡೆಗಳಿಂದ ಬಂದಿದ್ದ ಸಾವಿರಾರು ಮಂದಿ ಭಾಗಿಯಾಗಿದ್ದರು.
ಪ್ರವಾದಿ ಮುಹಮ್ಮದ್ ಪೈಗಂಬರ್‌ರವರ ಕೀರ್ತನ, ಮದ್‌ಹ್ ಗಾನ, ಸ್ವಲಾತ್, ಜಾಥಾದುದ್ದಕ್ಕೂ ಮೊಳಗಿತು. ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಮಂದಿ ರಸ್ತೆಯ ಎರಡೂ ಬದಿಯಲ್ಲಿ ಸೇರಿ ಜಾಥಾವನ್ನು ಕಣ್ತುಂಬಿಕೊಂಡರು.

ಕೃಷ್ಣಪ್ರಸಾದ್ ಆಳ್ವರವರಿಂದ ಸ್ವಾಗತ:
ಮಿಲಾದ್ ಜಾಥಾವು ಕಾಂಗ್ರೆಸ್ ಕಚೇರಿ ಬಳಿ ಬಂದಾಗ ಅದರ ಪದಾಽಕಾರಿಗಳಿಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ರವರು ಹಸ್ತಲಾಘವ ಮಾಡುವ ಮೂಲಕ ಜಾಥಾವನ್ನು ಸ್ವಾಗತಿಸಿದರು.
33ನೇ ವರ್ಷದ ಬೃಹತ್ ಮಿಲಾದ್ ಸಮಾವೇಶದ ಅಂಗವಾಗಿ ದರ್ಬೆ ಪ್ರವಾಸಿ ಮಂದಿರದ ಬಳಿಯಿಂದ ನಡೆದ ಕಾಲ್ನಡಿಗೆ ಜಾಥಾ ನಿರೀಕ್ಷೆ ಮೀರಿ ಯಶಸ್ಸು ಕಂಡಿದೆ ವಿವಿಧ ಕಡೆಗಳಿಂದ ಸಾವಿರಾರು ಮಂದಿ ಭಾಗವಹಿಸಿ ಜಾಥಾ ಸುಸೂತ್ರವಾಗಿ ನಡೆಯುವಂತೆ ಮಾಡಿದ್ದು ಖುಷಿ ತಂದಿದೆ ಇದಕ್ಕಾಗಿ ಮುಸ್ಲಿಂ ಯುವಜನ ಪರಿಷತ್ ಹಾಗೂ ಈದ್ ಮೀಲಾದ್ ಸಮಿತಿಯವರಿಗೆ ಹಾಗೂ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವುದಾಗಿ ದ.ಕ. ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ತಿನ ಅಧ್ಯಕ್ಷ ಅಶ್ರಫ್ ಕಲ್ಲೇಗರವರು ತಿಳಿಸಿದ್ದಾರೆ.

ಪೊಲೀಸ್ ಬಂದೋಬಸ್ತ್:
ಯಾವುದೇ ಅಹಿತಕರ ಘಟನೆ ನಡೆಯದಂತೆ ಪುತ್ತೂರು ನಗರ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಆಂಜನೇಯ ರೆಡ್ಡಿ ಯವರ ನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಕಣ್ಮನ ಸೆಳೆದ ದಫ್ ಪ್ರದರ್ಶನ
ದರ್ಬೆಯಿಂದ ಪುತ್ತೂರು ಮುಖ್ಯರಸ್ತೆಯಾಗಿ ಸಾಗಿದ ಕಾಲ್ನಡಿಗೆ ಜಾಥಾದಲ್ಲಿ ವಿವಿಧ ತಂಡಗಳ ದಫ್ ಪ್ರದರ್ಶನ ಎಲ್ಲರ ಗಮನ ಸೆಳೆಯಿತು ವಿವಿಧ ದಫ್ ತಂಡಗಳು, ಸ್ಕೌಟ್ ತಂಡಗಳು, ಫ್ಲವರ್ ಶೋ ತಂಡ ವಿವಿಧ ಬಣ್ಣಗಳ ಸಮವಸಗಳೊಂದಿಗೆ ಜಾಥಾದುದ್ದಕ್ಕೂ ದಫ್ ಪ್ರದರ್ಶನ ನೀಡುತ್ತಲೇ ಸಾಗಿ ಬಂದದ್ದು ವಿಶೇಷವಾಗಿತ್ತು. ಪೊಲೀಸರ ಜೊತೆ ಮುಸ್ಲಿಂ ಯುವಜನ ಪರಿಷತ್ ಪದಾಧಿಕಾರಿಗಳು ಹಾಗೂ ಮೀಲಾದ್ ಸಮಿತಿಯ ಪದಾಽಕಾರಿಗಳು ಮುಂಚೂಣಿಯಲ್ಲಿ ನಿಂತು ಜಾಥಾ ಸುಸೂತ್ರವಾಗಿ ಸಾಗುವಂತೆ ಮಾಡುವಲ್ಲಿ ಯಶಸ್ವಿಯಾದರು.