ವಿಟ್ಲ: ಗ್ರಾಮೀಣ ಭಾಗದ ಜನರಿಗೆ ಬ್ಯಾಂಕಿಂಗ್ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ದೇಶ ವ್ಯಾಪಿ ಎಲ್ಲಾ ಪಂಚಾಯತ್ ಮಟ್ಟದಲ್ಲಿ ನಡೆಯುತ್ತಿರುವ 3 ತಿಂಗಳ ಹಣಕಾಸು ಆರ್ಥಿಕ ಸೇರ್ಪಡೆ ಅಭಿಯಾನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಲೀಡ್ ಬ್ಯಾಂಕ್, ಆರ್ಥಿಕ ಸಾಕ್ಷರತಾ ಕೇಂದ್ರ ಬಂಟ್ವಾಳ, ಕೆನರಾ ಬ್ಯಾಂಕ್ ಸಾಲೆತ್ತೂರು ಮತ್ತು ಕೆನರಾ ಬ್ಯಾಂಕ್ ವಿಟ್ಲ ಶಾಖೆ ವತಿಯಿಂದ ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜನ ಸುರಕ್ಷಾ ಕಾರ್ಯಕ್ರಮ ನಡೆಯಿತು.
ಹಣಕಾಸು ಸೇವೆಗಳ ಇಲಾಖೆ (D.F.S) ಡೈರೆಕ್ಟರ್ ಶ್ವೇತ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಗ್ರಾ.ಪಂ ಅಧ್ಯಕ್ಷ ಜಯಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಆರ್ಥಿಕ ಸಾಕ್ಷರತಾ ಕೇಂದ್ರದ ಹಿರಿಯ ಸಮಾಲೋಚಕಿ ಅನುಷ ಎಸ್. , ಕೆನರಾ ಬ್ಯಾಂಕ್ ನ ಮಂಗಳೂರು ಸರ್ಕಲ್ ಆಫೀಸ್ ಎಜಿಎಂ ಸಬಲ್ ಎಸ್ ಕೆ, ಡಿ ಎಂ ರಾಜ್ ಕುಮಾರ್, ಕೆನರಾ ಬ್ಯಾಂಕ್ ಪುತ್ತೂರು ಪ್ರಾದೇಶಿಕ ಕಛೇರಿ ಡಿಎಂ ಅಜಿತ್ ಕುಮಾರ್, ಸೀನಿಯರ್ ಮ್ಯಾನೇಜರ್ ಹರೀಶ್ ನಾಯ್ಕ್, ಆಫೀಸರ್ ಅರ್ನಬ್ ರಾಯ್, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೇಮಲತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಶೈಲ ಡೋಣುರ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯ ಕೆನರಾ ಬ್ಯಾಂಕ್ ಸಾಲೆತ್ತೂರು ಫಲಾನುಭವಿ ಪುಷ್ಪಾವತಿ ಲರವರಿಗೆ 2 ಲಕ್ಷ ರೂಪಾಯಿಗಳ ಚೆಕ್ ಅನ್ನು ಹಸ್ತಾಂತರಿಸಲಾಯಿತು. ಮದರ್ ಗ್ರಾಮೀಣ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಸಿ. ಎಫ್.ಎಲ್ ಸಚಿನ್ ಇವರು ಬ್ಯಾಂಕಿಂಗ್ ಕುರಿತಾದ ಕ್ವಿಜ್ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ಸ್ಥಳದಲ್ಲಿಯೇ ಸಾಮಾಜಿಕ ಭದ್ರತಾ ಯೋಜನೆಗಳ ನೋಂದಣಿ ಕಾರ್ಯಾಗಾರ ನಡೆಸಲಾಯಿತು. ಕೆನರಾ ಬ್ಯಾಂಕ್ ಸಾಲೆತ್ತೂರು ಶಾಖಾ ವ್ಯವಸ್ಥಾಪಕರಾದ ಪ್ರೇಮ್ ಶೆಟ್ಟಿ ವಂದಿಸಿದರು.