ಪುತ್ತೂರು: ಕಬಡ್ಡಿ ಪಂದ್ಯಾಟದಲ್ಲಿ ಕಳೆದ ಎರಡು ವರ್ಷಗಳಿಂದ ರಾಷ್ಟ್ರ ಮಟ್ಟದಲ್ಲಿ ಪುತ್ತೂರಿನ ಕೀರ್ತಿ ಪಸರಿಸಿದ ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲೆಯಲ್ಲಿ ಸೆ.9ರಂದು ನಡೆಯಲಿರುವ ಈ ಶೈಕ್ಷಣಿಕ ಸಾಲಿನ 14ರ ವಯೋಮಾನದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ ಅದ್ದೂರಿ ಚಾಲನೆ ದೊರೆತಿದೆ.
ಪ್ರೊ. ಮಾದರಿಯ ಮ್ಯಾಟ್ ಅಂಕಣದಲ್ಲಿ ನಡೆಯುವ ಕಬಡ್ಡಿ ಪಂದ್ಯಾಟಕ್ಕೆ ಅಕ್ಷಯ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಜಯಂತ ನಡುಬೈಲು ದೀಪ ಬೆಳಗಿಸಿ ಉದ್ಘಾಟಿಸಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ತೆಂಗಿನಕಾಯಿ ಒಡೆದು ಅಂಕಣ ಉದ್ಘಾಟಿಸಿದರು.

20 ತಂಡಗಳು ಭಾಗಿ:
ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಐದು ವಲಯಗಳ ಬಾಲಕರ ಹಾಗೂ ಬಾಲತಿಯರ ತಲಾ 10 ತಂಡಗಳು ಸೇರಿ 20 ಬಲಿಷ್ಠ ತಂಡಗಳು ಪಂದ್ಯಾಟದಲ್ಲಿ ಸೆಣಸಾಡಲಿವೆ. ವಿಜೇತ ತಂಡಗಳಿಗೆ ಮೂರು ಅಡಿ ಎತ್ತರದ ಆಕರ್ಷಕ ಟ್ರೋಫಿ ನೀಡಲಾಗುತ್ತಿದೆ. ಪಂದ್ಯಾಟದಲ್ಲಿ ರಾಜ್ಯಮಟ್ಟದ ತೀರ್ಪುಗಾರರು ಪಂದ್ಯಾಟದ ತೀರ್ಪು ನೀಡಲಿದ್ದಾರೆ.
ವೀಕ್ಷಣೆಗೆ ಗ್ಯಾಲರಿ ವ್ಯವಸ್ಥೆ:
ವಿಶಾಲವಾದ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಬಡ್ಡಿ ಪಂದ್ಯಾಟದ ವೀಕ್ಷಣೆಗೆ ಅನುಕೂಲವಾಗುವಂತೆ ಗ್ಯಾಲರಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸುಮಾರು 5000 ಮಂದಿ ಕುಳಿತು ಪಂದ್ಯಾಟವನ್ನು ವೀಕ್ಷಿಸಬಹುದಾಗಿದೆ.
ಪಂದ್ಯಾಟಕ್ಕೆ 5000 ಚದರ ಅಡಿ ವಿಸ್ತೀರ್ಣದ ವಿಶಾಲ ಕ್ರೀಡಾಂಗಣ, ಮ್ಯಾಟ್ ಅಂಕಣಗಳು, ಮಳೆಯಿಂದ ತಪ್ಪಿಸಿಕೊಳ್ಳಲು ವಿಶಾಲವಾದ ಛಾವಣಿಗಳ ನಿರ್ಮಾಣ, 60 ಚದರ ಅಡಿ ಉದ್ದದ ಸುಸಜ್ಜಿತ ವೇದಿಕೆಗಳು, ಪಂದ್ಯಾಟದ ಯಶಸ್ವಿಗಾಗಿ ಉಪ ಸಮಿತಿಗಳನ್ನು ರಚಿಸಿಕೊಂಡು ಎಲ್ಲಾ ಪೂರ್ವ ತಯಾರಿಗಳನ್ನು ಮಾಡಿಕೊಂಡಿದ್ದು ಕ್ರೀಡಾಭಿಮಾನಿಗಳನ್ನು ಕೈಬೀಸಿ ಕರೆಯುತ್ತಿದೆ.