ಪರ್ಪುಂಜ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

ವ್ಯವಹಾರ ರೂ.1ಕೋಟಿ 69 ಲಕ್ಷ, ನಿವ್ವಳ ಲಾಭ ರೂ.95 ಸಾವಿರ, ಶೇ.10 ಡಿವಿಡೆಂಡ್, ಬೋನಸ್ ಲೀ.47 ಪೈಸೆ

ಪುತ್ತೂರು: ಪರ್ಪುಂಜ ಹಾಲು ಉತ್ಪಾದಕರ ಸಹಕಾರ ಸಂಘದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರ ಅಧ್ಯಕ್ಷತೆಯಲ್ಲಿ ಸೆ.9 ರಂದು ಸಂಘದ ವಠಾರದ ರಾಜ್ ಕಾಂಪ್ಲೆಕ್ಸ್ನಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ಮಾತನಾಡಿ, ಸಂಘವು ವರದಿ ವರ್ಷದಲ್ಲಿ 1ಕೋಟಿ 69 ಲಕ್ಷ 92 ಸಾವಿರದ 333 ರೂಪಾಯಿಗಳ ವ್ಯವಹಾರ ನಡೆಸಿ 95 ಸಾವಿರದ 702 ರೂಪಾಯಗಳ ನಿವ್ವಳ ಲಾಭ ಗಳಿಸಿಕೊಂಡಿದೆ. ಇದರಲ್ಲಿ ಸದಸ್ಯರಿಗೆ ಶೇ.10 ರಂತೆ ಡಿವಿಡೆಂಡ್ ನೀಡಿ ಲೀಟರ್ ಹಾಲಿಗೆ 47 ಪೈಸೆ ಬೋನಸ್ ನೀಡಲಾಗುವುದು ಎಂದು ತಿಳಿಸಿದರು. ಸಂಘದ ಕಾರ್ಯದರ್ಶಿ ಸರೋಜ ಆರ್.ಶೆಟ್ಟಿಯವರು 2024-25 ನೇ ನಿವ್ವಳ ಲಾಭ ವಿಲೇವಾರು ಮತ್ತು ವಿತರಣೆಯ ಬಗ್ಗೆ ವರದಿ ಮಂಡಿಸಿದರು. ನಿರ್ದೇಶಕ ಡಿಂಬ್ರಿ ಜೈರಾಜ್ ಭಂಡಾರಿಯವರು, 2024-25 ನೇ ಸಾಲಿನ ವಾರ್ಷಿಕ ವರದಿಯನ್ನು ಸಭೆಯ ಮುಂದಿಟ್ಟರು. ಸಂಘವು ವರದಿ ವರ್ಷದಲ್ಲಿ ಹಾಲು ಉತ್ಪಾದಕ ಸದಸ್ಯರಿಂದ ರೂ.3555689.35 ಮೌಲ್ಯದ 98120.0 ಲೀಟರ್ ಹಾಲನ್ನು ಖರೀದಿಸಿ ಅದರಲ್ಲಿ ರೂ.3408261.92 ಮೌಲ್ಯದ 90448.8 ಲೀಟರ್ ಹಾಲನ್ನು ದ.ಕ.ಹಾಲು ಒಕ್ಕೂಟಕ್ಕೆ ಹಾಗೂ ರೂ. 576850.00 ಮೌಲ್ಯದ 11537.0 ಲೀಟರ್ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಿರುತ್ತದೆ.


ಸಂಘವೂ 2024-25 ನೇ ಸಾಲಿನಲ್ಲಿ 484 ಚೀಲ ಪಶು ಆಹಾರ ಮಾರಾಟ, 710 ಕೆಜಿ ಲವಣ ಮಿಶ್ರಣ ಮಾರಾಟ, ಸಮೃದ್ಧಿ ಮಾರಾಟ, ಹಾಗೂ ಕರುಗಳ ಹಿಂಡಿ ಮಾರಾಟ ಒಟ್ಟು ವ್ಯಾಪಾರ ಲಾಭ ರೂ. 15,650/-ಮಾಡಿರುತ್ತದೆ. ಹಾಲು ಮಾರಾಟದಲ್ಲಿ ರೂ 4,54,309.57 ಪೈಸೆ ಲಾಭ ಬಂದಿರುತ್ತದೆ ಎಂದು ತಿಳಿಸಿದರು. ಸಂಘವು ವರದಿ ವರ್ಷದಲ್ಲಿ ಹಾಲು ವ್ಯಾಪಾರ ಹಾಗೂ ಪಶು ಆಹಾರ ವ್ಯಾಪಾರದಲ್ಲಿ ಹಾಗೂ ಇತರ ಆದಾಯ ಸೇರಿ ರೂ 5,59,772.84/-ಲಾಭ ಗಳಿಸಿ ಇದರಲ್ಲಿ ಆಡಳಿತ ವೆಚ್ಚಮತ್ತು ಇತರ ಖರ್ಚು ರೂ. 4,64,069.93/-ಕಳೆದು ನಿವ್ವಳ ಲಾಭ ರೂ 95,702.91/- ಗಳಿಸುವ ಮೂಲಕ ಸಂಘವು ವರದಿ ವರ್ಷದಲ್ಲಿ ಎ ಗ್ರೇಡ್ ಹೊಂದಿರುತ್ತದೆ ಎಂದು ತಿಳಿಸಿದರು.

2024-25ನೇ ಸಾಲಿನಲ್ಲಿ ನಮ್ಮ ಸಂಘದಲ್ಲಿ ಒಕ್ಕೂಟದಿಂದ ತರಿಸಿದ ಜಂತು ಹುಳದ ಮಾತ್ರೆಗಳನ್ನು ಸದಸ್ಯರ ಜಾನುವಾರುಗಳಿಗೆ ಉಚಿತವಾಗಿ ವಿತರಿಸಲಾಗಿದೆ. ಸಂಘದ ಸದಸ್ಯರ 51 ಜಾನುವಾರುಗಳಿಗೆ ಒಕ್ಕೂಟದ ಜಾನುವಾರು ವಿಮಾ ಯೋಜನೆಯಲ್ಲಿ ಸಂಘದ ವತಿಯಿಂದ ಉಚಿತವಾಗಿ ಇನ್ಸೂರೆನ್ಸ್ ಮಾಡಿಕೊಡಲಾಗಿದೆ. ಸರಕಾರದ ಯಶಸ್ವಿನಿ ಆರೋಗ್ಯ ಯೋಜನೆಯನ್ನು ಸಂಘದ ವತಿಯಿಂದ ಸದಸ್ಯರಿಗೆ 13 ಯಶಸ್ವಿನಿ ಕಾರ್ಡ್ ನೀಡಲಾಗಿದೆ. ಸಂಘದ ಸದಸ್ಯರ 13ಹೆಣ್ಣು ಕರುಗಳಿಗೆ ಒಕ್ಕೂಟದ ಹೆಣ್ಣು ಕರು ಸಾಕಾಣಿಕಾ ಯೋಜನೆಯ ಸವಲತ್ತನ್ನು ಮಾಡಿ ಕೊಡಲಾಗಿದೆ. ಸಂಘದ ಸದಸ್ಯರಾದ ವಿನಯ್ ಕುಮಾರ್ ಮತ್ತು ವೀರಪ್ಪ ಮೂಲ್ಯ ಇವರಿಗೆ ಒಕ್ಕೂಟದ ಯೋಜನೆಯಲ್ಲಿ ರಬ್ಬರ್ ಮ್ಯಾಟ್ ಖರೀದಿಗೆ ಮತ್ತು ಹಸಿರು ಮೇವಿನ ತಾಕು ನಿರ್ಮಿಸಲು ಅನುದಾನವನ್ನು ಸಂಘದ ವತಿಯಿಂದ ಮಾಡಿಕೊಡಲಾಗಿದೆ. ಮತ್ತು ಸಂಘದ ಸದಸ್ಯ ಕಿಶೋರ್ ಕುಮಾರ್ ಇವರಿಗೆ ಹುಲ್ಲು ಕತ್ತರಿಸುವ ಯಂತ್ರ ಹಟ್ಟಿ ತೊಳೆಯುವ ಯಂತ್ರ ಹಾಲು ಕರೆಯುವ ಯಂತ್ರ ಖರೀದಿಗೆ ಒಕ್ಕೂಟದಿಂದ ಅನುದಾನ ದೊರೆತಿದೆ ಎಂದು ನಿರ್ದೇಶಕ ಜೈರಾಜ್ ಭಂಡಾರಿ ವರದಿ ಮಂಡಿಸುತ್ತಾ ತಿಳಿಸಿದರು.


ಅತೀ ಹೆಚ್ಚು ಹಾಲು ಹಾಕಿದವರಿಗೆ ಬಹುಮಾನ
ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ ಸದಸ್ಯರಲ್ಲಿ ಪ್ರಥಮ ಬಹುಮಾನವನ್ನು ವಿನಯ ಕುಮಾರ್ ರೈ ಹಾಗೂ ದ್ವಿತೀಯ ಬಹುಮಾನವನ್ನು ಕಿಶೋರ್ ಕುಮಾರ್‌ರವರು ಪಡೆದುಕೊಂಡರು. ಉಳಿದಂತೆ ಅತೀ ಹೆಚ್ಚು ಹಾಲು ಹಾಕಿದ ಸದಸ್ಯರುಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಯಿತು.


ಅವಕಾಶವಿದ್ದರೂ ಹಸು ಸಾಕುವವರು ಕಡಿಮೆಯಾಗುತ್ತಿದ್ದಾರೆ: ವಿಸ್ತರಣಾಧಿಕಾರಿ ಶ್ರೀದೇವಿ
ಮುಖ್ಯ ಅತಿಥಿಯಾಗಿದ್ದ ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಶ್ರೀದೇವಿಯವರು ಮಾಹಿತಿ ನೀಡುತ್ತಾ, ಹೈನುಗಾರಿಕೆಗೆ ಒಕ್ಕೂಟದಿಂದ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದೆ ಆದರೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಅವಕಾಶವಿದ್ದರೂ ಹಸು ಸಾಕುವವರು ಕಡಿಮೆಯಾಗುತ್ತಿದ್ದಾರೆ ಇದರಿಂದ ಹಾಲಿನ ಸಂಗ್ರಹದಲ್ಲೂ ಏರಿಳಿತ ಕಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಯುವ ಜನಾಂಗ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಅವರು ತಿಳಿಸಿದರು. ಸಂಘದ ಅಭಿವೃದ್ದಿ ಬಗ್ಗೆ ಸಲಹೆ ನೀಡಿದ ಅವರು,ಕಲಬೆರಕೆ ಇಲ್ಲದೆ ಹಾಲನ್ನು ಸಂಘಕ್ಕೆ ಕೊಡ ಅದೇ ರೀತಿ ಸಂಘದಿಂದಲೇ ಪಶು ಆಹಾರಗಳನ್ನು ಖರೀದಿ ಮಾಡಿ ಇದರಿಂದ ಸಂಘಕ್ಕೆ ಹೆಚ್ಚಿನ ಆದಾಯ ಬರಲು ಸಾಧ್ಯವಿದೆ ಹೆಚ್ಚು ಆದಾಯ ಬಂದರೆ ಸದಸ್ಯರಿಗೂ ಹೆಚ್ಚು ಲಾಭ ಸಿಗಲು ಸಾಧ್ಯ ಎಂದರು. ಒಕ್ಕೂಟದ ನಂದಿನಿ ಪಶು ಆಹಾರವನ್ನೇ ಖರೀದಿಸಿ ಏಕೆಂದರೆ ಇದರಲ್ಲಿ ಶೇ.20 ಪ್ರೊಟೀನ್ ಅಂಶವಿದೆ. ಉಳಿದ ಖಾಸಗಿ ಪಶು ಆಹಾರಗಳು ಕೆಲವು ದಿನ ಒಳ್ಳೆಯ ಹಾಲನ್ನು ಕೊಡಬಹುದು ಮುಂದೆ ಹಾಲಿನ ಪ್ರಮಾಣ ಸೇರಿದಂತೆ ಹಸುಗಳಿಗೆ ವಿವಿಧ ರೀತಿಯ ತೊಂದರೆಗಳು ಇದರಿಂದ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದರು.


ಹೈನುಗಾರಿಕೆಯಲ್ಲಿ ಯುವಕರು ಮುಂದೆ ಬರಬೇಕಾಗಿದೆ: ಬೂಡಿಯಾರ್ ರಾಧಾಕೃಷ್ಣ ರೈ
ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ಮಾತನಾಡಿ, ಹೈನುಗಾರಿಕೆ ಮಾಡುವುದರಿಂದ ಕೇವಲ ಹಾಲಿನಲ್ಲಿ ಮಾತ್ರವಲ್ಲ ಇತರ ಮೂಲಗಳಿಂದಲೂ ಲಾಭವನ್ನು ಪಡೆಯಬಹುದಾಗಿದೆ. ಇಂದಿನ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿಕೊಂಡು ಹೈನುಗಾರಿಕೆ ಮಾಡುವುದು ಅತೀ ಮುಖ್ಯ ಎಂದ ಅವರು ಯುವಕರು ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು. ಅತೀ ಕಡಿಮೆ ಜಾಗದಲ್ಲೂ ಹೈನುಗಾರಿಕೆ ಮಾಡಲು ಸಾಧ್ಯವಿದೆ. ಇದಕ್ಕೆ ತರಬೇತಿ ಮುಖ್ಯ. ಪ್ರಸ್ತುತ ಒಕ್ಕೂಟದಿಂದ ಬರುವ ಪಶು ಆಹಾರ ಕೂಡ ಬಹಳ ಒಳ್ಳೆದು ಇದೆ. ಸಂಘ ಉಳಿಯಬೇಕಾದರೆ ಹಾಲು ಸಂಗ್ರಹಣೆ ಜಾಸ್ತಿಯಾಗಬೇಕು. ವರ್ಷದಿಂದ ವರ್ಷಕ್ಕೆ ಸಂಘಕ್ಕೆ ಬರುವ ಹಾಲಿನ ಪ್ರಮಾಣ ಕಡಿಮೆಯಾಗುತ್ತಿದೆ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಂಘವನ್ನು ಉಳಿಸಿಕೊಳ್ಳಲು ಕೂಡ ಕಷ್ಟವಿದೆ ಎಂದು ಬೂಡಿಯಾರ್ ರಾಧಾಕೃಷ್ಣ ರೈ ಹೇಳಿದರು.ಹೊಸತಾಗಿ ಹೈನುಗಾರಿಕೆ ಆರಂಭಿಸುವವರಿಗೆ ಸಂಘ ಹಾಗೆ ಒಕ್ಕೂಟದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಸುಧಾಕರ ಆಳ್ವ ಕಲ್ಲಡ್ಕರವರು ಸಾಮಾನ್ಯ ಸಭೆಯ ನೋಟೀಸನ್ನು ಓದಿ ದಾಖಲಿಸಿಕೊಂಡರು. ವೇದಿಕೆಯಲ್ಲಿ ನಿರ್ದೇಶಕರುಗಳಾದ ನಾರಾಯಣ ರೈ ಬಾರಿಕೆ, ಪ್ರೇಮ್‌ರಾಜ್ ರೈ ಪರ್ಪುಂಜ, ರಾಮಣ್ಣ ಗೌಡ ಪರನೀರು, ವೀರಪ್ಪ ಮೂಲ್ಯ ಬೈರಮೂಲೆ, ಕಸ್ತೂರಿ ಟಿ.ಶೆಟ್ಟಿ ಕೂರೇಲು ಉಪಸ್ಥಿತರಿದ್ದರು. ನಿರ್ದೇಶಕಿ ಶರಣಾಕ್ಷಿ ಆಳ್ವ ಕುರಿಯ ಪ್ರಾರ್ಥಿಸಿದರು. ನಿರ್ದೇಶಕ ಶ್ಯಾಮ್‌ಸುಂದರ ರೈ ಕೊಪ್ಪಳ ಸ್ವಾಗತಿಸಿದರು. ನಿರ್ದೇಶಕ ಮಿತ್ರದಾಸ ರೈ ಡೆಕ್ಕಳ ವಂದಿಸಿದರು. ಹಾಲು ಪರೀಕ್ಷಕಿ ಕೆ.ಶ್ರೀಮತಿ ಸಹಕರಿಸಿದ್ದರು.

ಈರೋಡ್ ಹಸುಗಳನ್ನು ಸಾಕಿ
ಇತ್ತೀಚಿನ ದಿನಗಳಲ್ಲಿ ಈರೋಡ್ ಹಸುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇವುಗಳು ಹೆಚ್ಚು ಹಾಲನ್ನು ಕೂಡ ಕೊಡಬಲ್ಲವು ಈಗಾಗಲೇ ಕೋಲಾರ, ಹಾಸನ ಹಸುಗಳ ಸಾಕಾಣಿಕೆಯಲ್ಲಿ ಹಿಂದೆ ಬಿದ್ದಿವೆ ಆದ್ದರಿಂದ ರೈತರು ಈರೋಡ್ ಹಸುಗಳನ್ನು ಖರೀದಿಸಿ ಹೆಚ್ಚಿನ ಲಾಭ ಗಳಿಸಿ ಎಂದು ವಿಸ್ತರಣಾಧಿಕಾರಿ ಶ್ರೀದೇವಿ ಸಲಹೆ ನೀಡಿದರು. ಕಡಿಮೆ ಜಾಗದಲ್ಲೂ ಉತ್ತಮ ರೀತಿಯ ಹೈನುಗಾರಿಕೆ ಬಗ್ಗೆ ಮನೆಗೆ ಬಂದು ಮಾಹಿತಿ ನೀಡಲಿದ್ದೇವೆ. ಆಸಕ್ತಿ ಇದ್ದವರು ಸಂಘದಲ್ಲಿ ಹೆಸರನ್ನು ನೋಂದಾಯಿಸುವಂತೆ ಕೇಳಿಕೊಂಡರು.

ಸಂಘದ ಕಛೇರಿ ಕಟ್ಟಡಕ್ಕೆ ಜಾಗ ಬೇಕಾಗಿದೆ.
ಪರ್ಪುಂಜ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸ್ವಂತ ಕಟ್ಟಡದ ಅಗತ್ಯತೆ ಇದ್ದು ಈ ಬಗ್ಗೆ ಕಳೆದ ಹಲವು ವರ್ಷಗಳಿಂದ ಜಾಗಕ್ಕೆ ಮನವಿ ಮಾಡಿಕೊಂಡೆ ಬಂದಿದ್ದೇವೆ. ಸಂಘದ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಜಾಗವಿದ್ದರೆ ಸಂಘಕ್ಕೆ ತಿಳಿಸಿ ಖರೀದಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮನವಿ ಮಾಡಿಕೊಂಡರು.

LEAVE A REPLY

Please enter your comment!
Please enter your name here