ಪೆರುವಾಯಿ ಗ್ರಾ.ಪಂ ಅಧ್ಯಕ್ಷರ ಲಂಚ ಪ್ರಕರಣ ಹಿನ್ನೆಲೆ – ಕಾಂಗ್ರೆಸ್ ಪಕ್ಷದಿಂದ ವಜಾಮಾಡಿ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಜೆಪಿ ಆಗ್ರಹ

0

ಪುತ್ತೂರು: ಲಂಚ ಪ್ರಕರಣದಲ್ಲಿ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿ ಬಿದ್ದ ಪೆರುವಾಯಿ ಗ್ರಾ.ಪಂ ಅಧ್ಯಕ್ಷೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ನಫೀಸಾ ಅವರನ್ನು ಕಾಂಗ್ರೆಸ್ ಪಕ್ಷದಿಂದ ವಜಾಮಾಡಬೇಕು. ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಬೇಕು ಎಂದು ಪೆರುವಾಯಿ ಬಿಜೆಪಿ ಶಕ್ತಿಕೇಂದ್ರ ಆಗ್ರಹಿಸಿದೆ.


ಪೆರುವಾಯಿ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪಂಚಾಯತ್ ಅಧ್ಯಕ್ಷೆ ನಫೀಸಾ ಅವರು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ 2024-25ನೇ ಸಾಲಿನ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಗಳ ಕಾರ್ಯಕ್ರಮದಡಿ ಕೃಷಿ ಜಮೀನಿಗೆ ಕೊಳವೆ ಬಾವಿ ಹಾಕಿಸಿಕೊಳ್ಳಲು ರೂ.10ಸಾವಿರ ಲಂಚವನ್ನು ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಅವರು ಪೆರುವಾಯಿ ಗ್ರಾ.ಪಂ ಅಧ್ಯಕ್ಷೆ ಮತ್ತು ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಕಾರ್ಯದರ್ಶಿಯಾಗಿದ್ದು, ಪುತ್ತೂರು ಶಾಸಕರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅವರು ಸರಕಾರದ ಕೆಲವು ಅನುದಾನ ಮಂಜೂರಾತಿಗೆ ಪುತ್ತೂರು ಶಾಸಕರ ಶಿಫಾರಸ್ಸು ಪತ್ರ ಪಡೆದು ಗ್ರಾ.ಪಂ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮ ಮಂಜೂರು ಮಾಡಿಸುವುದು, 94ಸಿ ಹಕ್ಕು ಪತ್ರಕೊಡಿಸುವುದು, ಕೆಂಪುಕಲ್ಲಿನ ಗಣಿಗಾರಿಕೆ ಅಲ್ಲದೆ ಗ್ರಾಮ ಪಂಚಾಯತ್ ಕೆಲಸ ಕಾರ್ಯಗಳಲ್ಲಿ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಹಣ ಪಡೆಯುತ್ತಿರುವ ಆರೋಪ ಕೂಡಾ ಅವರ ಮೇಲೆ ಇದೆ. ಇದರ ಜೊತೆಗೆ ಕೊಳವೆ ಬಾವಿ ವಿಚಾರದಲ್ಲಿ ಸುಮಾರು 30ಕ್ಕೂ ಅಧಿಕ ಫಲಾನುಭವಿಗಳಲ್ಲಿ ಹಣದ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ ಬಾಲಕೃಷ್ಣ ಪೂಜಾರಿ ಅವರು ಆರೋಪ ಸ್ಥಾನದಲ್ಲಿರುವ ಅಧ್ಯಕ್ಷರು ತಕ್ಷಣ ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಮತ್ತು ಅವರನ್ನು ಪಕ್ಷದಿಂದ ವಜಾ ಮಾಡಬೇಕು. ಇದರ ಜೊತೆಗೆ ಪಂಚಾಯತ್‌ನಲ್ಲಿ ಅಧ್ಯಕ್ಷರಿಲ್ಲದೆ ಜನಸಾಮಾನ್ಯರಿಗೆ ತೊಂದರೆ ಆಗುವುದನ್ನು ತಪ್ಪಿಸಲು ಪಂಚಾಯತ್‌ಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವಂತೆ ಅಗ್ರಹಿಸಿದರು.


ಕಾಲ ಬುಡದಲ್ಲಿ ಲಂಚ, ಶಾಸಕರು ಮೌನ:
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಸರಕಾರಿ ಅಧಿಕಾರಿಗಳ ಲಂಚ, ಭ್ರಷ್ಟಾಚಾರದ ವಿರುದ್ಧ ಕಚೇರಿಗೆ ಹೋಗಿ ಮಾಧ್ಯಮದ ಎದುರು ಅಧಿಕಾರಿಗಳನ್ನು ಗದರಿಸಿ ಲಂಚದ ಹಣವನ್ನು ವಾಪಾಸು ಕೊಡಿಸುತ್ತಾ ಇದ್ದುದನ್ನು ಮಾಧ್ಯಮದ ಮೂಲಕ ನೋಡಿದ್ದೇವೆ. ಈಗ ಶಾಸಕರ ಕಾಲ ಬುಡದಲ್ಲಿ ಅವರ ಪಕ್ಷದವರು ಲಂಚ ಪಡೆದು ಲೋಕಾಯುಕ್ತ ಬಲಗೆ ಬಿದ್ದು ಎಲ್ಲಾ ಮಾಧ್ಯಮದಲ್ಲಿ ಬಂದಿದೆ. ಆದರೆ ಶಾಸಕರು ಈ ಕುರಿತು ಮೌನ ವಹಿಸಿದ್ದು, ಸಾರ್ವಜನಿಕರಲ್ಲಿ ಸಂಶಯಕ್ಕೆ ಎಡೆಮಾಡಿದೆ ಎಂದು ಬಾಲಕೃಷ್ಣ ಪೂಜಾರಿ ಅವರು ಹೇಳಿದರು.


ಪ್ರತಿಭಟನೆ ಎಚ್ಚರಿಕೆ:
ಲಂಚ ಪ್ರಕರಣದ ಆರೋಪಿ ಗ್ರಾ.ಪಂ ಅಧ್ಯಕ್ಷೆ ನಫೀಸಾ ಅವರು ನೈತಿಕತೆ ಇದ್ದರೆ ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಪಕ್ಷದಿಂದಲೂ ಅವರನ್ನ ವಜಾ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಪುಣಚ ಶಕ್ತಿಕೇಂದ್ರದ ಅಧ್ಯಕ್ಷ ರಾಜೇಶ್ ಬಾಳೆಕಲ್ಲು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪೆರುವಾಯಿ ಗ್ರಾ.ಪಂ ಉಪಾಧ್ಯಕ್ಷೆ ಲಲಿತಾ ಆಚಾರ್ಯ, ಪೆರುವಾಯಿ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಗೋಪಾಲ ಕೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here